ಜಿಲ್ಲೆಯಲ್ಲಿ 10 ಲಕ್ಷ ಲೀ. ಹಾಲು ಉತ್ಪಾದನೆ ಗುರಿ

KannadaprabhaNewsNetwork |  
Published : Jun 10, 2025, 10:34 AM IST
ಬೆಳಗಾವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ್ಟದ ಅಧಿಕಾರಿ ಮತ್ತು ಸಿಬ್ಬಂದಿಗೆ ಆಯೋಜಿಸಿದ ತರಬೇತಿ ಕಾರ್ಯಕ್ರಮವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ 10 ಲಕ್ಷ ಲೀಟರ್‌ ಹಾಲು ಉತ್ಪಾದಿಸುವ ಗುರಿ ಇದೆ. ಆದರೆ, ಈವಾಗ 2 ಲಕ್ಷಕ್ಕೂ ಅಧಿಕ ಲೀಟರ್‌ ಉತ್ಪಾದಿಸಲು ಸಾಧ್ಯವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲೆಯಲ್ಲಿ 10 ಲಕ್ಷ ಲೀಟರ್‌ ಹಾಲು ಉತ್ಪಾದಿಸುವ ಗುರಿ ಇದೆ. ಆದರೆ, ಈವಾಗ 2 ಲಕ್ಷಕ್ಕೂ ಅಧಿಕ ಲೀಟರ್‌ ಉತ್ಪಾದಿಸಲು ಸಾಧ್ಯವಾಗುತ್ತಿದೆ. ಇನ್ನೂಳಿದ ಪೂರೈಕೆ ಖಾಸಗಿ ಕಾರ್ಖಾನೆಗೆ ಮಾರಾಟವಾಗುತ್ತಿದೆ. ಹೀಗಾಗಿ ಹೆಚ್ಚಿನ ಹಾಲು ಉತ್ಪಾದಿಸಲು ಶ್ರಮಸಬೇಕಿದೆ ಎಂದು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಇಲ್ಲಿನ ಗಾಂಧಿನಗರದ ಸಂಕಮ ಹೊಟೇಲ್ ಸಭಾಭವನದಲ್ಲಿ ಸೋಮವಾರ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ಆಯೋಜಿಸಲಾದ ಬೆಳಗಾವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧಿಕಾರಿ, ಸಿಬ್ಬಂದಿಗೆ ಒಂದು ದಿನದ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚನ್ನಪಟ್ಟಣದಲ್ಲಿ ನಿತ್ಯವೂ ಲಕ್ಷಾಂತರ ಲೀಟರ್‌ ಹಾಲು ಉತ್ಪಾದನೆ ಇದೆ. ಬೆಳಗಾವಿಯಲ್ಲೂ ಸಹ ಹೆಚ್ಚಿನ ಹಾಲು ಉತ್ಪಾದಿಸಲು ಗುರಿ ಹೊಂದಬೇಕು. ಗುಣಮಟ್ಟದ ಹಾಲು ಪೂರೈಕೆ ಮಾಡಿ, ಡೈರಿ ಹಾಗೂ ಒಕ್ಕೂಟದ ಪ್ರಗತಿಗೆ ಹಾಲು ಉತ್ಪಾದಕ ರೈತರು ಸಹಕರಿಸಿ, ಹೆಚ್ಚಿನ ಲಾಭ ಪಡೆದುಕೊಳ್ಳಬೇಕು ಎಂದರು.

ಕೋರಾನಾ ಸಂದರ್ಭದಲ್ಲಿ ರೈತರಿಗೆ ಸಹಕಾರ ನೀಡಿದ್ದು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಖಾಸಗಿ ಉತ್ಪಾದಕರು ಕೈ ಚೆಲ್ಲಿದರು. ಅವಾಗ ರೈತರಿಗೆ ನೆರವಾಗಿದ್ದು ನಾವು. ಹೀಗಾಗಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕೆಎಂಎಪ್‌ಗೆ, ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಕ್ಕೆ ಹಾಲನ್ನು ಪೂರೈಸಬೇಕು ಎಂದು ಮನವಿ ಮಾಡಿಕೊಂಡರು.

ಸಹಕಾರ- ಸಂಸ್ಥೆಗಳ ಅಭಿವೃದ್ಧಿಗೆ ಸಿಬ್ಬಂದಿ, ಜನರ ಸಹಕಾರ ಬಹಳಷ್ಟು ಅಗತ್ಯವಾಗಿದೆ. ಸಹಕಾರಿ ಸಂಘಗಳು ಕೆಲವು ಅಭಿವೃದ್ಧಿ ಹೊಂದಿವೆ, ಇನ್ನೂ ಕೆಲವು ಅಭಿವೃದ್ಧಿಯಾಗಬೇಕಿದೆ. ಬೆಳಗಾವಿ ಜಿಲ್ಲಾ ಹಾಲು ಅಭಿವೃದ್ಧಿ ಆಗಬೇಕಾದರೆ ಸಿಬ್ಬಂದಿ ನಿಷ್ಠೆ, ಪ್ರಾಮಾಣಿಕ, ಹೊಸತನ ವಿಶೇಷ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಮೂಲಕ ಅಭಿವೃದ್ಧಿ ಹೊಂದಲು ಸಾಧ್ಯ. ಹೈನುಗಾರಿಕೆ ಪ್ರಮುಖ ಉದ್ಯಮವಾಗಿದೆ. ಬೇಸಾಯದ ಜೊತೆಗೆ ಹೈನುಗಾರಿಕೆ ಹೆಚ್ಚಿನ ಪ್ರಾಮುಖ್ಯತೆ ಹಾಗೂ ವೈಜ್ಞಾನಿಕವಾಗಿ ಹಸು ಸಾಕಾಣಿಕೆ ಮಾಡುವುದನ್ನು ಅಳವಡಿಸಿಕೊಳ್ಳಬೇಕು. ಹಸು ಎರಡು ಹೊತ್ತು ಹಾಲು ಕೊಡುವ ಜೊತೆಗೆ ನಮ್ಮ ಜೀವನಾಡಿಯಾಗಿದೆ. ಸಹಕಾರ ಬೆಳೆದರೆ, ರೈತರು ಅಭಿವೃದ್ಧಿ ಹೊಂದುತ್ತಾರೆ. ಹೀಗಾಗಿ ಆಡಳಿತ ಮಂಡಳಿ, ಸಿಬ್ಬಂದಿ, ರೈತರ ಸಹಕಾರದಿಂದ ಇವೆಲ್ಲವೂ ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯೂನಿಯನ್ ಅಧ್ಯಕ್ಷ ಬಸಗೌಡ ಡಿ. ಪಾಟೀಲ ಉಪಾಧ್ಯಕ್ಷ ಸಂಜು ಸೊನ್ನಪ್ಪನವರ, ನಿರ್ದೇಶಕರಾದ ಈಶ್ವರಚಂದ್ರ ಬ. ಇಂಗಳಗಿ, ಬಸಪ್ಪ ಸಂತಿ, ಶಂಕರಗೌಡ ದೊಡ್ಡಗೌಡರ, ಬಸಗೌಡ ಪಾಟೀಲ, ವರ್ಧಮಾನ ಭೋಳಿ, ಸಂತೋಷ ಸಹಕಾರ ಸಂಘಗಳ ಜಂಟಿ ನಿಬಂಧಕರು ಡಾ.ಸುರೇಶಗೌಡ, ಸಹಕಾರ ಸಂಘಗಳ ಉಪನಿಬಂಧಕರು ರವೀಂದ್ರ ಪಾಟೀಲ್, ಚಂದ್ರಶೇಖರ, ಎಸ್.ಎಸ್.ಅಂಗಡಿ, ಡಾ. ರಾಕೇಶ ಕೊಣ್ಣೂರ, ಡಾ.ರಾಕೇಶ ಸಿ.ಎಂ, ಮುಜಾಹಿದ್ ಪೀರಜಾದೆ, ಯೂನಿಯನ್ ಸಿಇಒ ಹಾಲಪ್ಪ ಜಗ್ಗಿನವರ ಸ್ವಾಗತಿಸಿದರು.‌ ಶ್ರೀಶೈಲ ಯಡಹಳ್ಳಿ ನಿರೂಪಿಸಿ, ವಂದಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ