- ಮುತ್ತಿನಕೊಪ್ಪ, ಶೆಟ್ಕಿಕೊಪ್ಪ, ನರಸಿಂಹರಾಜಪುರದಲ್ಲಿ ಬೀದಿ ನಾಟಕಗಳ ಮೂಲಕ ಅರಿವು ಕಾರ್ಯಕ್ರಮ
ಅರಣ್ಯಕ್ಕೆ ವನ್ಯಜೀವಿಗಳು, ಔಷಧಿ ಸಸ್ಯಗಳು, ಗಿಡ ಮರಗಳೇ ಆಭರಣಗಳಿದ್ದಂತೆ ಎಂದು ನರಸಿಂಹರಾಜಪುರ ಉಪ ವಲಯ ಅರಣ್ಯಾಧಿಕಾರಿ ಗೌಸ್ ಮಹಿಯುದ್ದೀನ್ ತಿಳಿಸಿದರು.
ಗುರುವಾರ ಶೆಟ್ಟಿಕೊಪ್ಪದ ಸಿದ್ದಿವಿನಾಯಕ ಕಲಾ ಮಂದಿರದಲ್ಲಿ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿಗಳ ಆಶ್ರಯದಲ್ಲಿ ಅರಣ್ಯಕ್ಕೆ ಬೆಂಕಿ ಹಾಗೂ ಬೆಂಕಿಯಿಂದ ವನ್ಯ ಜೀವಿ ರಕ್ಷಣೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಬೀದಿ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರಣ್ಯಕ್ಕೆ ಬೆಂಕಿ ಬಿದ್ದರೆ ಔಷಧಿ ಸಸ್ಯಗಳು, ವನ್ಯ ಜವಿಗಳು, ಪ್ರಾಣಿ, ಪಕ್ಷಿಗಳು ನಾಶವಾಗಲಿದೆ. ಅರಣ್ಯಕ್ಕೆ ಬೆಂಕಿ ಬೀಳಲು ಶೇ. 90 ರಷ್ಟು ಮನುಷ್ಯರೇ ಕಾರಣವಾಗುತ್ತಾರೆ. ಬೆಂಕಿ ಹಾಕುವವರಿಗೆ ಮುಂದಿನ ಪೀಳಿಗೆ ಬಗ್ಗೆ ಅರಿವು ಇರುವುದಿಲ್ಲ. ಆದ್ದರಿಂದ ಬೆಂಕಿಯಿಂದ ಅರಣ್ಯ ರಕ್ಷಣೆ ಬಗ್ಗೆ ಅರಿವು ಮೂಡಿಸಲು ನರಸಿಂಹರಾಜಪುರ ಅಭಿನವ ಗಿರಿರಾಜ್ ನೇತೃತ್ವದ ಕಲಾ ತಂಡದಿಂದ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.ಹುಲಿ ಉಗುರು, ಆನೆದಂತ, ಕಾಡು ಕೋಣದ ಕೋಡುಗಳು ಸೇರಿದಂತೆ ಯಾವುದೇ ವನ್ಯ ಜೀವಿಗಳ ವಸ್ತುಗಳನ್ನು ಮನೆ ಯಲ್ಲಿ ಇಟ್ಟುಕೊಂಡರೆ ಅಪರಾಧವಾಗುತ್ತದೆ. ಆದ್ದರಿಂದ ಯಾವುದೇ ಮನೆಯಲ್ಲಿ ಇಂತಹ ವಸ್ತುಗಳು ಇದ್ದರೆ ತಕ್ಷಣ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಬೇಕು ಎಂದು ಸೂಚಿಸಿದರು.
ಕಡಹಿನಬೈಲು ಗ್ರಾಪಂ ಸದಸ್ಯ ಎ.ಬಿ.ಮಂಜುನಾಥ್ ಮಾತನಾಡಿ, ಅರಣ್ಯ ಇಲಾಖೆ ಕಾಡಿಗೆ ಬೆಂಕಿ ಬೀಳದಂತೆ ಜನರಿಗೆ ಅರಿವು ಮೂಡಿಸಲು ಬೀದಿ ನಾಟಕ ನಡೆಸುತ್ತಿರುವುದು ಒಳ್ಳೆಯದು.ಕೆಲವು ಬಾರಿ ಆಕಸ್ಮಿಕವಾಗಿ ಅರಣ್ಯಕ್ಕೆ ಬೆಂಕಿ ಬೀಳುತ್ತದೆ. ಕೆಲವು ಬಾರಿ ಉದ್ದೇಶಪೂರ್ವಕವಾಗಿ ಮನುಷ್ಯರೇ ಬೆಂಕಿ ಹಾಕುತ್ತಾರೆ. ಅಂತವರಿಗೆ ಪರಿಸರದ ಬಗ್ಗೆ ಅರಿವು ಇರುವುದಿಲ್ಲ ಎಂದರು.
ಸಭೆಯಲ್ಲಿ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಎಂ.ಜಗದೀಶ್, ಗ್ರಾಪಂ ಮಾಜಿ ಸದಸ್ಯ ಎಂ.ಮಹೇಶ್, ವನ ಪಾಲಕ ಮಂಜಯ್ಯ ಇದ್ದರು.