ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಬೆಳಗಾವಿಯಲ್ಲಿ ಡಿ. ೪ರಿಂದ ಆರಂಭವಾಗುವ ಅಧಿವೇಶನದಲ್ಲಿ ಸುಮಾರು ೧೦ ಪ್ರಮುಖ ಬಿಲ್ ಮಂಡನೆಯಾಗಲಿವೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂದು ಬಿಸಿನೆಸ್ ಅಡ್ವೈಸರಿ ಸಮಿತಿ ಸಭೆ ಸಹ ನಡೆಯಲಿದೆ. ಆ ಸಭೆಯಲ್ಲಿ ಎಲ್ಲರೂ ಸುದೀರ್ಘ ಚರ್ಚೆ ನಡೆಸಿ, ಯಾವ ಬಿಲ್ ಮಂಡಿಸಿಬೇಕು ಎಂಬುದವರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಈ ಅಧಿವೇಶನದಲ್ಲಿ ಬರಗಾಲ ಹಾಗೂ ಉತ್ತರ ಕರ್ನಾಟಕ ಭಾಗದ ಪ್ರಮುಖ ಸಮಸ್ಯೆ ಹಾಗೂ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಹೇಳಿದರು.ಐದು ರಾಜ್ಯದ ಚುನಾವಣೆ ಮತದಾನೋತ್ತರ ಫಲಿತಾಂಶ ಬಂದಿದೆ. ಬಹುತೇಕ ಸಮೀಕ್ಷೆ ನೋಡಿದರೆ ಐದರಲ್ಲಿ ಮೂರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂಬ ಫಲಿತಾಂಶ ಬಂದಿವೆ. ತೆಲಂಗಾಣ, ಛತ್ತೀಸ್‌ಗಢ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಭರವಸೆ ಇದೆ ಎಂದು ತಿಳಿಸಿದರು.
ಪಂಚರಾಜ್ಯ ಚುನಾವಣೆಯ ಫಲಿತಾಂಶ ನೋಡಿದರೆ ದೇಶದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವಿಲ್ಲ. ಕಾಂಗ್ರೆಸ್‌ನತ್ತ ಜನರ ಒಲವು ಹೆಚ್ಚಾಗಿದೆ. ಇದರಿಂದ ಪ್ರಧಾನಿ ಮೋದಿ ಅವರ ಆಡಳಿತ ಅಂತ್ಯವಾಗಲಿದೆ ಎಂದು ಹೇಳಿದರು.ರೆಸಾರ್ಟ್ ರಾಜಕಾರಣ ದಂಧೆ ಬಿಜೆಪಿ ಮನೆಗೆ ಹೋಗುವಾಗ ನಡೆಯುವುದಿಲ್ಲ. ರಾಜ್ಯದಲ್ಲಿ ೧೭ ಜನ ಶಾಸಕರ ಕರೆದೊಯ್ದು ಸರ್ಕಾರ ರಚಿಸಿದ್ದರು. ಇದು ಪ್ರಜಾಪ್ರಭುತ್ವಕ್ಕೆ ಕೊಟ್ಟ ಕೊಡಲಿ ಪೆಟ್ಟು. ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧ ನಡೆದುಕೊಂಡ ಕಾರಣ ಬಿಜೆಪಿ ರಾಜ್ಯದಲ್ಲಿ ಇಂತಹ ಪರಿಸ್ಥಿತಿಗೆ ಬಂದಿದೆ ಎಂದು ಹರಿಹಾಯ್ದರು.
ಪ್ರವಾಸೋದ್ಯಮ ಹೊಸ ನೀತಿ ಡಿಸೆಂಬರ್ ಅಂತ್ಯ, ಜನವರಿ ತಿಂಗಳ ಒಳಗೆ ಜಾರಿ ಮಾಡಲಾಗುವುದು. ನಾನು ರಾಜ್ಯದ ಬಹುತೇಕ ಕಡೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಪ್ರವಾಸದ ಅನುಭವ ಜೊತೆಗೆ ಹೊಸ ಪ್ರವಾಸೋದ್ಯಮ ನೀತಿ ಜಾರಿ ಮಾಡುತ್ತೇವೆ ಎಂದರು.ಡಿಸಿಎಂ ಶಿವಕುಮಾರ್ ಅಕ್ರಮ ಆಸ್ತಿ ಪ್ರಕರಣ ವಾಪಸ್ ಪಡೆಯುವ ವಿಚಾರ ಕೋರ್ಟಿನಲ್ಲಿ ಪ್ರಕರಣ ಇರುವುದರಿಂದ ಈ ಬಗ್ಗೆ ಮಾತನಾಡಲ್ಲ ಎಂದು ಜಾರಿದರು.