ಶಿವಕುಮಾರ ಕುಷ್ಟಗಿ
ಗದಗ:ಗದಗ ಜಿಲ್ಲಾಡಳಿತ ಎಷ್ಟೊಂದು ಜಿಡ್ಡುಗಟ್ಟಿದೆ ಎಂದರೆ ಜಿಲ್ಲೆಯ ಮುಕುಟದಂತಿರುವ, ಜಿಲ್ಲಾ ಉಸ್ತುವಾರಿ ಸಚಿವರ ಕನಸಿನ ಕೂಸಾದ ಜಿಲ್ಲಾ ರಂಗ ಮಂದಿರದ ವಿದ್ಯುತ್ ಬಿಲ್ ಪಾವತಿಸದೇ ಇರುವ ಹಿನ್ನೆಲೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿದ್ದು, ಜಿಲ್ಲಾ ರಂಗ ಮಂದಿರವೀಗ ಕತ್ತಲಲ್ಲಿ ಮುಳುಗಿದೆ.
₹8.20 ಕೋಟಿ ವೆಚ್ಚದಲ್ಲಿ ನಿರ್ಮಾಣ: ಗದಗ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಖಾಸಗಿ ಲೇ ಔಟ್ ನಲ್ಲಿ ₹8.20 ಕೋಟಿ ವೆಚ್ಚದಲ್ಲಿ ಬೃಹತ್ ರಂಗ ಮಂದಿರವನ್ನು ನಿರ್ಮಿತಿ ಕೇಂದ್ರದ ಮೂಲಕ ನಿರ್ಮಿಸಲಾಗಿದೆ. ಅದರ ನಿರ್ಮಾಣದಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೊಸತನ ಮತ್ತು ಅತ್ಯಾಧುನಿಕ ಸೌಲಭ್ಯ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2023 ರ ಜೂನ್ ನಲ್ಲಿ ಉದ್ಘಾಟನೆ: ಬೆಂಗಳೂರು ಹೊರತುಪಡಿಸಿದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಎಲ್ಲಿಯೂ ಇರದ ಸೌಲಭ್ಯ ಹೊಂದಿರುವ ಜಿಲ್ಲಾ ರಂಗ ಮಂದಿರ (ಭೀಮಸೇನ ಜೋಶಿ ರಂಗಮಂದಿರ) ಜೂ.2023ರಲ್ಲಿ ಉದ್ಘಾಟನೆಯಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಹಲವಾರು ಸರ್ಕಾರಿ, ಖಾಸಗಿ ಕಾರ್ಯಕ್ರಮಗಳು ಜರುಗಿವೆ. ಅದರ ಹಣವು ಕೂಡಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂದಾಯವಾಗಿದೆ, ಆದರೂ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ.
₹1.80 ಲಕ್ಷ ವಿದ್ಯುತ್ ಬಿಲ್ ಬಾಕಿ: ಜಿಲ್ಲಾ ರಂಗ ಮಂದಿರದಲ್ಲಿ ಬಳಕೆ ಮಾಡಿರುವ ವಿದ್ಯುತ್ ಶುಲ್ಕ (10 ತಿಂಗಳ ಬಾಕಿ) ₹1.80 ಲಕ್ಷ ಬಾಕಿ ಇದೆ. ಈ ವಿಷಯವಾಗಿ ಹೆಸ್ಕಾಂ ಅಧಿಕಾರಿಗಳು ಹಲವಾರು ಬಾರಿ ಕಟ್ಟಡ ನಿರ್ಮಿಸಿರುವ ನಿರ್ಮಿತಿ ಇಲಾಖೆಗೆ, ಮೂಲ ಇಲಾಖೆಯಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ತಿಳಿಸಿದರೂ ಯಾರೂ ಹಣ ಪಾವತಿಸದೇ ಇದ್ದಾಗ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದಾರೆ.
ಅಲ್ಪ ಅವಧಿಯಲ್ಲಿ ಬೇಡವಾದ ಕೂಸು: ಜಿಲ್ಲಾ ರಂಗಮಂದಿರ ಉದ್ಘಾಟನೆಯಾದ ನಂತರ ಅದರ ಅಧಿಕೃತ ನಿರ್ವಹಣೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯದ್ದು, ಉದ್ಘಾಟನೆ ನಂತರ ಹಲವಾರು ಸರ್ಕಾರಿ, ಖಾಸಗಿ ಕಾರ್ಯಕ್ರಮ ನಡೆಸಿ ಅದರಿಂದ ಬಂದ ಹಣವನ್ನು ಅವರೇ ಭರ್ತಿ ಮಾಡಿಸಿಕೊಂಡಿದ್ದಾರೆ. ಆದರೆ ವಿದ್ಯುತ್ ಬಿಲ್ ಮಾತ್ರ ನಿರ್ಮಿತಿ ಕೇಂದ್ರದವರು ತುಂಬಬೇಕು ಎಂದು ಹೇಳುತ್ತಿದ್ದಾರೆ. ಅದೇಗೆ ಸಾಧ್ಯ, ಜಿಲ್ಲಾ ರಂಗ ಮಂದಿರದಲ್ಲಿ ಅತ್ಯಂತ ಬೆಲೆ ಬಾಳುವ ವಸ್ತುಗಳನ್ನು ಅಳವಡಿಸಲಾಗಿದೆ. ಈಗಲೂ ನಿತ್ಯ ವಾಚ್ ಮನ್ ಸೇರಿದಂತೆ ಅದರ ನಿರ್ವಹಣೆ ನಾವೇ ಮಾಡುತ್ತಿದ್ದೇವೆ ಎನ್ನುತ್ತಾರೆ ನಿರ್ಮಿತಿ ಕೇಂದ್ರದ ಅಧಿಕಾರಿಗಳು. ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ, 3ನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ, ಕಂಪೌಂಡ್ ಗೋಡೆ ನಿರ್ಮಾಣವಾಗಬೇಕು ಅಲ್ಲಿಯವರೆಗೂ ನಮ್ಮ ಇಲಾಖೆಗೆ ಪಡೆದುಕೊಳ್ಳಲು ಬರುವುದಿಲ್ಲ ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು. ಎರಡು ಇಲಾಖೆಗಳ ತಿಕ್ಕಾಟದ ನಡುವೆ ಜಿಲ್ಲಾ ರಂಗ ಮಂದಿರ ಅತ್ಯಲ್ಪ ಅವಧಿಯಲ್ಲಿಯೇ ಬೇಡವಾದ ಕೂಸಿನಂತಾಗಿರುವುದು ವಿಪರ್ಯಾಸ.
ಪತ್ರ ವ್ಯವಹಾರದಲ್ಲಿ ಕಾಲಹರಣ: ಜಿಲ್ಲಾ ರಂಗಮಂದಿರ ಹಸ್ತಾಂತರ ವಿಷಯದಲ್ಲಿ ಎರಡೂ ಇಲಾಖೆಗಳ ಅಧಿಕಾರಿಗಳು ಕಾನೂನಿನಲ್ಲಿರುವ ಲೋಪಗಳನ್ನು ಬಳಕೆ ಮಾಡಿಕೊಂಡು ಪರಸ್ಪರ ಪತ್ರ ವ್ಯವಹಾರ ಮಾಡುತ್ತಲೇ ಕಾಲ ಹರಣ ಮಾಡಿದ ಹಿನ್ನೆಯಲ್ಲಿ ಈ ಸಮಸ್ಯೆ ಸೃಷ್ಟಿಯಾಗಿದೆ. ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಜಿಲ್ಲಾರಂಗ ಮಂದಿರಕ್ಕೆ ಬೆಳಕು ಕಲ್ಪಿಸಬೇಕಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಿರ್ಮಿತಿ ಕೇಂದ್ರ, ಹೆಸ್ಕಾಂ ಅಧಿಕಾರಿಗಳನ್ನು ಕರೆಸಿ ಯಾವ ಕಾರಣಕ್ಕೆ ಹೀಗಾಗಿದೆ ಎಂಬುದನ್ನು ಚರ್ಚಿಸಿ ಸಮಸ್ಯೆ ಸರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.