ಫ್ರೀಡಂ ಪಾರ್ಕ್‌ನ ನೂತನ ಕಟ್ಟಡದಲ್ಲಿ ಪ್ರತಿಭಟನೆ ಮಾಡಲು ₹1 ಲಕ್ಷ ಬಾಡಿಗೆ!

KannadaprabhaNewsNetwork |  
Published : Aug 24, 2026, 02:00 AM ISTUpdated : Aug 24, 2026, 10:25 AM IST
Freedom Park

ಸಾರಾಂಶ

ಸಾರ್ವಜನಿಕರ ಉಪಯೋಗಕ್ಕಾಗಿ ಕೋಟಿಗಟ್ಟಲೆ ವೆಚ್ಚ ಮಾಡಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಿರ್ಮಿಸಿರುವ ಕಟ್ಟಡ ಉಪಯೋಗಕ್ಕೆ ಬಾರದೆ ರಾತ್ರಿ ಪುಂಡು ಪೋಕರಿಗಳಿಗೆ ವಾಸಸ್ಥಾನವಾಗಿದೆ. ಗಾಂಧಿನಗರ ಶೇಷಾದ್ರಿ ರಸ್ತೆಯಲ್ಲಿ ಪಾರ್ಕಿಂಗ್ ಕಟ್ಟಡದ ಮೇಲ್ಭಾಗದಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದಲ್ಲಿ ಜಿಬಿಎ ಪ್ರಜಾಸತ್ತಾತ್ಮಕ ಹೋರಾಟಗಳಿಗೆ ನೀಡದೆ 1 ಲಕ್ಷ ರು.ಬಾಡಿಗೆ ನಿಗದಿ ಮಾಡಿದೆ.

 ಬೆಂಗಳೂರು : ಸಾರ್ವಜನಿಕರ ಉಪಯೋಗಕ್ಕಾಗಿ ಕೋಟಿಗಟ್ಟಲೆ ವೆಚ್ಚ ಮಾಡಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಿರ್ಮಿಸಿರುವ ಕಟ್ಟಡ ಉಪಯೋಗಕ್ಕೆ ಬಾರದೆ ರಾತ್ರಿ ಪುಂಡು ಪೋಕರಿಗಳಿಗೆ ವಾಸಸ್ಥಾನವಾಗಿದೆ. ಗಾಂಧಿನಗರ ಶೇಷಾದ್ರಿ ರಸ್ತೆಯಲ್ಲಿ ಪಾರ್ಕಿಂಗ್ ಕಟ್ಟಡದ ಮೇಲ್ಭಾಗದಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದಲ್ಲಿ ಜಿಬಿಎ ಪ್ರಜಾಸತ್ತಾತ್ಮಕ ಹೋರಾಟಗಳಿಗೆ ನೀಡದೆ 1 ಲಕ್ಷ ರು.ಬಾಡಿಗೆ ನಿಗದಿ ಮಾಡಿದೆ. ಇಷ್ಟೊಂದು ದುಬಾರಿ ಶುಲ್ಕ ನೀಡಲು ಆಗದವರು ಮಳೆ, ಬಿಸಿಲಲ್ಲೇ ಪ್ರತಿಭಟನೆ ನಡೆಸಬೇಕಾಗಿದೆ. ಇದರಿಂದಾಗಿ ಈ ಕಟ್ಟಡ ತಿಂಗಳುಗಟ್ಟಲೆ ಪಾಳು ಬಿದ್ದಿರುತ್ತದೆ.

2018ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಯಾದ ಈ ಕಟ್ಟಡ

2018ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಯಾದ ಈ ಕಟ್ಟಡದಲ್ಲಿ ಶೌಚಾಲಯ ನಿರ್ವಹಣೆ ಇಲ್ಲದೆ ಗಬ್ಬುನಾರುತ್ತದೆ. ದುಬಾರಿ ಶುಲ್ಕ ನೀಡಿ ಜಾತಿ ಸಮಾವೇಶ ಮಾಡುವವರಿಗಾಗಿ ತಿಂಗಳಿಗೆ ಅಥವಾ 2 ತಿಂಗಳಿಗೊಮ್ಮೆ ಈ ಕಟ್ಟಡವನ್ನು ಸ್ವಚ್ಛಗೊಳಿಸಲಾಗುತ್ತದೆ. ಪ್ರತಿಭಟನಾಕಾರರು, ಹೋರಾಟಗಾರರು ಮಳೆ, ಬಿಸಿಲಿನಿಂದ ಪಾರಾಗುವ ಉದ್ದೇಶದಿಂದ ಈ ಕಟ್ಟಡ ನಿರ್ಮಿಸಲಾಗಿತ್ತು. ಆದರೆ, ಕಟ್ಟಡ ನಿರ್ಮಾಣವಾಗಿ ಐದಾರು ವರ್ಷಗಳೇ ಕಳೆದಿದ್ದರೂ ಪಾಲಿಕೆಯ ಅಧಿಕಾರಿಗಳು ಈ ಕಟ್ಟಡವನ್ನು ಪ್ರತಿಭಟನಾಕಾರರಿಗೆ ಬಾಡಿಗೆಗೆ ನೀಡುತ್ತಿಲ್ಲ.

ಬೆಂಗಳೂರಿನ ಹಲವು ಕಡೆ ನಡೆಯುತ್ತಿದ್ದ (ಮೌರ್ಯ ಸರ್ಕಲ್, ಬನ್ನಪ್ಪ ಪಾರ್ಕ್, ಎಂಜಿ ಪ್ರತಿಮೆ ಬಳಿ. ಟೌನ್ ಹಾಲ್ ಬಳಿ) ಪ್ರತಿಭಟನೆಗಳನ್ನು ಒಂದು ನಿರ್ದಿಷ್ಟ ಜಾಗದಲ್ಲಿ ನಡೆಸಿದರೆ ಸೂಕ್ತ, ಸಂಚಾರ ಸಮಸ್ಯೆ ಇರುವುದಿಲ್ಲ ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು. ಆಗ ಸರ್ಕಾರ ಸ್ವಾತಂತ್ರ್ಯ ಉದ್ಯಾನವನ್ನು ಆಯ್ಕೆ ಮಾಡಿತು. ಫ್ರೀಡಂಪಾರ್ಕ್ ನ ಒಟ್ಟು ವಿಸ್ತೀರ್ಣ 21 ಎಕರೆ, ಇದರಲ್ಲಿ 16 ಎಕರೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಇರಿಸಿದ್ದ ಜೈಲಿನ ಬ್ಯಾರಕ್, ಕ್ಲಾಕ್ ಟವರ್ ಹಾಗೂ ಉದ್ಯಾನವನ ನಿರ್ಮಿಸಲಾಗಿದೆ. ಉಳಿದ 5 ಎಕರೆ ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಮೀಸಲಿಡಲಾಗಿದೆ ಎಂದು ತಿಳಿಸಲಾಗಿತ್ತು.

ಆದರೆ, ವಾಸ್ತವ ಸ್ಥಿತಿಯೇ ಬೇರೆಯಾಗಿದೆ. ಪ್ರಜಾಸತ್ತಾತ್ಮಕ ಹೋರಾಟಗಳಿಗಾಗಿ ಸಂಘ, ಸಂಸ್ಥೆಗಳು ಈ ಜಾಗ ಕೇಳಿದರೆ ಗುತ್ತಿಗೆದಾರರು ಈ ಕಟ್ಟಡವನ್ನು ಪಾಲಿಕೆಗೆ ಇನ್ನೂ ನೀಡಿಲ್ಲ ಎಂಬ ಸಮಜಾಯಿಷಿಯನ್ನು ಜಿಬಿಎ ಅಧಿಕಾರಿಗಳು ನೀಡುತ್ತಾರೆ. ಒಂದು ವೇಳೆ ಈ ಕಟ್ಟಡವನ್ನು ಪಾಲಿಕೆಗೆ ಗುತ್ತಿಗೆದಾರ ವರ್ಗಾಯಿಸಿದರೂ ಇಷ್ಟು ಮೊತ್ತದ ಹಣವನ್ನು ನೀಡಿ ಪ್ರತಿಭಟನೆ ಮಾಡಲು ಯಾವುದೇ ರಾಜಕೀಯ ಪಕ್ಷಗಳಾಗಲಿ, ಸಂಘ ಸಂಸ್ಥೆಗಳಾಗಲಿ ಮುಂದೆಬರುವುದಿಲ್ಲ.

ಈ 5 ಎಕರೆ ಜಾಗದಲ್ಲಿ ಬೃಹತ್ ಬೆಂಗಳೂರು ಪ್ರಾಧಿಕಾರ ಕಟ್ಟಡಗಳನ್ನು ನಿರ್ಮಿಸಿ ವಾಹನ ನಿಲುಗಡೆಗೆ ಬಾಡಿಗೆಗೆ ನೀಡಿದೆ. ಕೇವಲ ಎರಡು ಎಕರೆಯಷ್ಟು ಜಾಗವನ್ನು ಪ್ರತಿಭಟನಾಕಾರರಿಗೆ ಮೀಸಲಿಡಲಾಗಿದೆ. ಇಲ್ಲಿಯೇ ಸಂಘ ಸಂಸ್ಥೆಗಳು ರಾಜಕೀಯ ಪಕ್ಷಗಳು ಪ್ರತಿಭಟನೆ ಹಮ್ಮಿಕೊಳ್ಳುತ್ತಿವೆ. ಹಣ ಇರುವ ಸಂಘಟನೆಗಳು ಶಾಮಿಯಾನ, ಕುರ್ಚಿ, ಸೈಡ್ ವಾಲ್ ಎಂದು ಟೆಂಟ್ ಹಾಕಿಕೊಂಡರೆ, ಆರ್ಥಿಕವಾಗಿ ಹಿಂದುಳಿದ ಸಂಘಟನೆಗಳು ಮಳೆ, ಬಿಸಿಲಿನಲ್ಲಿಯೇ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ತಮ್ಮ ದನಿ ಮುಟ್ಟಿಸಲು ಪ್ರಯತ್ನಿಸುತ್ತಿವೆ. ಆದರೆ, ಬೃಹತ್ ಕಟ್ಟಡ ಜನರಿಗೆ ದೊರೆಯದೆ ಉಪಯೋಗಕ್ಕೆ ಬಾರದೆ ಹಾಗೆಯೇ ನಿಂತಿದೆ.

ಪ್ರಜಾಸತ್ತಾತ್ಮಕ ಹೋರಾಟಗಳಿಗೆ ನೀಡಲಿ:

ನೆರಳು, ಶೌಚಾಲಯ ಇರುವ ಆ ಶೆಡ್ ಗೆ 1 ಲಕ್ಷ ಬಾಡಿಗೆ ನಿಗದಿ ಮಾಡಿರುವುದು ಅತ್ಯಂತ ದುಬಾರಿಯಾಗಿದೆ. ಪ್ರಜಾಸತ್ತಾತ್ಮಕ ಹೋರಾಟ, ಚಳವಳಿಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡುವುದು ಅಕ್ಷಮ್ಯ, ಚಳವಳಿಗಾರರಿಗೆ ನೀರು, ನೆರಳು ಶೌಚಾಲಯ ವ್ಯವಸ್ಥೆ ಮಾಡುವುದು ಸರ್ಕಾರದ ಕರ್ತವ್ಯ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.

ಪ್ರತಿಭಟನೆ ಸಮಯದಲ್ಲಿ ಪರದಾಟ ತಪ್ಪಿಲ್ಲ

ಪ್ರತಿಭಟನೆ ಸಮಯದಲ್ಲಿ ಮಹಿಳೆಯರಿಗೆ ಶೌಚಾಲಯ, ನೀರು ಇಲ್ಲದೆ ಒಂದೊಂದು ಸಾರಿ ಸಂಕಷ್ಟ ಅನುಭವಿಸಬೇಕಾಗುತ್ತದೆ. ಸುಮಾರು ಅರ್ಧ ಎಕರೆಯಷ್ಟು ಜಾಗದಲ್ಲಿ ಮಾತ್ರ ಈಗ ಮಳೆ, ಬಿಸಿಲಿನಲ್ಲಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಉಳಿದ ಎಲ್ಲಾ ಜಾಗವನ್ನು ಪಾಲಿಕೆ ವಾಣಿಜ್ಯೀಕರಣ ಮಾಡಿದೆ. ಇದು ಸರಿಯಾದ ಬೆಳವಣಿಗೆಯಲ್ಲ. ಕೂಡಲೆ ಪಾರ್ಕಿಂಗ್ ಸ್ಥಳದ ಮೇಲ್ಭಾಗದ ಶೆಡ್ ಅನ್ನು ಹೋರಾಟಗಳಿಗೆ ಸರ್ಕಾರ ಬಿಟ್ಟುಕೊಡಬೇಕು ಎಂದು ಮಹಿಳಾ ಹೋರಾಟಗಾರ್ತಿ ವರಲಕ್ಷ್ಮಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಡಿ.15ರ ವರೆಗೆ ಕಾಲುವೆಗೆ ನೀರು ಹರಿಸಲು ರೈತ ಸಂಘ ಅಧ್ಯಕ್ಷ ಮಾಧವರೆಡ್ಡಿ ಆಗ್ರಹ
ಪ್ರಸಿದ್ಧ ಯಕ್ಷಗಾನ ಕಲಾವಿದ ಶ್ರೀಪಾದ ಭಟ್ ಥಂಡಿಮನೆ ಅಸ್ತಂಗತ