ಕನ್ನಡಪ್ರಭ ವಾರ್ತೆ ಮುಧೋಳ
ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ. ಯಾವುದೇ ಆಮಿಷಕ್ಕೂ ಒಳಗಾಗದೆ, ನಿರ್ಭಯವಾಗಿ ಮುಕ್ತ ಹಾಗೂ ಪಾರದರ್ಶಕ ವಾತಾವರಣದಲ್ಲಿ ತಮ್ಮ ಮತ ಚಲಾಯಿಸಿ. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ಗಟ್ಟಿಗೊಳಿಸುವಂತೆ ಮಾಡಬೇಕು ಎಂದು ಬಾಗಲಕೋಟ ಜಿ.ಪಂ ಯೋಜನಾ ನಿರ್ದೇಶಕ ಶಶಿಕುಮಾರ ಶಿವಪೂಜೆ ಹೇಳಿದರು.ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಬಾಗಲಕೋಟ, ಮುಧೋಳ ಎಸ್.ಆರ್ ಕಂಠಿ ಕಾಲೇಜಿನ ಐಕ್ಯೂಎಸಿ ಕ್ರೈಟೇರಿಯಾ -7ರ ಅಡಿಯಲ್ಲಿ ತಾಲೂಕಿನ ಮೆಟಗುಡ್ಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಹಮ್ಮಿ ಕೊಂಡಿದ್ದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮತ ಚಲಾಯಿಸುವುದು ಕೇವಲ ನಿಮ್ಮ ಹಕ್ಕು ಮಾತ್ರವಲ್ಲ, ಅದು ದೇಶಕಟ್ಟುವ ಕರ್ತವ್ಯ ಕೂಡ. ಈ ಅಭಿಯಾನದಲ್ಲಿ ಎಲ್ಲ ಅರ್ಹ ಮತದಾರರು ಕೈ ಜೋಡಿಸಿ ಶೇ.100 ರಷ್ಟು ಮತದಾನಕ್ಕೆ ಮುಂದಾಗಬೇಕು ಎಂದರು.
ಮುಧೋಳ ಎಸ್.ಆರ್. ಕಂಠಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಮಲ್ಲಣ್ಣ ಜಿಗಬಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ. ಇದನ್ನು ತಾವೆಲ್ಲರೂ ಗಮನದಲ್ಲಿಟ್ಟುಕೊಂಡು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು.ಮೆಟಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಸಚಿನ ಶ್ಯಾಮಸುಂದರ ಪ್ರಾಸ್ತಾವಿಕವಾಗಿ ಮಾತನಾಡಿ, ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಎಲ್ಲ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಇದರ ಪ್ರಯೋಜನ ಪ್ರತಿಯೊಬ್ಬರು ಪಡೆಯಬೇಕು ಎಂದು ಮನವಿ ಮಾಡಿದರು.
ಐಕ್ಯೂಎಸಿ ಕ್ರೈಟೇರಿಯಾ-7ರ ಅಧ್ಯಕ್ಷ ಡಾ.ಸುರೇಶ ಮೋದಿ, ಸದಸ್ಯ ಪ್ರೊ.ಕೆ.ಎಸ್. ಮಾಲಾಪೂರ, ರವಿ ಗೌಡರ, ಎಸ್.ಪಿ.ಸಂಗಳಿ, ವಿ.ಎಸ್.ಮುನವಳ್ಳಿ, ಕೆ.ಕೆ.ಕಿತ್ತೂರ, ಪ್ರೀತಿ ಕರಡಿ, ಲಕ್ಷ್ಮೀ ಬಿರಾದಾರ, ಪಿಡಿಒ ಎಚ್.ಆರ್. ಬಿರಾದಾರ, ವಿ.ಎಂ.ಮಳಲಿ, ಗ್ರಾಮ ಲೆಕ್ಕಿಗ ರೇಣುಕಾ, ಎಂ.ಜಿ.ಮಂಗೊಳಿ ವೇದಿಕೆ ಮೇಲೆ ಇದ್ದರು. ಪ್ರೊ. ವೀರಣ್ಣ ಕಿತ್ತೂರ ಸ್ವಾಗತಿಸಿ, ನಿರೂಪಿಸಿದರು, ಪ್ರೊ.ಎಸ್.ಪಿ.ಸಂಗಳಿ ವಂದಿಸಿದರು.ನರೇಗಾ ಯೋಜನಾ ಕಾರ್ಮಿಕರು, ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಸ್ಪತ್ರೆಯ ರೋಗಿಗಳು, ಎಸ್.ಆರ್.ಕಂಠಿ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.