ಕನ್ನಡ ಪ್ರಭ ವಾರ್ತೆ ಕುಣಿಗಲ್ತಾಲೂಕಿನ ಮಂಗಳ ಜಲಾಶಯದಲ್ಲಿ ಮಂಗಳವಾರ ತಡರಾತ್ರಿ ಏರಿಯಲ್ಲಿ ( ತೂಬು) ನೀರಿನ ಸೋರಿಕೆ ಉಂಟಾಗಿ 1 ಕ್ಯೂಸೆಕ್ಸ್ ನೀರು ಪೋಲಾಗಿದೆ. ತಡರಾತ್ರಿ ಸುಮಾರು 2 ಗಂಟೆಗೆ ನಡೆದಿರುವ ಘಟನೆಯನ್ನು ರೈತರೋರ್ವರು ಅಧಿಕಾರಿಗಳ ಗಮನಕ್ಕೆ ತಂದಿದ್ದರಿಂದ ರಾತ್ರಿಗೆ ಅಧಿಕಾರಿಗಳ ತಂಡ ಜಲಾಶಯಯಕ್ಕೆ ಆಗಮಿಸಿ ನೀರು ಪೋಲಾಗದಂತೆ ತಡೆಯುವ ಪ್ರಯತ್ನ ಮಾಡಿದ್ದಾರೆ. ಬುಧವಾರ ಮಧ್ಯಾಹ್ನ ಕೆಆರ್‌ಎಸ್‌ನಿಂದ ಬಂದ ಮಹೇಶ್ ಮತ್ತು ಅವರ ತಂಡ ಸ್ಥಳೀಯ ಅಧಿಕಾರಿಗಳು ಹಾಗೂ ರೈತರ ನೆರವಿನಿಂದ ನೀರಿನ ಹರಿವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಶಾಸಕ ಡಾ.ರಂಗನಾಥ್ ಸೇರಿದಂತೆ ಹಲವಾರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದರು. ನಾಗಿನಿ ನದಿಗೆ ಅಡ್ಡಲಾಗಿ 1961 ರಲ್ಲಿ ಜಲಾಶಯ ನಿರ್ಮಾಣವಾಗಿದ್ದು. ಡ್ಯಾಂ ನೀರಿನ ಶೇಖರಣಾ ಸಾಮರ್ಥ್ಯ 540 ಎಂಸಿಎಫ್ ಟಿ ಆಗಿದ್ದು 940ಎಕ್ಟೇರ್ ಪ್ರದೇಶದ ಅಚ್ಚುಕಟ್ಟು ಪ್ರದೇಶದಲ್ಲಿ 19 ಹಳ್ಳಿಗಳ ರೈತರ ವ್ಯವಸಾಯಕ್ಕೆ ನೀರು ಒದಗಿಸುತ್ತಿದೆ. ಈ ಜಲಾಶಯ ಕಳೆದ 56 ವರ್ಷದಲ್ಲಿ ಮಂಗಳ ಡ್ಯಾಂ 24 ಸಲ ಹಾಗೂ ಕಳೆದ 20 ವರ್ಷದಲ್ಲಿ 4 ಬಾರಿ ಮಾತ್ರ ತುಂಬಿದೆ. ಜಲಾಶಯದಲ್ಲಿನ ತೂಬಿನ ಪಕ್ಕದಲ್ಲಿನ ಕಲ್ಲು ತುಂಡಾದ ಹಿನ್ನೆಲೆಯಲ್ಲಿ ನೀರು ಹರಿದಿದೆ. ನೀರಿನ ಒತ್ತಡವನ್ನು ಕಡಿಮೆ ಮಾಡಲು ಕ್ರಶ್ ಗೇಟ್‌ಗಳನ್ನು ಎತ್ತಬೇಕಾಗಿತ್ತು. ಆದರೆ ಹಲವಾರು ವರ್ಷಗಳಿಂದ ನಿರ್ವಹಣೆ ಇಲ್ಲದೇ ಇದ್ದ ಕಾರಣದಿಂದ ಹಾಗೂ ವಿದ್ಯುತ್ ಸಂಪರ್ಕ ಹಾಳಾಗಿದ್ದರಿಂದ ಸಿಬ್ಬಂದಿ ರಾತ್ರಿಯಿಡಿ ಪ್ರಯತ್ನದಲ್ಲಿಯೇ ಇದ್ದರು. ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಡಿ ನಾಗರಾಜಯ್ಯ, ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್ ಭೇಟಿ ನೀಡಿ ಅಧಿಕಾರಿಗಳು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಎಂಜಿನಿಯರ್ ಫಣಿರಾಜ್ , ಕೆ ಎಂ ಬಿಂದಿ , ಎಇಇ ರುದ್ರೇಶ್, ವೀಣಾ ಸೇರಿದಂತೆ ಹಲವಾರು ಅಧಿಕಾರಿಗಳು ಇದ್ದರು.