ಕನ್ನಡಪ್ರಭ ವಾರ್ತೆ ಶಿರಾ ತಾಲೂಕಿನ ಗಾಣದಹುಣಸೆ ಗ್ರಾಮದ ಬಳಿ ಖಾಸಗಿ ಜಮೀನಿನಲ್ಲಿರುವ ಆಶ್ರಯ ನಿರಾಶ್ರಿತರ ವೃದ್ಧಾಶ್ರಮಕ್ಕೆ ಶಿರಾ ಬಳಿ 1 ಎಕರೆ ಜಮೀನು ನೀಡಿ ಕಟ್ಟಡವನ್ನೂ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು. ತಮ್ಮ 75ನೇ ಹುಟ್ಟು ಹಬ್ಬದ ಪ್ರಯುಕ್ತ ನಗರಸಭಾ ಸದಸ್ಯರಾದ ಧ್ರುವಕುಮಾರ್ ವೃದ್ಧಾಶ್ರಮದ ವಾಸಿಗಳಿಗೆ ಸಿಹಿ ಊಟದ ವ್ಯವಸ್ಥೆ ಹಾಗೂ ದಿನಸಿ ಪದಾರ್ಥಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ವೃದ್ಧಾಶ್ರಮದಲ್ಲಿರುವ ನಿರಾಶ್ರಿತರನ್ನು ನೋಡಿದರೆ ಮನುಷ್ಯನ ಜನ್ಮ ಇಷ್ಟೆ ಎಂದು ಅರಿವಾಗುತ್ತದೆ. ಇಂತಹ ಕಾರ್ಯ ಮಾಡುತ್ತಿರುವ ವೃದ್ಧಶ್ರಮದ ಮುಖ್ಯಸ್ಥರಾದ ಗೀತಾ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಶಿರಾ ಬಳಿ ೧ ಎಕರೆ ಜಮೀನು ನೀಡಿ ಕಟ್ಟಡ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳುತ್ತೇನೆ ಎಂದರು. ನಗರಸಭಾ ಸದಸ್ಯ ವಿ.ಜಿ.ಧ್ರುವಕುಮಾರ್ ಮಾತನಾಡಿ ಆಶ್ರಯ ನಿರಾಶ್ರಿತರ ವೃದ್ದಾಶ್ರಮ ಶಿರಾ ನಗರ ಪ್ರದೇಶದಿಂದ ಸುಮಾರು 18 ರಿಂದ 20 ಕಿ.ಮೀ. ದೂರವಿರುವುದರಿಂದ ಆಶ್ರಮದಲ್ಲಿ ಇರುವ ನಿರಾಶ್ರಿತರಿಗೆ ಅನಾರೋಗ್ಯವಾದಂತಹ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಯಾವುದೇ ಆಸ್ಪತ್ರೆ ಇಲ್ಲ ಹಾಗೂ ಅಗತ್ಯ ಸೇವೆಗಳಿಗೆ ತೊಂದರೆಯಾಗುತ್ತಿದೆ. ಇದನ್ನು ಪರಿಗಣಿಸಿ ಭೂಮಿ ನೀಡುವ ಭರವಸೆ ನೀಡಿರುವ ಶಾಸಕರಿಗೆ ಧನ್ಯವಾದ ತಿಳಿಸಿದರು.