ಅಕ್ರಮ ಮದ್ಯ ಮಾರಾಟಕ್ಕೆ ₹1 ಲಕ್ಷ, ಜೂಜಾಟಕ್ಕೆ ₹ 25000 ದಂಡ!

KannadaprabhaNewsNetwork |  
Published : Aug 02, 2025, 12:00 AM IST
1ಕೆಕೆಆರ್3:ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಗ್ರಾಮಸ್ಥರು ಇಸ್ಪೀಟ್ ಎಲೆ, ಮಧ್ಯ ಖರೀಧಿಸಿ ಸುಟ್ಟ ರು.  | Kannada Prabha

ಸಾರಾಂಶ

ಗ್ರಾಮವನ್ನು ಮದ್ಯ ಹಾಗೂ ಜೂಜಾಟ ಮುಕ್ತ ಮಾಡಲು ಕುಕನೂರು ತಾಲೂಕಿನ ಬಿನ್ನಾಳದ ಗ್ರಾಮಸ್ಥರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ಮದ್ಯ ಅಕ್ರಮ ಮಾರಾಟ ಹಾಗೂ ಜೂಜಾಟ ಮಟ್ಟಹಾಕಲು ಪಣ ತೊಟ್ಟಿದ್ದಾರೆ.

ಕುಕನೂರು:

ಈ ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟಕ್ಕೆ ₹1 ಲಕ್ಷ, ಜೂಜಾಟಕ್ಕೆ ₹25000, ಮದ್ಯಸೇವಿಸಿ ಗ್ರಾಮದಲ್ಲಿ ಗಲಾಟೆ ಮಾಡಿದರೂ ಬೀಳುತ್ತೆ ದಂಡ!

ಗ್ರಾಮವನ್ನು ಮದ್ಯ ಹಾಗೂ ಜೂಜಾಟ ಮುಕ್ತ ಮಾಡಲು ತಾಲೂಕಿನ ಬಿನ್ನಾಳದ ಗ್ರಾಮಸ್ಥರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ಮದ್ಯ ಅಕ್ರಮ ಮಾರಾಟ ಹಾಗೂ ಜೂಜಾಟ ಮಟ್ಟಹಾಕಲು ಪಣ ತೊಟ್ಟಿದ್ದಾರೆ. ಹೀಗೆ ಬಂದ ಹಣವನ್ನು ದೇವಸ್ಥಾನಕ್ಕೆ ನೀಡಲು ತೀರ್ಮಾನಿಸಿದ್ದಾರೆ.

ಈ ಕುರಿತು ಗುರುವಾರ ಸಂಜೆ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರೆಲ್ಲ ಒಮ್ಮತದ ನಿರ್ಣಯ ತೆಗೆದುಕೊಂಡಿದ್ದಾರೆ. ಈ ಮೂಲಕ ಮದ್ಯ ಅಕ್ರಮ ಮಾರಾಟ ಮಾಡುವವರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಈ ನಿರ್ಣಯ ಉಲ್ಲಂಘಿಸಿ ಮಾರಾಟ ಮಾಡಿದರೆ ಅವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣವೂ ದಾಖಲಾಗುತ್ತದೆ. ಒಂದು ವೇಳೆ ಮಾರಾಟ ಮಾಡಿದ ವ್ಯಕ್ತಿಯನ್ನು ಠಾಣೆಯಿಂದ ಬಿಡಿಸಿಕೊಂಡು ಬಂದವನೂ ಸಹ ದಂಡ ಕಟ್ಟಲೇಬೇಕು. ಗ್ರಾಮದಲ್ಲಿ ಮದ್ಯ ಸೇವಿಸಿ ಗಲಾಟೆ ಮಾಡಿದರೆ ಅವನಿಗೂ ದಂಡ ವಿಧಿಸಲು ಗ್ರಾಮಸ್ಥರೆಲ್ಲರೂ ಸಮ್ಮತಿ ಸೂಚಿಸಿದ್ದಾರೆ. ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ಹಾಗೂ ಜೂಜಾಟವನ್ನು ಎಷ್ಟು ಬಾರಿ ಮಾಡುತ್ತಾರೆ ಅಷ್ಟು ಬಾರಿಯೂ ದಂಡ ಕಟ್ಟಲೇಬೇಕು.

ಮದ್ಯ ಹಂಚಿಕೆಯೇ ನಿಷೇಧ:

ಗ್ರಾಮಸ್ಥರ ದಂಡ ಪ್ರಯೋಗ ಕೇವಲ ಮದ್ಯ ಅಕ್ರಮ ಮಾರಾಟಕ್ಕೆ ಸೀಮಿತವಾಗಿಲ್ಲ. ಚುನಾವಣೆ ವೇಳೆ ಮದ್ಯ ನೀಡುವುದು, ಯಾರಾದರೂ ಮರಣ ಹೊಂದಿದಾಗ ಆ ಸ್ಥಳದಲ್ಲಿ ಮದ್ಯ ನೀಡುವುದು ಹಾಗೂ ಇಸ್ಪೀಟ್‌ ಆಟ, ಕಿರಾಣಿ ಅಂಗಡಿಯಲ್ಲಿ ಇಸ್ಪೀಟ್‌ ಎಲೆ ಮಾರಾಟ (ಮಾರಾಟ ಮಾಡಿದರೆ ₹ 25000 ದಂಡ), ಜಮೀನಿನ ಕೆಲಸಕ್ಕೆ ಕರೆದುಕೊಂಡು ಹೋದವರು ಮದ್ಯ ನೀಡಿದರೆ ದಂಡ ವಿಧಿಸಲು ನಿರ್ಣಯ ಕೈಗೊಳ್ಳಲಾಗಿದೆ.

ಇಸ್ಪೀಟ್ ಎಲೆ, ಮದ್ಯ ಖರೀದಿಸಿ ಸುಟ್ಟರು:

ಗ್ರಾಮಸ್ಥರು ಕಿರಾಣಿ ಅಂಗಡಿಯಿಂದ ಇಸ್ಪೀಟ್‌ ಎಲೆ, ಮದ್ಯ ಅಕ್ರಮ ಮಾರಾಟಗಾರರಿಂದ ಮದ್ಯ ಖರೀದಿಸಿ ರಸ್ತೆಯಲ್ಲಿ ಸುಟ್ಟು ಹಾಕಿದರು. ಇನ್ನೊಮ್ಮೆ ಗ್ರಾಮದಲ್ಲಿ ಮಾರಾಟ ಮಾಡಿದರೆ ದಂಡ ಕಟ್ಟಲು ಹಾಗೂ ಜೈಲಿಗೆ ಹೋಗಲು ಸಿದ್ಧರಾಗಿ ಎಂಬ ಎಚ್ಚರಿಕೆಯ ಸಂದೇಶ ನೀಡಿದರು.ಗ್ರಾಮಸ್ಥರು ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬಾರದೆಂಬ ಉದ್ದೇಶದಿಂದ ದಂಡ ವಿಧಿಸುವ ನಿರ್ಣಯ ಕೈಗೊಳ್ಳಲಾಗಿದೆ. ಜತೆಗೆ ತಪ್ಪಿತಸ್ಥರನ್ನು ಪೊಲೀಸರಿಗೆ ಒಪ್ಪಿಸಲಾಗುವುದು.

ಕಳಕಪ್ಪ ಕಂಬಳಿ, ತಾಪಂ ಮಾಜಿ ಉಪಾಧ್ಯಕ್ಷ, ಬಿನ್ನಾಳಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಗೂ ಜೂಜಾಟ ಆಟವಾಡಿದರೆ ದಂಡ ವಿಧಿಸುವ ನಿರ್ಣಯ ತೆಗೆದುಕೊಂಡಿರುವ ಬಿನ್ನಾಳ ಗ್ರಾಮಸ್ಥರು ನಿರ್ಧಾರ ಉತ್ತಮವಾಗಿದೆ. ಮದ್ಯ ಅಕ್ರಮ ಮಾರಾಟ ಹಾಗೂ ಜೂಜಾಟ ಆಡಿದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಲು ಗ್ರಾಮಸ್ಥರ ನಿರ್ಣಯ ನಮಗೆ ಅನುಕೂಲವಾಗಲಿದೆ.

ಟಿ. ಗುರುರಾಜ, ಪಿಎಸ್‌ಐ ಕುಕನೂರು

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ