ಮಾಗಡಿ: ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಇಂಗ್ಲಿಷ್ ಮಾಧ್ಯಮ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್)ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಬಾಲಕೃಷ್ಣ ಹೇಳಿದರು.
ಕೆಪಿಎಸ್ ಶಾಲೆಗಳಿಗೆ ದೂರದ ಗ್ರಾಮಗಳಿಂದ ವಿದ್ಯಾರ್ಥಿಗಳನ್ನು ಕರೆತರಲು ಸಾರಿಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ಕೆಲವೆಡೆ ಬಸ್‌ಗಳನ್ನು ಒದಗಿಸಿದ್ದು, ಇನ್ನೂ ಒಂದು ಅಥವಾ ಎರಡು ಬಸ್‌ಗಳ ಅಗತ್ಯವಿರುವ ಪ್ರದೇಶಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಮತ್ತು ದಾನಿಗಳು ಮುಂದೆ ಬಂದು ಬಸ್‌ಗಳನ್ನು ಒದಗಿಸಿದರೆ ಇನ್ನಷ್ಟು ಅನುಕೂಲವಾಗಲಿದೆ. ತಮ್ಮ ಕ್ಷೇತ್ರದಲ್ಲಿ ಈಗಾಗಲೇ ೧೦ ಕೆಪಿಎಸ್ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಕುದೂರು ಭಾಗದಲ್ಲಿ ಕೆಪಿಎಸ್ ಶಾಲೆಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಸುತ್ತಮುತ್ತಲಿನ ಮಕ್ಕಳೂ ಈ ಶಾಲೆಗೆ ಬರುವಂತೆ ಅಗತ್ಯ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಪುರಸಭೆ, ನಗರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು. ಪ್ರತಿಯೊಂದು ಸ್ಥಳೀಯ ಸಂಸ್ಥೆ ಯಾವ ರೀತಿಯಲ್ಲಿ ಅಭಿವೃದ್ಧಿಯಾಗಬೇಕೆಂಬ ನೀಲನಕ್ಷೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ೧೦೦ ದಿನಗಳಲ್ಲಿ ಇಲಾಖೆಯಲ್ಲಿ ಗಮನಾರ್ಹ ಬದಲಾವಣೆ ತರಲಾಗುವುದು ಎಂದು ಹೇಳಿದರು.ಬರ ಪರಿಸ್ಥಿತಿಯಿಂದಾಗಿ ರೈತರಿಗೆ ಬೆಳೆ ವಿಮೆ ಮಾಡಿಸಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ವಿಮೆ ಪಾವತಿಸಲು ನೀಡಿರುವ ಅವಧಿ ವಿಸ್ತರಿಸುವಂತೆ ಕೇಂದ್ರ ಸರ್ಕಾರದ ಮೇಲೆ ರಾಜ್ಯದ ಸಂಸದರು, ಕೇಂದ್ರ ಸಚಿವರು ಒತ್ತಡ ಹೇರಬೇಕು. ತಾಲೂಕಿನಲ್ಲಿ ಸುಮಾರು ೩೦ರಿಂದ ೩೩ ಸಾವಿರ ಕುಟುಂಬಗಳು ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ಅವಲಂಬಿಸಿಕೊಂಡು ಕೃಷಿ ಮಾಡುತ್ತಿವೆ. ಅವರಲ್ಲಿ ೬ ಸಾವಿರ ರೈತರು ಮಾತ್ರ ಬೆಳೆ ವಿಮೆ ಪಾವತಿಸಿದ್ದಾರೆ. ರೈತರಿಗೆ ವಿಮೆಯ ಮಹತ್ವದ ಕುರಿತು ಜಾಗೃತಿ ಮೂಡಿಸಿದ ಬಳಿಕ ವಿಮೆ ಮಾಡಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಮೇಕೆದಾಟು ಯೋಜನೆ ಜಾರಿಗೆ ತರುವ ವಿಚಾರದಲ್ಲಿಯೂ ಕೇಂದ್ರ ಸರ್ಕಾರದ ಪಾತ್ರ ಪ್ರಮುಖವಾಗಿದೆ. ಮುಖ್ಯಮಂತ್ರಿಗಳು ಈಗಾಗಲೇ ರಾಜ್ಯದ ಸಂಸದರು ಹಾಗೂ ಕೇಂದ್ರ ಸಚಿವರೊಂದಿಗೆ ಸಭೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಹೀಗಾಗಿ ಕೇಂದ್ರದ ಅನುಮತಿಗಳನ್ನು ಪಡೆದುಕೊಳ್ಳುವ ಜವಾಬ್ದಾರಿ ರಾಜ್ಯದ ಕೇಂದ್ರ ಸಚಿವರು ಹಾಗೂ ಸಂಸದರ ಮೇಲಿದೆ ಎಂದು ಹೇಳಿದರು.
ಮಾಗಡಿ ತಾಲೂಕಿನ ಬಾಚೇನಹಟ್ಟಿ ಸರ್ಕಾರಿ ಶಾಲೆಯಲ್ಲಿ ಕೆಪಿಎಸ್ ಶಾಲೆಗಳಿಗಾಗಿ ಲಭ್ಯವಿರುವ ಸರ್ಕಾರಿ ಜಾಗವನ್ನು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.