ಭಟ್ಕಳ: ತಾಲೂಕಿನಾದ್ಯಂತ ಭಾನುವಾರ ಬೆಳಗಿನ ಜಾವ ಮಳೆ ಸುರಿದಿದ್ದು, ಬಿಸಿಯಾಗಿದ್ದ ವಾತಾವರಣ ತಂಪಾಗಿಸಿದೆ. ಒಂದು ತಾಸಿಗೂ ಅಧಿಕ ಸಮಯ ಮಳೆ ಸುರಿದಿದ್ದರಿಂದ ವಾರದ ಸಂತೆ ಮಾರುಕಟ್ಟೆ ಸೇರಿದಂತೆ ವಿವಿಧ ಕಡೆ ಅಸ್ತವ್ಯಸ್ತವಾಯಿತು. ಪಟ್ಟಣದ ವೃತ್ತದಲ್ಲಿ ಹೆದ್ದಾರಿ ಮೇಲೆಯೇ ಮಳೆ ನೀರು ನಿಂತು ತೊಂದರೆ ಉಂಟಾಯಿತು.
ಕಳೆದ ಒಂದು ವಾರದಿಂದ ಭಟ್ಕಳದಲ್ಲಿ ಬಿಸಿಲ ತಾಪಮಾನ ಹೆಚ್ಚಾಗಿ ಸೆಕೆ ತೀವ್ರಗೊಂಡಿತ್ತು. ಬಿರು ಬಿಸಿಲಿನಿಂದಾಗಿ ಹಗಲು ಹೊತ್ತು ಮನೆಯಿಂದ ಹೊರಬೀಳಲು ಕಷ್ಟ ಆಗುತ್ತಿತ್ತು. ಹದಿನೈದು ದಿನಗಳ ಹಿಂದೆ ಒಂದು ತಾಸು ಭಾರೀ ಸುರಿದು ಹೋದ ಮಳೆ ನಂತರ ಮಾಯವಾಗಿತ್ತು.ದಿನದಿಂದ ದಿನಕ್ಕೆ ಸೆಕೆಯ ಪ್ರಮಾಣ ತೀವ್ರಗೊಂಡಿದ್ದರಿಂದ ಜನತೆ ಮಳೆಯ ನಿರೀಕ್ಷೆಯಲ್ಲಿದ್ದರು. ಬಾವಿಯಲ್ಲಿ , ಹೊಳೆ, ಕೆರೆಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡಿದ್ದರಿಂದ ಎಲ್ಲೆಡೆ ನೀರಿಗೆ ಕೊರತೆ ಉಂಟಾಗಿತ್ತು.
ನೀರಿಲ್ಲದೇ ಅಡಕೆ ತೋಟಗಳು ಒಣಗಲಾರಂಭಿಸಿತ್ತು. ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ತಾಲೂಕು ಆಡಳಿತ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಿದೆ. ಸರಿಯಾಗಿ ಮಳೆ ಬಂದರೆ ಮಾತ್ರ ಕುಡಿಯುವ ನೀರಿನ ಬವಣೆ ನೀಗಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.ಭಾನುವಾರ ಬೆಳಗಿನ ಜಾವ ಸುರಿದ ಮಳೆ ಎಲ್ಲೆಡೆ ತಂಪಾಗಿಸಿದೆ. ಕಳೆದ ೨೪ ತಾಸಿನಲ್ಲಿ ೨೦.೮ ಮಿಮೀ ಮಳೆಯಾಗಿದ್ದು, ಇಲ್ಲಿಯ ತನಕ ಒಟ್ಟೂ ೯೧.೪ ಮಿಮೀ ಮಳೆಯಾದಂತಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಮೇ ೧೯ರ ತನಕ ಅತಿ ಕಡಿಮೆ ಮಳೆಯಾಗಿದ್ದು, ಇನ್ನು ಮುಂಗಾರು ಮಳೆಯ ಉತ್ತಮವಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಜನತೆ ಇದ್ದಾರೆ.ತಾಲೂಕಿನ ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಇನ್ನೂ ಮಳೆಗಾಲದ ಕೆಲಸಗಳು ಸಮರ್ಪವಾಗಿ ಆರಂಭವಾಗಿಲ್ಲ. ಗಟಾರದ ಹೂಳುಗಳನ್ನು ಇನ್ನೂ ತೆಗೆಯಿಸದೇ ಇರುವುದರಿಂದ ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ಹರಿದು ತೊಂದರೆ ಆಗುವ ಸಾಧ್ಯತೆ ಇದೆ. ತಾಲೂಕು ಆಡಳಿತ ಶೀಘ್ರದಲ್ಲಿ ಮಳೆಗಾಲದ ಪೂರ್ವಭಾವಿ ಕಾಮಗಾರಿ ಕೈಗೆತ್ತಿಕೊಳ್ಳಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಬೇಕಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದೆ. ಅದೇ ರೀತಿ ಹೊನ್ನಾವರದಲ್ಲೂ ಭಾನುವಾರ ಉತ್ತಮ ಮಳೆಯಾಗಿದೆ.