ಗವಿಸಿದ್ಧೇಶ್ವರ ಜಾತ್ರಾ ಮಹಾದಾಸೋಹಕ್ಕೆ 1 ಲಕ್ಷ ರವೆ ಉಂಡೆ

KannadaprabhaNewsNetwork |  
Published : Jan 02, 2026, 03:30 AM IST
1ಕೆಪಿಎಲ್21 ಶ್ರೀ ಗವಿಸಿದ್ಧೇಶ್ವರ ಮಹಾತಾಸೋಹಕ್ಕೆ ಚಿಕ್ಕಓತಗೇರಿ ಗ್ರಾಮಸ್ಥರು ತಂದುಕೊಟ್ಟಿರುವ ಲಕ್ಷ ರವೆ ಉಂಡಿ | Kannada Prabha

ಸಾರಾಂಶ

ಮಹಿಳೆಯರು ಮತ್ತು ಪುರುಷರು ಸೇರಿ 300ಕ್ಕೂ ಹೆಚ್ಚು ಜನರು ಗ್ರಾಮದ ನಿಶಾನೇಶ್ವರ ದೇವಸ್ಥಾನದಲ್ಲಿ ಎರಡು ದಿನಗಳ ಕಾಲ, ಹಗಲು ರಾತ್ರಿ ರವೆ ಉಂಡೆ ಸಿದ್ಧ ಮಾಡಿದ್ದಾರೆ.

ಸೋಮರಡ್ಡಿ ಅಳವಂಡಿ ಕೊಪ್ಪಳ

ವರ್ಷ ವರ್ಷವೂ ಮಹಾದಾಸೋಹದ ಮೂಲಕವೇ ಪ್ರಸಿದ್ಧಿಯಾಗುತ್ತಿರುವ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಮಹಾದಾಸೋಹಕ್ಕೆ 1 ಲಕ್ಷ ರವೆ ಉಂಡೆ ಸಿದ್ಧ ಮಾಡಿಕೊಂಡು, ಭಕ್ತರು ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಚಿಕ್ಕ ಓತಗೇರಿ ಗ್ರಾಮದ ಶ್ರೀ ಗುರು ನಿಶಾನೇಶ್ವರ ಸೇವಾ ಸಮಿತಿಯವರು 1 ಲಕ್ಷ ರವೆ ಉಂಡೆಗಳನ್ನು ಸಿದ್ಧ ಮಾಡಿಕೊಂಡು ಬಂದು, ಈ ಜಾತ್ರಾ ಮಹಾದಾಸೋಹಕ್ಕೆ ನೀಡಿದ್ದಾರೆ.

ಪ್ರತಿ ವರ್ಷವೂ ಒಂದಿಲ್ಲೊಂದು ತಿನಿಸು ಮಾಡಿಕೊಂಡು ಬರುತ್ತಿರುವ ಈ ಚಿಕ್ಕಓತಗೇರಿ ಗ್ರಾಮಸ್ಥರು ಕಳೆದ ಹತ್ತು ವರ್ಷಗಳಿಂದ ಈ ಸಂಪ್ರದಾಯ ಮುಂದುವರಿಸಿದ್ದಾರೆ. ಸೇವಾ ಸಮಿತಿಯ ನಾಲ್ಕಾರು ಜನರು ಸೇರಿ ಮೊದಲು ಬೂಂದಿ ತಂದುಕೊಟ್ಟಿದ್ದಾರೆ, ಆ ನಂತರ ಹತ್ತಾರು ಕ್ವಿಂಟಲ್ ಕರದಂಟು ಮಾಡಿಕೊಂಡು ಬಂದು ಕೊಟ್ಟಿದ್ದಾರೆ. ಈ ವರ್ಷ 25 ಕ್ವಿಂಟಲ್‌ನಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ರವೆ ಉಂಡೆಗಳನ್ನು ನೀಡಿದ್ದಾರೆ.

ಮಾಡಿದ್ದೇ ಪವಾಡ: 10 ಕ್ವಿಂಟಲ್ ರವಾ, 12 ಕ್ವಿಂಟಲ್ ಸಕ್ಕರೆ, 70 ಕೆಜಿ ಒಳ್ಳೆಣ್ಣೆ, 10 ಲೀಟರ್ ತುಪ್ಪ, 5 ಕೆಜಿ ಗೋಡಂಬಿ, 15 ಕೆಜಿ ಗಸಗಸೆ, 8 ಕೆಜಿ ಒಣದ್ರಾಕ್ಷಿ ಅಗತ್ಯಕ್ಕೆ ತಕ್ಕಷ್ಟು ಜಾಜಿ ಕಾಯಿಯನ್ನು ಒಳಗೊಂಡು 25 ಕ್ವಿಂಟಲ್ ರವೆ ಉಂಡೆ ಸಿದ್ಧ ಮಾಡಿದ್ದಾರೆ. ಪ್ರತಿ ಕೆಜಿಗೆ 40-50 ಉಂಡೆ ತಯಾರಾಗಿದ್ದು, ಒಟ್ಟಾರೆ 1 ಲಕ್ಷಕ್ಕೂ ಅಧಿಕವಾಗಿವೆ.

ಮಹಿಳೆಯರು ಮತ್ತು ಪುರುಷರು ಸೇರಿ 300ಕ್ಕೂ ಹೆಚ್ಚು ಜನರು ಗ್ರಾಮದ ನಿಶಾನೇಶ್ವರ ದೇವಸ್ಥಾನದಲ್ಲಿ ಎರಡು ದಿನಗಳ ಕಾಲ, ಹಗಲು ರಾತ್ರಿ ರವೆ ಉಂಡೆ ಸಿದ್ಧ ಮಾಡಿದ್ದಾರೆ. ಎರಡು ಟ್ರ್ಯಾಕ್ಟರ್‌ನಲ್ಲಿ ಅವುಗಳನ್ನು ತಂದು ಈಗ ಗವಿಸಿದ್ಧೇಶ್ವರ ಮಹಾದಾಸೋಹಕ್ಕೆ ಅರ್ಪಿಸಿದ್ದಾರೆ.

ಜಾತ್ರೆಯ ಪರಂಪರೆಯಲ್ಲಿಯೇ ರವೆ ಉಂಡೆಯನ್ನು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸಿದ್ಧ ಮಾಡಿದ್ದು ಮತ್ತು ಅದನ್ನು ಮಹಾದಾಸೋಹಕ್ಕೆ ಬಳಕೆ ಮಾಡುತ್ತಿರುವುದು ಇದೇ ಪ್ರಥಮ ಎಂದೇ ಹೇಳಲಾಗುತ್ತದೆ. ಸಾಮಾನ್ಯವಾಗಿ ನಾಲ್ಕಾರು ಕೆಜಿ, ಒಂದೆರಡು ಕ್ವಿಂಟಲ್ ತಯಾರು ಮಾಡಿದ್ದು ಅಪರೂಪ. ಆದರೆ, 25 ಕ್ವಿಂಟಲ್ ರವೆ ಉಂಡೆ ಸಿದ್ಧ ಮಾಡಿರುವುದು ದಾಖಲೆಯೇ ಸರಿ.

ನಮ್ಮೂರಿಂದ ಗವಿಸಿದ್ಧೇಶ್ವರ ಮಹಾದಾಸೋಹಕ್ಕೆ ಕಳೆದ ಹತ್ತು ವರ್ಷಗಳಿಂದ ಒಂದಿಲ್ಲೊಂದು ತಿನಿಸು ಮಾಡಿಕೊಂಡು ಬರುತ್ತಿದ್ದೇವೆ. ಈ ವರ್ಷ 25 ಕ್ವಿಂಟಲ್ ರವೆ ಉಂಡಿ ಮಾಡಿಕೊಂಡು ಬಂದಿದ್ದು, ಲಕ್ಷಕ್ಕೂ ಅಧಿಕ ಇವೆ. ಶ್ರೀ ಗುರು ನಿಶಾನೇಶ್ವರ ಸೇವಾ ಸಮಿತಿಯವರೆಲ್ಲರೂ ಸೇರಿ ಮಾಡಿಕೊಂಡು ಬಂದಿದ್ದೇವೆ ಎಂದು ಚಿಕ್ಕಓತಗೇರಿ ಗ್ರಾಮಸ್ಥ ಮಹಾಂತಗೌಡ ಗೌಡರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು