ಕನ್ನಡಪ್ರಭ ವಾರ್ತೆ ಮಂಡ್ಯ
೨ ಕೆಜಿ ೭೧೭ ಗ್ರಾಂ ತೂಕದ ಬರೋಬ್ಬರಿ ೧೦ ಮುದ್ದೆ ತಿಂದು ಬೀಗಿದ ಈರೇಗೌಡ ರಾಜ್ಯದ ವಿವಿಧೆಡೆ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಬಹುಮಾನ ಗೆದ್ದುಕೊಂಡಿದ್ದಾರೆ. ೧ಕೆಜಿ ೬೫೨ ಗ್ರಾಂ ತೂಕದ ೬ ಮುದ್ದೆ ತಿಂದ ದಿಲೀಪ್ ದ್ವಿತೀಯ ಸ್ಥಾನ.೧ಕೆಜಿ ೫೪೪ ಗ್ರಾಂ ತೂಕದ ೬ ಮುದ್ದೆ ತಿಂದ ರವೀಂದ್ರ ತೃತೀಯ ಬಹುಮಾನ ಪಡೆದುಕೊಂಡರು.
ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಜಂಟಿ ಕೃಷಿ ನಿರ್ದೇಶಕ ಅಶೋಕ್, ೭ ಮುದ್ದೆ ತಿಂದು ಸ್ಪರ್ಧಾಳುಗಳನ್ನು ಹುರಿದುಂಬಿಸಿದರು. ಮಂಡ್ಯದ ಆಹಾರ ಪದ್ಧತಿ ಉಳಿಯಬೇಕು ಎಂಬ ನಿಟ್ಟಿನಲ್ಲಿ ರಾಗಿ ಮುದ್ದೆ ತಿನ್ನುವ ಸರ್ಧೆ ಆಯೋಜಿಸಲಾಗಿತ್ತು.ಊಟ ಸ್ಪರ್ಧೆಯಲ್ಲಿ ೫೦೦ ರು. ಪ್ರವೇಶ ಶುಲ್ಕದೊಂದಿಗೆ ೯ ಜನರು ಪಾಲ್ಗೊಂಡಿದ್ದರು. ಪ್ರಥಮ ಬಹುಮಾನ ೩೦೦೦ ರು., ದ್ವಿತೀಯ ೨೦೦೦ ರು., ತೃತೀಯ ೧೦೦೦ ರು. ಬಹುಮಾನ ವಿತರಿಸಿದರು.ಬಾಯಲ್ಲಿ ನೀರೂರಿಸಿದ ಸಿರಿಧಾನ್ಯ ತಿನಿಸುಗಳು..!ಬಾಯಲ್ಲಿ ನೀರೂರಿಸುವ ಸಿರಿಧಾನ್ಯದ ತಿಂಡಿ-ತಿನಿಸುಗಳು, ವೈವಿಧ್ಯಮಯ ಖಾದ್ಯಗಳು, ಆರೋಗ್ಯಕರ ಉತ್ಪನ್ನಗಳು ಸೇರಿದಂತೆ ಹಲವು ಬಗೆಯ, ವಿಭಿನ್ನ ಮಾದರಿಯ ಆಹಾರಗಳು ಸಿರಿಧಾನ್ಯ ಹಬ್ಬದಲ್ಲಿ ಜನರನ್ನು ಆಕರ್ಷಿಸಿದವು.
ಸಿರಿಧಾನ್ಯಗಳಿಂದ ತಯಾರಿಸಲಾದ ದೋಸೆ, ವಡೆ, ಬೆಲ್ಲದ ರವೆ ಉಂಡೆ, ಕಜ್ಜಾಯ, ಇಡ್ಲಿ, ಬಿಸಿಬೇಳೆ ಬಾತ್, ಸಜ್ಜೆ ದೋಸೆ, ರಾಗಿ ಪಕೋಡ, ರಾಗಿ ಇಡ್ಲಿ, ಪೊಂಗಲ್, ನವಣೆ ಸಂಡಿಗೆ, ನತ್ತು ನವಣೆ ಗುಲಾಬ್ ಜಾಮೂನ್, ನವಣೆ ಇಡ್ಲಿ, ಸಿರಿಧಾನ್ಯಗಳ ರೊಟ್ಟಿ, ಖಾರಪುರಿ, ದೊಡ್ಡಪತ್ರೆ ಬಜ್ಜಿ, ಚುರುಮುರಿ, ಸಿರಿಧಾನ್ಯ ಹೋಳಿಗೆ, ಮಸಾಲೆ ವಡೆ, ಸಿಹಿ ಮತ್ತು ಖಾರ ಪದಾರ್ಥಗಳು ಮೇಳಕ್ಕೆ ಬಂದ ಜನರನ್ನು ಮಳಿಗೆಗಳತ್ತ ಆಕರ್ಷಿಸಿದವು.
ಇನ್ನು ಸಿರಿಧಾನ್ಯ ಉತ್ಪನ್ನಗಳಾದ ರಾಗಿ ಮಾಲ್ಟ್, ಮಸಾಲಾ ಉತ್ಪನ್ನಗಳು, ನವಣೆ ಉಂಡೆ, ಚಕ್ಕುಲಿ, ನಿಪ್ಪಟ್ಟು, ಹಪ್ಪಳ, ಉಪ್ಪಿನಕಾಯಿ, ಸಾಂಬಾರ್‌ಪುಡಿ, ಬಿಸಿಬೇಳೆಬಾತ್ ಪೌಡರ್, ಪುಳಿಯೊಗರೆ ಮಿಕ್ಸ್, ರಾಗಿ ಹಪ್ಪಳ, ಸಿರಿಧಾನ್ಯ ಮಾಲ್ಟ್, ಕೋಲ್ಡ್ ಪ್ರೆಸ್ ಆಯಿಲ್, ನೈಸರ್ಗಿಕ ತೈಲ, ಹುಣಸೆಹಣ್ಣಿನ ಉಪ ಉತ್ಪನ್ನಗಳು, ಸಾವಯವ ತರಕಾರಿ, ಸೊಪ್ಪು, ಹಣ್ಣುಗಳು ವಿಶೇಷವಾಗಿ ಗಮನಸೆಳೆದವು.