ಮಳೆ-ಬಿರುಗಾಳಿಗೆ 10 ಸಾವಿರ ಹೆಕ್ಟೇರ್‌ ಬೆಳೆ ಹಾನಿ, ಸಿಡಿಲಿಗೆ ಇಬ್ಬರು ಬಲಿ

KannadaprabhaNewsNetwork | Published : Apr 12, 2025 12:45 AM

ಸಾರಾಂಶ

ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕು ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಯಿಂದಾಗಿ ಕಟಾವಿಗೆ ಬಂದಿದ್ದ 8ರಿಂದ 9 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ನೆಲಕಚ್ಚಿದ್ದು, ಒಂದು ಕಾಳು ಸಹ ಸಿಗದಂತಾಗಿದೆ. ಇದು ಪ್ರಾಥಮಿಕ ಮಾಹಿತಿಯಾಗಿದ್ದು, ಹಾನಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

ಕೊಪ್ಪಳ:

ಜಿಲ್ಲೆಯಲ್ಲಿ ಗುರುವಾರ ಸುರಿದ ಆಲಿಕಲ್ಲು ಮಳೆ ಮತ್ತು ಬಿರುಗಾಳಿಗೆ 10 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ನಗರದ ನಿವಾಸಿಗಳಾದ ಮಂಜುನಾಥ ಗಾಳಿ (48) ಹಾಗೂ ಗೋವಿಂದಪ್ಪ ಮ್ಯಾಗಳಮನಿ (62) ಸಿಡಿಲಿಗೆ ಬಲಿಯಾಗಿದ್ದಾರೆ. ಅಂದಾಜು ನೂರಾರು ಕೋಟಿ ರುಪಾಯಿಗೂ ಅಧಿಕ ಬೆಳೆ ನೀರು ಪಾಲಾಗಿದೆ.

ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕು ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಯಿಂದಾಗಿ ಕಟಾವಿಗೆ ಬಂದಿದ್ದ 8ರಿಂದ 9 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ನೆಲಕಚ್ಚಿದ್ದು, ಒಂದು ಕಾಳು ಸಹ ಸಿಗದಂತಾಗಿದೆ. ಇದು ಪ್ರಾಥಮಿಕ ಮಾಹಿತಿಯಾಗಿದ್ದು, ಹಾನಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಇನ್ನೊಂದು ವಾರದಲ್ಲಿ ಕಟಾವು ಮಾಡಿ ಒಕ್ಕಿದ್ದರೆ ರೈತರು ಭತ್ತವನ್ನು ಮಾರುಕಟ್ಟೆಗೆ ಕಳುಹಿಸುತ್ತಿದ್ದರು. ಆದರೆ, ಗುರುವಾರ ಸುರಿದ ಒಂದೇ ಮಳೆಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ.

ಯಾವ್ಯಾವ ಬೆಳೆ?

ಭತ್ತ, ಮೆಕ್ಕೆಜೋಳ, ಮಾವು, ಬಾಳೆ ಸೇರಿದಂತೆ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಸೇರಿ 10 ಸಾವಿರ ಹೆಕ್ಟೇರ್ ಪ್ರದೇಶಕ್ಕೂ ಅಧಿಕ ಬೆಳೆ ಹಾನಿಯಾಗಿದೆ ಎಂದು ಪ್ರಾಥಮಿಕ ವರದಿ ಸಂಗ್ರಹಿಸಲಾಗಿದೆ ಎಂದು ಕೃಷಿ ಇಲಾಖೆ ಜೆಡಿ ರುದ್ರೇಶಪ್ಪ ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆ ಲೆಕ್ಕಾಚಾರದ ಪ್ರಕಾರ 300 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬಹುತೇಕ ಹಾನಿಯಾಗಿದೆ. ಅದರಲ್ಲೂ ಮಾವು, ಬಾಳೆ ಸೇರಿದಂತೆ ಬಹುತೇಕ ಬೆಳೆ ಆಲಿಕಲ್ಲು ಮಳೆಗೆ ನೆಲಕಚ್ಚಿವೆ. ಸರ್ವೇ ಕಾರ್ಯ ವಾರಗಳ ಕಾಲ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆ ಡಿಡಿ ಕೃಷ್ಣ ಉಕ್ಕುಂದ ಹೇಳಿದ್ದಾರೆ.

ಕೊಪ್ಪಳ ತಾಲೂಕಿನ ಹ್ಯಾಟಿ, ಮುದ್ದಾಬಳ್ಳಿ, ಡೊಂಬರಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬಿರುಗಾಳಿಗೆ ಬಾಳೆ ಬೆಳೆ ನೆಲಕ್ಕೆ ಬಿದ್ದಿದೆ. ಕಟಾವಿಗೆ ಬಂದಿದ್ದ ಬೆಳೆ ಬಹುತೇಕ ಹಾನಿಯಾಗಿರುವುದು ರೈತರು ಕಣ್ಣೀರು ಹಾಕುವಂತೆ ಮಾಡಿದೆ.ಸಿಡಿಲಿಗೆ ಇಬ್ಬರು ಬಲಿ...

ತೋಟದ ಮನೆಯ ಬಾಗಿಲು ಹಾಕಿಕೊಂಡ ಬರಲು ಹೋಗಿದ್ದ ಕೊಪ್ಪಳದ ನಿವಾಸಿಗಳಾದ ಮಂಜುನಾಥ ಗಾಳಿ (48) ಹಾಗೂ ಗೋವಿಂದಪ್ಪ ಮ್ಯಾಗಳಮನಿ (62) ಎಂಬವರಿಗೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗುರುವಾರ ಸಂಜೆ ಮಳೆ-ಗಾಳಿ ಶುರುವಾದಾಗ ತೋಟದ ಮನೆಯ ಬಾಗಿಲು ಹಾಕಿಕೊಂಡು ಬರುವುದಾಗಿ ಹೇಳಿ ಹೋಗಿದ್ದಾರೆ. ಆದರೆ, ಮಳೆ-ಗಾಳಿ ಹೆಚ್ಚಾಗಿದ್ದರಿಂದ ಅಲ್ಲಿಯೇ ಇದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಕುಟುಂಬಸ್ಥರು ತಡರಾತ್ರಿಯಾದರೂ ಮನೆಗೆ ಮರಳಿ ಬರದೆ ಇರುವುದರಿಂದ ಗಾಬರಿಗೊಂಡು ಮೊಬೈಲ್‌ಗೆ ಕರೆ ಮಾಡಿದರೂ ಸ್ವೀಕರಿಸಿಲ್ಲ. ಇದರಿಂದ ರಾತ್ರಿಯಿಡಿ ಎಲ್ಲಡೆ ಹುಡುಕಾಡಿದ್ದಾರೆ. ಮಧ್ಯರಾತ್ರಿ 1 ಗಂಟೆ ವೇಳೆ ತೋಟದ ಮನೆಗೆ ಹೋಗಿ ಕೂಗಿದ್ದಾರೆ. ಬಾಗಿಲು ತೆರೆಯದೆ ಇದ್ದಾಗ ಬಾಗಿಲು ಮುರಿದು ಒಳಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.ಬೆಳೆಹಾನಿ ಮಾಹಿತಿ:

2024-25ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ ಬೆಳೆವಿಮೆ ಯೋಜನೆಯಡಿ ಹೆಚ್ಚಿನ ಮಳೆ ಅಥವಾ ಗಾಳಿಯಿಂದ ಉಂಟಾಗಿರುವ ಬೆಳೆಹಾನಿಯ ಬಗ್ಗೆ ವಿಮಾ ಕಂಪನಿ, ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಮಾಹಿತಿ ನೀಡುವಂತೆ ಕೊಪ್ಪಳ ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ತಿಳಿಸಿದ್ದಾರೆ. ಏ. 10ರಂದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಕೊಪ್ಪಳ ತಾಲೂಕಿನ ಬೆಣಕಲ್, ಭಾನಾಪುರ ಮತ್ತು ಹಲಗೇರಿ ಗ್ರಾಮಗಳಲ್ಲಿ 65ರಿಂದ 75 ಮಿಮೀ, ಗಂಗಾವತಿ ಹಾಗೂ ಕಾರಟಗಿ ತಾಲೂಕಿನ ಹಣವಾಳ, ಬೇವಿನಾಳ, ಚಿಕ್ಕಡಣಕನಕಲ್ ಮತ್ತು ಹುಲಿಕಲ್ ಗ್ರಾಮಗಳಲ್ಲಿ 35ರಿಂದ 50 ಮಿಮೀ ಮಳೆಯಾಗಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಆದರಿಂದ ಬೆಳೆವಿಮೆಗೆ ನೋಂದಾಯಿಸಿಕೊಂಡಿರುವ ರೈತರು ವಿಮೆಗೆ ನೋಂದಾಯಿಸಿದ ಬೆಳೆಗಳ ವಿವರ, ಹಾನಿಯ ಪ್ರಮಾಣ ಮತ್ತು ಹಾನಿಗೆ ಕಾರಣವಾದ ಪರಿಸ್ಥಿತಿಯನ್ನು ಘಟನೆ ಸಂಭವಿಸಿದ 72 ಗಂಟೆ ಒಳಗೆ ಟಾಟಾ ಎಐಜಿ ಇನ್ಸೂರೆನ್ಸ್ ಕಂಪನಿಯ ಟೋಲ್ ಫ್ರೀ ಸಂಖ್ಯೆ 1800-209-3536 ಮತ್ತು 9148442314ಕ್ಕೆ ಸಂಪರ್ಕಿಸಬಹುದು ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಜಿಲ್ಲಾ ಕೃಷಿ ಇಲಾಖೆ ಕೋರಿದೆ.ಜಿಲ್ಲಾದ್ಯಂತ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯಿಂದ 10,000ಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಬೆಳೆ ಹಾನಿಯಾಗಿದೆ. ಇಂದು ಅಂದಾಜು ಲೆಕ್ಕಾಚಾರವಾಗಿದ್ದು, ಹಾನಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

ಟಿ. ರುದ್ರೇಶಪ್ಪ, ಜೆಡಿ ಕೃಷಿ ಇಲಾಖೆ ಕೊಪ್ಪಳಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಭತ್ತ ಹಾನಿಯಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು.

ರೆಡ್ಡಿ ಶ್ರೀನಿವಾಸ, ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕೊಪ್ಪಳ ಜಿಲ್ಲೆ

Share this article