ಕೆರೆಗಳಿಗೆ ನೀರು ತುಂಬಿಸಲು 1 ಸಾವಿರ ಕೋಟಿ ರು. ಸರ್ಕಾರಕ್ಕೆ ಪ್ರಸ್ತಾವನೆ: ಸಚಿವ ಚಲುವರಾಯಸ್ವಾಮಿ

KannadaprabhaNewsNetwork |  
Published : Jul 20, 2025, 01:15 AM IST
19ಕೆಎಂಎನ್ ಡಿ23  | Kannada Prabha

ಸಾರಾಂಶ

ಅವಕಾಶ ಸಿಕ್ಕಾಗ ಪ್ರಾಮಾಣಿಕವಾಗಿ ಒಂದಷ್ಟು ಕೆಲಸ ಮಾಡಬೇಕೆಂಬುದು ನನ್ನ ಉದ್ದೇಶ. ರಾಜ್ಯ ಸರ್ಕಾರದಲ್ಲಿ ಅತ್ಯಂತ ಜವಾಬ್ದಾರಿ ಸ್ಥಾನದಲ್ಲಿರುವ ನನಗೆ ಬಹಳಷ್ಟು ಒತ್ತಡವಿದೆ. ಆದರೂ ಕ್ಷೇತ್ರದ ಜನರು ಸಮಸ್ಯೆಗಳ ಅರ್ಜಿ ಹಿಡಿದು ನನ್ನ ಬಳಿ ನಿಲ್ಲಬಾರದೆಂಬ ಉದ್ದೇಶದಿಂದ ಎಲ್ಲ ಅಧಿಕಾರಿಗಳನ್ನು ಗ್ರಾಪಂ ಮಟ್ಟಕ್ಕೆ ಕರೆತಂದು ಜನರ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಕೆಲಸ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಹೊಣಕೆರೆ ಮತ್ತು ಬಸರಾಳು ಭಾಗಗಳ ಎಲ್ಲಾ ಕೆರೆಗಳಿಗೆ ಸಮರ್ಪಕವಾಗಿ ನೀರು ತುಂಬಿಸಲು ಒಂದು ಸಾವಿರ ಕೋಟಿ ರು. ಮಂಜೂರಾತಿ ಕೋರಿ ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಭೀಮನಹಳ್ಳಿ ಮತ್ತು ದೇವಲಾಪುರ ಗ್ರಾಪಂ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರು ಮತ ಚಲಾಯಿಸುವಾಗ ಸರಿಯಾದ ನಿರ್ಧಾರ ತೆಗೆದುಕೊಂಡು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ಅವಕಾಶ ಸಿಕ್ಕಾಗ ಪ್ರಾಮಾಣಿಕವಾಗಿ ಒಂದಷ್ಟು ಕೆಲಸ ಮಾಡಬೇಕೆಂಬುದು ನನ್ನ ಉದ್ದೇಶ. ರಾಜ್ಯ ಸರ್ಕಾರದಲ್ಲಿ ಅತ್ಯಂತ ಜವಾಬ್ದಾರಿ ಸ್ಥಾನದಲ್ಲಿರುವ ನನಗೆ ಬಹಳಷ್ಟು ಒತ್ತಡವಿದೆ. ಆದರೂ ಕ್ಷೇತ್ರದ ಜನರು ಸಮಸ್ಯೆಗಳ ಅರ್ಜಿ ಹಿಡಿದು ನನ್ನ ಬಳಿ ನಿಲ್ಲಬಾರದೆಂಬ ಉದ್ದೇಶದಿಂದ ಎಲ್ಲ ಅಧಿಕಾರಿಗಳನ್ನು ಗ್ರಾಪಂ ಮಟ್ಟಕ್ಕೆ ಕರೆತಂದು ಜನರ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.

ಯಾವುದೇ ಸಮಸ್ಯೆಗಳಿದ್ದಲ್ಲಿ ತಮ್ಮ ಹೆಸರು, ವಿಳಾಸ ಮೊಬೈಲ್ ಸಂಖ್ಯೆಯೊಂದಿಗೆ ಅರ್ಜಿ ಸಲ್ಲಿಸಿದರೆ ಆಯಾ ಇಲಾಖೆಯ ಅಧಿಕಾರಿಗಳಿಗೆ ವರ್ಗಾಯಿಸಿ ಕಾಲಮಿತಿಯೊಳಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗುವುದು ಎಂದರು.

ತಾಲೂಕಿನ ಜನರಿಂದ ನನಗೆ ಒತ್ತಡ ಕಡಿಮೆಯಾದರೆ ಈಗ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳು ದುಪ್ಪಟ್ಟಾಗುತ್ತವೆ. ಹಾಗಾಗಿ ಜನರು ಇದನ್ನು ಅರ್ಥೈಸಿಕೊಂಡು ಯಾವುದೇ ಗೊಂದಲ ಮಾಡಿಕೊಳ್ಳದೆ ನಾನು ಕ್ಷೇತ್ರಕ್ಕೆ ಭೇಟಿ ಕೊಟ್ಟ ವೇಳೆ ಒತ್ತಡ ಹಾಕದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮತ್ತಷ್ಟು ಯೋಜನೆಗಳನ್ನು ತಂದು ಜಿಲ್ಲೆ ಮತ್ತು ತಾಲೂಕಿನಲ್ಲಿ ಅಭಿವೃದ್ಧಿ ಕೆಲಸ ಮಾಡಬಹುದು ಎಂದರು.

ಜನಸ್ಪಂದನಾ ಕಾರ್ಯಕ್ರಮದಲ್ಲಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಕೋರಿ ಭೀಮನಹಳ್ಳಿ ಗ್ರಾಪಂ ವ್ಯಾಪ್ತಿಯ ಜನರಿಂದ 120 ಅರ್ಜಿಗಳು ಸಲ್ಲಿಕೆಯಾದರೆ, ದೇವಲಾಪುರ ಗ್ರಾಪಂ ವ್ಯಾಪ್ತಿಯ ಜನರಿಂದ 46 ಅರ್ಜಿ ಸಲ್ಲಿಕೆಯಾದವು. ಸ್ವೀಕೃತವಾದ ಎಲ್ಲಾ ಅರ್ಜಿಗಳನ್ನು ಅನಾವಶ್ಯಕವಾಗಿ ವಿಳಂಬ ಮಾಡದೆ ನಿಗಧಿತ ಅವಧಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇದೇ ವೇಳೆ ಭೀಮನಹಳ್ಳಿ ಮತ್ತು ದೇವಲಾಪುರ ಗ್ರಾಪಂ ವ್ಯಾಪ್ತಿಯ 25 ಮಂದಿ ಅರ್ಹ ಫಲಾನುಭವಿಗಳಿಗೆ ಮಾಶಾಸನ ಮಂಜೂರಾತಿ ಪತ್ರ ವಿತರಿಸಿದ ಸಚಿವರು, 270 ಆರ್‌ಟಿಸಿ ತಿದ್ದುಪಡಿ ಮತ್ತು 125 ಪೌತಿ ಖಾತೆ ಆದೇಶ ಪ್ರತಿ ವಿತರಿಸಿದರು.

ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮಿ, ದನಂಜಯ, ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಡಿವೈಎಸ್‌ಪಿ ಬಿ.ಚಲುವರಾಜು, ಬಿಇಒ ಕೆ.ಯೋಗೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ, ಸೆಸ್ಕಾಂ ಇಇ ಮಂಜುನಾಥ್, ಗ್ರಾಪಂ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಬಿ.ಸಿ.ಗಿರೀಶ್, ಸಚಿವರ ಪುತ್ರ ಸಚ್ಚಿನ್ ಚಲುವರಾಯಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ಮುಖಂಡರಾದ ಸುನಿಲ್ ಲಕ್ಷ್ಮೀಕಾಂತ್, ಮಾವಿನಕೆರೆ ಸುರೇಶ್, ಉದಯಕಿರಣ್, ಮರಿಸ್ವಾಮಿ, ಡಿ.ಕೆ.ಸುರೇಶ್, ಎಂ.ಹುಚ್ಚೇಗೌಡ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''