ಮಳೆಯಿಂದ ಪೂರ್ಣ ಪ್ರಮಾಣದ ಮನೆ ಹಾನಿಗೆ ₹ 1.2 ಲಕ್ಷ ಪರಿಹಾರದ ಜೊತೆಗೆ ಮನೆ : ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Aug 06, 2024, 12:40 AM ISTUpdated : Aug 06, 2024, 12:51 PM IST
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು | Kannada Prabha

ಸಾರಾಂಶ

ಮಳೆಯಿಂದ ಸಂಪೂರ್ಣ ಮನೆ ಹಾನಿ ಸಂಭವಿಸಿದ ಸಂತ್ರಸ್ತರಿಗೆ 1.2 ಲಕ್ಷ ಪರಿಹಾರದ ಜೊತೆಗೆ ಮನೆ ಒದಗಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 ಬೆಳಗಾವಿ :  ಮಳೆಯಿಂದ ಸಂಪೂರ್ಣ ಮನೆ ಹಾನಿ ಸಂಭವಿಸಿದ ಸಂತ್ರಸ್ತರಿಗೆ ₹1.2 ಲಕ್ಷ ಪರಿಹಾರದ ಜೊತೆಗೆ ಮನೆ ಒದಗಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಬಿ.ಎಸ್.ಯಡಿಯೂರಪ್ಪನವರು ಸಂಪೂರ್ಣ ಮನೆ ಹಾನಿಗೆ ₹5 ಲಕ್ಷ ಪರಿಹಾರ ಘೋಷಿಸಿದ್ದರು. ಆದರೆ, ಈ ನೆರವಿನ ದುರುಪಯೋಗವಾಯಿತು. ಹಲವರಿಗೆ ಮೊದಲನೇ ಕಂತು ಮಾತ್ರ ಬಿಡುಗಡೆಯಾಗಿ, ಎರಡು ಹಾಗೂ ಮೂರನೇ ಕಂತಿನ ಪರಿಹಾರ ಈವರೆಗೂ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ₹1.2 ಲಕ್ಷ ಪರಿಹಾರ ಹಾಗೂ ಮನೆ ನೀಡುವ ನಿರ್ಧಾರ ಮಾಡಿದೆ ಎಂದು ಸ್ಪಷ್ಟಪಡಿಸಿದರು.

ಜನರ ಸಹಕಾರವಿದ್ದರೆ ಪದೇ ಪದೆ ಮುಳುಗಡೆಯಾಗುವ ಹಳ್ಳಿಗಳ ಸ್ಥಳಾಂತರ ಮಾಡುವ ಮೂಲಕ ಶಾಶ್ವತ ಪರಿಹಾರ ಒದಗಿಸಲು ಚಿಂತನೆ ಮಾಡಲಾಗುವುದು. ರಾಜ್ಯದ ಹಲವೆಡೆ ಮಳೆಯಿಂದ ಹಾನಿಯಾಗಿದೆ. ಎಲ್ಲ ಕಡೆ ಪರಿಹಾರ ಕೆಲಸ ಪ್ರಾರಂಭಿಸಲಾಗಿದೆ. ಮೈಸೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಭೇಟಿ ನೀಡಲಾಗಿದ್ದು, ಮೃತಪಟ್ಟ ಜನ ಹಾಗೂ ಜಾನುವಾರುಗಳಿಗೆ ಕೂಡಲೇ ಪರಿಹಾರ ವಿತರಿಸಲಾಗುತ್ತಿದೆ. ಬಿದ್ದ ಮನೆಗಳಿಗೆ ಪರಿಹಾರ, ವಿದ್ಯುತ್‌ ಕಂಬ, ಟ್ರಾನ್ಸ್‌ಫಾರ್ಮರ್‌ಗಳ ದುರಸ್ತಿ ಮೊದಲಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಬೆಳಗಾವಿಯಲ್ಲಿ ಕಳೆದ 42 ದಿನದಿಂದ ನಿರಂತರ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿಗಳಿಗೂ ರಜೆ ಘೋಷಣೆ ಮಾಡುವಂತೆ ಸೂಚಿಸಲಾಗಿದೆ. ಕಟ್ಟೆಚ್ಚರ ವಹಿಸಲು ಸೂಚನೆ:

ಮುಂದಿನ ವಾರ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಇದಕ್ಕಾಗಿ ಕಂದಾಯ, ವಿಪತ್ತು ನಿರ್ವಹಣೆ, ಅರಣ್ಯ ಇಲಾಖೆ, ಇಂಧನ, ನೀರಾವರಿ ಸೇರಿದಂತೆ ಎಲ್ಲ ಇಲಾಖೆಗಳು ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಗೃಹಲಕ್ಷ್ಮೀ ಮೂರು ತಿಂಗಳಿನಿಂದ ಬಾಕಿ ಇದೆ ಎಂದು ಕೇಳಿದ್ದಕ್ಕೆ ಜುಲೈ ತಿಂಗಳಿನದ್ದು ಮಾತ್ರ ಬಾಕಿ ಇದೆ. ಅದನ್ನೂ ಶೀಘ್ರವೇ ವಿತರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಆಸೀಫ್‌ ಸೇಠ್‌, ವಿಶ್ವಾಸ ವೈದ್ಯ ಇತರರು ಉಪಸ್ಥಿತರಿದ್ದರು.

ಮುಡಾ ಪ್ರಕರಣ ಯಶಸ್ವಿಯಾಗಿ ಎದುರಿಸ್ತೇವೆ:

ಬೆಳಗಾವಿ: ಮುಡಾ ಪ್ರಕರಣವನ್ನು ಕಾನೂನಾತ್ಮಕವಾಗಿ ಹಾಗೂ ರಾಜಕೀಯವಾಗಿ ಯಶಸ್ವಿಯಾಗಿ ಎದುರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದ ಕುರಿತು ರಾಜ್ಯಪಾಲರು ನೀಡಿರುವ ಶೋಕಾಸ್‌ ನೋಟಿಸ್‌ ಹಿಂತೆಗೆದುಕೊಳ್ಳಬೇಕು. ರಾಜ್ಯಪಾಲರಿಗೆ ಟಿ.ಜೆ.ಅಬ್ರಹಾಂ ನೀಡಿರುವ ದೂರನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದ್ದೇವೆ. ಈ ಕುರಿತಾಗಿ ರಾಜ್ಯಪಾಲರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡುವುತ್ತೇವೆ ಎಂದು ಹೇಳಿದ ಅವರು, ಸುಳ್ಳನ್ನು ಸತ್ಯ ಮಾಡುವುದರಲ್ಲಿ ಬಿಜೆಪಿ ಮತ್ತು ಆರ್.ಎಸ್.ಎಸ್‌ನವರು ನಿಸ್ಸೀಮರು. ಅವರಿಗೆ ಟ್ರೈನಿಂಗ್ ಆಗಿದೆ. ಅವರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ