ಕನ್ನಡಪ್ರಭ ವಾರ್ತೆ ಯಾದಗಿರಿ
ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ಕ್ಕೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ ಪುರುಷರು 5,10,414, ಮಹಿಳೆಯರು 5,11,678 ಹಾಗೂ 68 ಮಂಗಳಮುಖಿಯರು ಸೇರಿದಂತೆ ಒಟ್ಟು 10,22,160 ಮತದಾರರು ಇದ್ದಾರೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ. ಬಿ.ಸುಶೀಲಾ ಹೇಳಿದರು.ಮಂಗಳವಾರ ಈ ಕುರಿತು ಮಾಹಿತಿ ನೀಡಿದ ಅವರು, ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಸುರಪುರ, ಶಹಾಪುರ, ಯಾದಗಿರಿ ಹಾಗೂ ಗುರುಮಠಕಲ್ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಜ.22ರಂದು ಜಿಲ್ಲಾಧಿಕಾರಿ ಕಾರ್ಯಾಲಯ, ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರ ಕಾರ್ಯಾಲಯ, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ತಹಸೀಲ್ದಾರರ ಕಾರ್ಯಾಲಯ ಯಾದಗಿರಿ, ಶಹಾಪೂರ, ಶೋರಾಪೂರ, ವಡಗೇರಾ, ಗುರುಮಿಠಕಲ್, ಹುಣಸಗಿ ಹಾಗೂ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದರು.
ಅಂತಿಮ ಮತದಾರರ ಪಟ್ಟಿಯನ್ನು ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿ ಕಚೇರಿ (https://ceokarnataka.kar.nic.in) ಹಾಗೂ ಯಾದಗಿರಿ ಜಿಲ್ಲೆ ಜಿಲ್ಲಾಧಿಕಾರಿ ಕಚೇರಿಯ (https://yadgir.nic.in) ಅಂತರ್ಜಾಲದಲ್ಲಿ ಪರಿಶೀಲಿಸಬಹುದಾಗಿದೆ ಎಂದರು.4 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ:
ಇದೇ ಜ.22 ರಂತೆ ಸುರಪುರ (ಶೋರಾಪುರ)ದಲ್ಲಿ ಪುರುಷ ಮತದಾರರು 1,41,099, ಮಹಿಳೆಯರು 1,39,136 ಹಾಗೂ 28 ಮಂಗಳಮುಖಿಯರು ಸೇರಿದಂತೆ ಒಟ್ಟು 2,80,263 ಮತದಾರರಿದ್ದಾರೆ. ಶಹಾಪುರದಲ್ಲಿ ಪುರುಷ ಮತದಾರರು 1,21,968, ಮಹಿಳೆಯರು 1,22,309 ಹಾಗೂ 15 ಮಂಗಳಮುಖಿಯರು ಸೇರಿದಂತೆ ಒಟ್ಟು 2,44,292 ಇದ್ದಾರೆ. ಯಾದಗಿರಿಯಲ್ಲಿ ಪುರುಷ ಮತದಾರರು 1,21,729, ಮಹಿಳೆಯರು 1,23,155 ಹಾಗೂ 20 ಮಂಗಳಮುಖಿಯರು ಸೇರಿದಂತೆ ಒಟ್ಟು 2,44,904 ಮತದಾರರು ಇದ್ದಾರೆ. ಗುರುಮಠಕಲನಲ್ಲಿ ಪುರುಷರು 1,25,618, ಮಹಿಳೆಯರು 1,27,078 ಹಾಗೂ ಐವರು ಮಂಗಳಮುಖಿಯರು ಸೇರಿದಂತೆ ಒಟ್ಟು 2,52,701 ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಪುರುಷರು 5,10,414, ಮಹಿಳೆಯರು 5,11,678 ಹಾಗೂ 68 ಮಂಗಳಮುಖಿಯರು ಸೇರಿದಂತೆ ಒಟ್ಟು 10,22,160 ಮತದಾರರು ಇದ್ದಾರೆ.ಸೇವಾ ಮತದಾರು:
ಸುರಪುರದಲ್ಲಿ 63 ಪುರುಷ ಹಾಗೂ ಒಬ್ಬರು ಮಹಿಳೆ ಸೇರಿ ಒಟ್ಟು 64 ಸೇವಾ ಮತದಾರರು, ಶಹಾಪೂರಲ್ಲಿ 28 ಪುರುಷ ಸೇವಾ ಮತದಾರರು, ಯಾದಗಿರಿಯಲ್ಲಿ 12 ಪುರುಷ ಮತದಾರರು ಹಾಗೂ ಗುರುಮಠಕಲ್‌ನಲ್ಲಿ 12 ಪುರುಷರು ಹಾಗೂ ಒಬ್ಬ ಮಹಿಳೆ ಸೇರಿದಂತೆ ಒಟ್ಟು 14 ಸೇವಾ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ್ ಹಾಗೂ ಚುನಾವಣಾ ತಹಸೀಲ್ದಾರರಾದ ಸಂತೋಷಿ ರಾಣಿ ಈ ಸಂದರ್ಭ ಉಪಸ್ಥಿತರಿದ್ದರು.