ರಾಜ್ಯದಲ್ಲಿ ಈ ಬಾರಿ ಮೀನುಗಾರರಿಗೆ 10000 ಮನೆ ಮಂಜೂರು: ಮೀನುಗಾರಿಕೆ ಸಚಿವ ಮಂಕಾಳ ವೈದ್ಯ

KannadaprabhaNewsNetwork | Updated : Aug 25 2024, 01:24 PM IST

ಸಾರಾಂಶ

ರಾಜ್ಯದಲ್ಲಿ ಈ ಬಾರಿ ಮೀನುಗಾರರಿಗೆ 10 ಸಾವಿರ ಮನೆ ಮಂಜೂರು ಮಾಡಲಾಗಿದ್ದು, ಸೂಕ್ತ ದಾಖಲಾತಿ ಒದಗಿಸುವ ಅರ್ಹ ಬಡ ಮೀನುಗಾರರಿಗೆ ಮನೆ ಒದಗಿಸಲಾಗುವುದು ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ತಿಳಿಸಿದರು.

ಹೊಸಪೇಟೆ: ರಾಜ್ಯದಲ್ಲಿ ಈ ಬಾರಿ ಮೀನುಗಾರರಿಗೆ 10 ಸಾವಿರ ಮನೆ ಮಂಜೂರು ಮಾಡಲಾಗಿದ್ದು, ಸೂಕ್ತ ದಾಖಲಾತಿ ಒದಗಿಸುವ ಅರ್ಹ ಬಡ ಮೀನುಗಾರರಿಗೆ ಮನೆ ಒದಗಿಸಲಾಗುವುದು ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ತಿಳಿಸಿದರು.

ಶನಿವಾರ ಇಲ್ಲಿ ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಬಡವರ ಪರವಾಗಿದೆ.‌ ಪ್ರತಿ ಶಾಸಕರು ಎಲ್ಲರಿಗೂ ಸ್ಪಂದಿಸುತ್ತಿದ್ದಾರೆ. ಮೀನುಗಾರರಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಕರ್ಯಗಳನ್ನು ಫಲಾನುಭವಿಗಳಿಗೆ ಡಿಬಿಟಿ ಮೂಲಕ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಮೀನುಗಾರಿಕೆ ಉತ್ಪಾದನೆ ಹೆಚ್ಚಾಗಬೇಕು ಎಂದರು.

ಸಭೆಯಲ್ಲಿ ಶಾಸಕ ಎಚ್.ಆರ್. ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌, ಮೀನುಗಾರಿಕೆ ನಿರ್ದೇಶಕ ದಿನೇಶ ಕಳ್ಳೇರ, ಮೀನುಗಾರಿಕೆ ಜಂಟಿ ನಿರ್ದೇಶಕ ಷಡಕ್ಷರಿ, ಮೀನುಗಾರಿಕೆ ಉಪ ನಿರ್ದೇಶಕ ಶಿವಣ್ಣ, ೇಸಿಂಧನೂರಿನ ಮಲ್ಲೇಶಿ, ರಾಯಚೂರಿನ ಬಸವನಗೌಡ, ಕೊಪ್ಪಳದ ಶ್ರೀನಿವಾಸ ಕುಲಕರ್ಣಿ, ಹಗರಿಬೊಮ್ಮನಹಳ್ಳಿಯ ರಿಯಾಜ್ ಅಹಮದ್, ಮುನಿರಾಬಾದನ ಕಣ್ಣಿ ಭಾಗ್ಯ ಸೇರಿದಂತೆ ಇಲಾಖೆಯ ವಿವಿಧ ಜಿಲ್ಲೆಗಳ ಹಿರಿಯ ಸಹಾಯಕ ನಿರ್ದೇಶಕರು, ಸಹಾಯಕ ನಿರ್ದೇಶಕರು ಇದ್ದರು.

ರಾಜ್ಯಪಾಲರಿಂದ ಅಧಿಕಾರ ದುರ್ಬಳಕೆ:  ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಅಧಿಕಾರ ದುರ್ಬಳಕೆ ಮಾಡಿಕೊಂಡು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಮುಡಾದಲ್ಲಿ ಹಗರಣ ನಡದೇ ಇಲ್ಲ. ಆದರೂ ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಲಾಗಿದೆ ಎಂದು ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಮೇಲೆ ಒತ್ತಡ ಹೇರಿ ಪ್ರಾಸಿಕ್ಯೂಷನ್‌ ಗೆ ಅನುಮತಿ ಕೊಡಿಸಲಾಗಿದೆ. ರಾಜ್ಯಪಾಲರ ಬಳಿ ಬಾಕಿ ಇರುವ ಉಳಿದ ಪ್ರಕರಣಗಳ ಬಗ್ಗೆ ಮೌನ ವಹಿಸಿದ್ದಾರೆ ಎಂದು ದೂರಿದರು.ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತದವರು ತನಿಖೆ ಮಾಡಿದ್ದಾರೆ. ಈ ಪ್ರಕರಣದ ಕುರಿತು ಪ್ರಾಸಿಕ್ಯೂಷನ್‌ ಕೋರಿ ಲೋಕಾಯುಕ್ತದವರು ರಾಜ್ಯಪಾಲರಿಗೆ ಕೋರಿದ್ದಾರೆ. ಆದರೂ ನೀಡಲಾಗಿಲ್ಲ. ಹಗರಣವೇ ನಡೆದಿಲ್ಲ, ಆದರೂ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜಕೀಯ ಕಾರಣಕ್ಕಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ ಎಂದರು.

ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಮ್ಮ ಹೈಕಮಾಂಡ್‌ ಗಟ್ಟಿಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ನೀಡಿದ ಕೂಡಲೇ ಸಿಎಂ ರಾಜೀನಾಮೆ ಕೊಡಲು ಬರುವುದಿಲ್ಲ. ಕಾಂಗ್ರೆಸ್‌ನ 136 ಶಾಸಕರಿದ್ದಾರೆ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡಲಾಗುತ್ತಿದೆ. ನಮ್ಮ ಹೈಕಮಾಂಡ್‌ ನಿರ್ಧರಿಸಿದರೆ, ರಾಷ್ಟ್ರಪತಿ ಭವನದ ಎದುರು ಪರೇಡ್‌ ನಡೆಸಲಾಗುವುದು ಎಂದರು. ಶಾಸಕ ಎಚ್‌.ಆರ್‌. ಗವಿಯಪ್ಪ ಇದ್ದರು.

Share this article