ಕನ್ನಡಪ್ರಭ ವಾರ್ತೆ ಮಧುಗಿರಿ
ಸಂಸದನಾಗಿ ಆಯ್ಕೆಯಾದರೆ ನೂರು ದಿನಗಳ ಒಳಗೆ ಕೇಂದ್ರದಿಂದ 10 ಸಾವಿರ ಕೋಟಿ ರು.ವಿಶೇಷ ಪ್ಯಾಕೇಜ್ ತಂದು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಜೊತೆಗೆ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡುವುದಾಗಿ ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಭರವಸೆ ನೀಡಿದರು.ಮಧುಗಿರಿ ಪಟ್ಟಣದ ಪಾವಗಡ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಐ.ಡಿ.ಹಳ್ಳಿ ಹೋಬಳಿ ದೇವಮೂಲೆಯಲ್ಲಿ ದೊಡ್ಡದಾಳವೆಟ್ಟ ಗ್ರಾಮದಲ್ಲಿ ನೆಲಸಿರುವ ಇತಿಹಾಸ ಪ್ರಸಿದ್ಧ ಶ್ರೀಲಕ್ಷ್ಮೀ ನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಿ, ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಮಧುಗಿರಿ, ಕೊರಟಗೆರೆ ಕ್ಷೇತ್ರಗಳಲ್ಲಿ ಎತ್ತ ನೋಡಿದರೂ ಗುಡ್ಡ-ಬೆಟ್ಟಗಳಿಂದ ಸುತ್ತುವರಿದಿದೆ. ತಾಲೂಕುಗಳು ಅತ್ಯಂತ ಹಿಂದುಳಿದ ಬರಪೀಡಿತ ಪ್ರದೇಶಗಳು. ಬರಗಾಲಕ್ಕೆ ತುತ್ತಾಗಿ ತತ್ತರಿಸಿರುವ 2 ತಾಲೂಕುಗಳ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡುತ್ತೇನೆ. ಈ ಭಾಗದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸೋಲಾರ್ ಪಾರ್ಕ್ ಮತ್ತು ಜವಳಿ ಪಾರ್ಕ್ ತಂದು ಉದ್ಯೋಗ ಕಲ್ಪಿಸಿ ನೆಮ್ಮದಿಯ ಜೀವನ ನಡೆಸಲು ಅನುವು ಮಾಡುವುದಾಗಿ ಹೇಳಿದರು. ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಮಾಜಿ ಪ್ರಧಾನಿ ಎಚ್‌ಡಿಡಿ, ಎಚ್‌ಡಿಕೆ, ಬಿ.ಎಸ್.ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಜೆಡಿಎಸ್, ಬಿಜೆಪಿ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಸೋಮಣ್ಣ ಅವರ ಗೆಲುವಿಗೆ ಶ್ರಮಿಸಬೇಕು ಎಂದರು.
ಏಕಶಿಲಾ ಬೆಟ್ಟಕ್ಕೆ ರೋಪ್ ವೇ, 45 ಕೆರೆಗಳಿಗೆ ಎತ್ತಿನಹೊಳೆ ನೀರು, ಮಧುಗಿರಿ ಜಿಲ್ಲೆ ಮಾಡಲು ಮೈತ್ರಿ ಅಭ್ಯರ್ಥಿ ಸೋಮಣ್ಣ ರನ್ನು ಬೆಂಬಲಿಸಿ. ಮಧುಗಿರಿಯಲ್ಲಿ ದ್ವೇಶದ ರಾಜಕಾರಣ ನಡೆಯುತ್ತಿದ್ದು, ಇದನ್ನು ದಿಕ್ಕರಿಸಿ ದೇವೇಗೌಡರ ಮತ್ತು ನನ್ನ ಚುನಾವಣೆಯಲ್ಲಿ ಆದ ಲೋಪದೋಷಗಳನ್ನು ಸರಿಪಡಿಸಿಕೊಂಡು ಸೋಮಣ್ಣರ ಗೆಲುವಿಗೆ ಶ್ರಮಿಸೋಣ ಎಂದರು.ಶಾಸಕ ಸುರೇಶ್ ಗೌಡ ಮಾತನಾಡಿ, ಎನ್‌ಡಿಎ ಮೈತ್ರಿ ಕೂಟ ಈ ಸಲ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಲಿದೆ. ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದಕ್ಕಿಂತ ಸಚಿವರಾಗಿ ನಮ್ಮ ದುಖ:ಕ್ಕೆ ಸ್ಪಂದಿಸುವ ಸೋಮಣ್ಣರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.ಮಧುಗಿರಿ ಸಂಘಟನಾತ್ಮಕ ಜಿಲ್ಲಾಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ ಮಾತನಾಡಿದರು. ಪ್ರಚಾರ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಸ್ತುವಾರಿ ಹಾಗೂ ಮಾಜಿ ಸಚಿವ ಗೋಪಾಲಯ್ಯ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜಿನಪ್ಪ, ಮಾಜಿ ಶಾಸಕ ಸೊಗಡು ಶಿವಣ್ಣ, ಮುಖಂಡರಾದ ಎಲ್.ಸಿ.ನಾಗರಾಜು, ಅನಿಲ್‌ಕುಮಾರ್, ಕೊಂಡವಾಡಿ ಚಂದ್ರಶೇಖರ್, ತಾ.ಜೆಡಿಎಸ್ ಅಧ್ಯಕ್ಷ ಬಸವರಾಜು, ವೀರಕ್ಯಾತರಾಯ, ತಾ.ಮಂಡಲ ಅಧ್ಯಕ್ಷ ನಾಗೇಂದ್ರ, ಬಿ.ಕೆ.ಮಂಜುನಾಥ್ ಇದ್ದರು.------------------------------ಬಿಜೆಪಿ ಸಂಸದ ಬಸವರಾಜುಗೆ ಕಾರ್ಯಕರ್ತರ ಗೋಬ್ಯಾಕ್:ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಸೋಮಣ್ಣ ಪ್ರಚಾರದ ವೇಳೆ ಹಾಲಿ ಸಂಸದ ಜಿ.ಎಸ್.ಬಸವರಾಜು ವಿರುದ್ಧ ಬಿಜೆಪಿ ಕಾರ್ಯಕರ್ತರಿಂದಲೇ "ಗೋಬ್ಯಾಕ್ ಬಸವರಾಜು " ಘೋಷಣೆ ಕೇಳಿ ಬಂದಿದೆ.
ಗುರುವಾರ ತಾಲೂಕಿನ ದೊಡ್ಡದಾಳವಟ್ಟ ಶ್ರೀಲಕ್ಷ್ಮೀನರಸಿಂಹಸ್ವಾಮಿಗೆ ದೇಗುಲದ ಬಳಿ ಮೈತ್ರಿ ಅಭ್ಯರ್ಥಿ ಪ್ರಚಾರದ ವೇಳೆ ಘಟನೆ ನಡೆದಿದ್ದು ಬಿಜೆಪಿ ಶಾಲು ಹಾಕಿಕೊಂಡಿದ್ದ ಕಾರ್ಯಕರ್ತರು ಸಂಸದ ಬಸವರಾಜು ಕಾರ್ಯವೈಖರಿ ವಿರುದ್ಧ ಕಿಡಿಕಾರಿದ್ದಾರೆ.ಈ ಘಟನೆ ಸಂಸದ ಬಸವರಾಜುಗೆ ಮುಜುಗರ ತಂದಿದ್ದು ಅಭ್ಯರ್ಥಿ ಸೋಮಣ್ಣ ಎದುರೇ ನೀವು ನಮ್ಮ ತಾಲೂಕಿಗೆ ಏನೂ ಮಾಡಿಲ್ಲ. ಬರಗಾಲದಲ್ಲೂ ಕಾಣಿಸಿಲ್ಲ, ಕೋರೋನಾ ವೇಳೆ ಕೂಡ ಮಾನವೀಯತೆಗಾದರೂ ಮಧುಗಿರಿ ಜನರ ಯೋಗ ಕ್ಷೇಮ ವಿಚಾರಿಸಲಿಲ್ಲ. ಈಗ ಚುನಾವಣೆ ಹೊಸ್ತಿಲಲ್ಲಿ ಬಂದಿದ್ದು ಮಧುಗಿರಿಗೆ ಅವರ ಕೊಡುಗೆ ಏನೂ.? ಎಂದು ಅಪಾರ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸೋಮಣ್ಣ ಕೈ ಮುಗಿದು ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.