ಸರ್ಕಾರಿ ನೌಕರಿ ಕೊಡಿಸುವುದಾಗಿ ₹1 ಕೋಟಿ ವಂಚನೆ

KannadaprabhaNewsNetwork |  
Published : Apr 19, 2026, 02:30 AM IST
ನೋಟುಗಳು | Kannada Prabha

ಸಾರಾಂಶ

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ಶಿರಸಿ ಮೂಲದ ವಾಸೀಂ ಚೌಧರಿ ಎಂಬಾತ ಜಿಲ್ಲೆಯ ಹಲವು ನಿರುದ್ಯೋಗಿಗಳಿಂದ ಒಂದು ಕೋಟಿ ರುಪಾಯಿಗೂ ಅಧಿಕ ಹಣ ಪಡೆದು ವಂಚಿಸಿದ್ದಾರೆ ಎಂದು ಬ್ಯಾಡಗಿ ಮೂಲದ ಕರಬಸಪ್ಪ ಎಲಿ ಆರೋಪಿಸಿದರು.

ಹಾವೇರಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ಶಿರಸಿ ಮೂಲದ ವಾಸೀಂ ಚೌಧರಿ ಎಂಬಾತ ಜಿಲ್ಲೆಯ ಹಲವು ನಿರುದ್ಯೋಗಿಗಳಿಂದ ಒಂದು ಕೋಟಿ ರುಪಾಯಿಗೂ ಅಧಿಕ ಹಣ ಪಡೆದು ವಂಚಿಸಿದ್ದಾರೆ ಎಂದು ಬ್ಯಾಡಗಿ ಮೂಲದ ಕರಬಸಪ್ಪ ಎಲಿ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸವಣೂರಿನಲ್ಲಿ ಕೆಲಸ ಮಾಡುತ್ತಿದ್ದು, ಸವಣೂರ ತಾಲೂಕಿನ ನದಿನೀರಲಗಿ ಗ್ರಾಮದ ಸರ್ಕಾರಿ ಉರ್ದು ಶಾಲೆಯ ಶಿಕ್ಷಕಿ ಸಮೀನಾ ಶೇಖ್ ಎಂಬುವರ ಪರಿಚಯವಾಗಿತ್ತು. ಅವರ ಮೂಲಕ 2018ರಲ್ಲಿ ಅವರ ಪತಿ ವಾಸೀಂ ಚೌಧರಿ ಪರಿಚಯವಾಗಿತ್ತು. ನಾನು ರಾಜಕಾರಣಿಯಾಗಿದ್ದು, ಏನಾದರೂ ಸಮಸ್ಯೆಗಳು ಇದ್ದಲ್ಲಿ ನನ್ನನ್ನು ಭೇಟಿ ಮಾಡಿ. ನಾನು ಹುಬ್ಬಳ್ಳಿಯ ಹಿಂಡಸಗೇರಿ ಕುಟುಂಬದವನು ಎಂದು ಹೇಳಿದ್ದರು. ನಂತರ ಆತ್ಮೀಯತೆ ಬೆಳೆಯಿತು. ಯಾವುದಾದರೂ ಕೆಲಸ ಕೊಡಿಸಿ ಎಂದು ಕೇಳಿಕೊಂಡಿದ್ದೆ. ಆಗ ರೇಲ್ವೆ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದರು. ವಾಸೀಂ ಹೆಂಡತಿ ಸಮೀನಾ ಶೇಖ್, ಸವಣೂರ ತಾಲೂಕಿನ ನದಿ ನೀರಲಗಿ ಗ್ರಾಮದ ಸರ್ಕಾರಿ ಉರ್ದು ಶಾಲೆಯ ಶಿಕ್ಷಕ ರವಿ ಬಾರ್ಕಿ ಹಾಗೂ ವಾಸೀಂ ಸ್ನೇಹಿತ ಅನೀಸ್ ತಹಸೀಲ್ದಾರ್ ಅವರ ಮೂಲಕ ಹಂತ ಹಂತವಾಗಿ 5 ಲಕ್ಷ ರು. ಪಡೆದಿದ್ದರು. ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಕೆಲಸ ಇವೆ. ನಿಮ್ಮ ಸ್ನೇಹಿತರಿದ್ದರೆ ತಿಳಿಸಿ ಅವರಿಗೂ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ, ನನ್ನ ಐವರು ಸ್ನೇಹಿತರಿಂದಲೂ ಲಕ್ಷಾಂತರ ರು. ಕೊಡಿಸಿದ್ದೆ ಎಂದರು. ನಂತರ ಕೆಲಸದ ಬಗ್ಗೆ ಕೇಳಿದಾಗ ವಾಸೀಂ ಅವರು ನಿಮ್ಮ ಕೆಲಸದ ಸಲುವಾಗಿ ಬೆಂಗಳೂರು, ದೆಹಲಿಯಲ್ಲಿ ಓಡಾಡುತ್ತಿದ್ದೇನೆ ಎಂದು ಕಾಲಹರಣ ಮಾಡುತ್ತಿದ್ದರು. ತಿಂಗಳಿಗೆ ಒಂದು ಸಿಮ್ ಕಾರ್ಡ್ ಬದಲಾಯಿಸುತ್ತಿದ್ದರು. ಒಮ್ಮೆ ವಿಧಾನಸೌಧ, ವಿಕಾಸಸೌಧಕ್ಕೆ ಕರೆದುಕೊಂಡು ಹೋಗಿ ನಿಮ್ಮ ಕೆಲಸ ಇಲ್ಲೇ ಆಗುತ್ತದೆ. ನಿಮ್ಮ ಹೆಸರು ಆಯ್ಕೆ ಪಟ್ಟಿಯಲ್ಲಿ ಇದೆ ಎಂದು ನಕಲಿ ಆಯ್ಕೆ ಪಟ್ಟಿ ತೋರಿಸಿದ್ದ. ಬಳಿಕ ಕೋವಿಡ್, ಇತರ ಕಾರಣ ಹೇಳಿ ವಂಚಿಸಿದ್ದಾನೆ ಎಂದು ದೂರಿದರು. ನೊಂದ ಕುಟುಂಬಗಳ ಮಹಿಳೆಯರು ಮಾತನಾಡಿ, ನೌಕರಿ ಆಸೆಗಾಗಿ ನಮ್ಮ ಸಹೋದರರು, ಮಕ್ಕಳು ಸಾಲ ಮಾಡಿ, ಚಿನ್ನ ಅಡ ಇಟ್ಟು ಲಕ್ಷಾಂತರ ರು. ಕೊಟ್ಟು ವಂಚನೆಗೆ ಒಳಗಾಗಿದ್ದಾರೆ. ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿರುವ ದಾಖಲೆಗಳು ಇವೆ. ದಯವಿಟ್ಟು ಸರ್ಕಾರ, ಪೊಲೀಸರು ನಮಗೆ ನ್ಯಾಯ ಕೊಡಿಸಬೇಕು. ನಮ್ಮ ಹಣ ವಾಪಸ್ ಕೊಡಿಸಬೇಕು ಎಂದು ಅಳಲು ತೋಡಿಕೊಂಡರು. ಸುದ್ದಿಗೋಷ್ಠಿಯಲ್ಲಿ ವಂಚನೆಗೀಡಾದ ನಾಜರೀನ್, ಸಿಮ್ರನ್, ಶಾಹೀನ್ ಬಾನು, ಮೊಹಿಸಿನ್, ಮೊಹಮ್ಮದ್ ಅಲಿ, ಇತರರಿದ್ದರು. ಶಹರ ಠಾಣೆಯಲ್ಲಿ ಎಫ್‌ಐಆರ್: ನಾನು, ನನ್ನ ಐವರು ಸ್ನೇಹಿತರು ಸೇರಿದಂತೆ ಹಲವು ಜನರಿಗೆ ನೌಕರಿ ಕೊಡಿಸುವುದಾಗಿ ನಂಬಿಸಿ ವಾಸೀಂ ಚೌಧರಿ ₹95,50,000 ಪಡೆದು ವಂಚಿಸಿದ್ದಾನೆ ಎಂದು ಜನವರಿ 21, 2026ರಲ್ಲಿ ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ವಾಸೀಂ, ಸಮೀನಾ ಶೇಖ್, ರವಿ ಬಾರ್ಕಿ ಹಾಗೂ ಅನೀಶ್ ತಹಸೀಲ್ದಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಸಮಗ್ರವಾಗಿ ತನಿಖೆ ನಡೆಸಿ, ನಮಗೆ ನ್ಯಾಯ ಕೊಡಿಸಬೇಕು ಎಂದು ಕರಬಸಪ್ಪ ಎಲಿ ಹಾಗೂ ನೊಂದ ಕುಟುಂಬಗಳ ಮಹಿಳೆಯರು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕಗಿರಿಯಲ್ಲಿ ಮಧ್ಯರಾತ್ರಿ ದಾಳಿಂಬೆ ಕಳ್ಳತನ
ಕನಕಗಿರಿ ಜನತೆಯಲ್ಲಿ 5ನೇ ಉತ್ಸವದ ಸಂಭ್ರಮ