ಧಾರವಾಡ: ಕೃತಕ ಬುದ್ಧಿಮತ್ತೆ (ಎಐ) ಪ್ರತಿಭೆಗಳನ್ನು ಮತ್ತಷ್ಟು ಪೋತ್ಸಾಹಿಸಲು ಕರ್ನಾಟಕ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ (ಐಟಿ ಮತ್ತು ಬಿಟಿ)ಯಿಂದ ಸ್ಥಳೀಯ ಆರ್ಥಿಕ ವೇಗವರ್ಧಕ (ಎಲ್‌ಇಎಪಿ) ಯೋಜನೆ ಎಂಬ ವಿನೂತನ ಕಾರ್ಯಕ್ರಮ ಪ್ರಾರಂಭಿಸಿದೆ. ರಾಜ್ಯ ಸರ್ಕಾರ ಈ ಯೋಜನೆಗೆ ಒಂದು ಸಾವಿರ ಕೋಟಿ ರು. ಮೀಸಲಿಟ್ಟಿದೆ ಎಂದು ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕೆಐಟಿಎಸ್) ವ್ಯವಸ್ಥಾಪಕ ನಿರ್ದೇಶಕ ಅಧಿಕಾರಿ ರಾಹುಲ್ ಸಂಕನೂರ ಮಾಹಿತಿ ನೀಡಿದರು.
ಇಲ್ಲಿಯ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಗುರುವಾರ ಆಯೋಜಿಸಿದ್ದ ಜನ್ ಎಐ- ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ 7 ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಹೊಂದಿರುವ ಬೆಂಗಳೂರಿನಲ್ಲಿ ಭಾರತದ ಒಟ್ಟು ಸ್ಟಾರ್ಟ್‌ಅಪ್‌ಗಳಲ್ಲಿ ಶೇ. 20ರಷ್ಟಿವೆ. ಇದೀಗ ಲೀಪ್ ಯೋಜನೆ ಅಡಿ ಬೆಂಗಳೂರು ಹೊರತುಪಡಿಸಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲುಬುರ್ಗಿ, ದಾವಣಗೆರೆಯಂತಹ ನಗರಗಳಲ್ಲಿ ಐಟಿ ಬಿಟಿ ತಂತ್ರಜ್ಞಾನ ಹೇರಳವಾಗಿ ಬೆಳೆಯುವಂತೆ ಮಾಡಲಾಗುವುದು ಎಂದರು.ಎಂಐಟಿ ಮೀಡಿಯಾ ಲ್ಯಾಬ್ಸ್‌ನ ಪ್ರೊಫೆಸರ್ ಸಂತನು ಭಟ್ಟಾಚಾರ್ಯ ಮಾತನಾಡಿ, ಎಐ ಜಗತ್ತಿನಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿದ್ದು, ಸ್ಥಳೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ನಾವು ನಿರ್ದಿಷ್ಟ ಸೂಕ್ಷ್ಮ ಟೆಂಪ್ಲೇಟ್‌ಗಳನ್ನು ಅಭಿವೃದ್ಧಿಪಡಿಸಬೇಕಿದೆ. ಭಾರತವು ಇನ್ನಷ್ಟು ಶೀಘ್ರ ಬೆಳೆಯಬೇಕಾದರೆ, ಗ್ರಾಮೀಣ ಆದಾಯವು ಗಮನಾರ್ಹವಾಗಿ ಹೆಚ್ಚಾಗಬೇಕು. ಕೃಷಿ, ಆರೋಗ್ಯ ರಕ್ಷಣೆ ಮತ್ತು ಭಾಷಾ ತಂತ್ರಜ್ಞಾನಗಳನ್ನು ಬಲಪಡಿಸುವಲ್ಲಿ ಎಐ ಪರಿವರ್ತನಾತ್ಮಕ ಪಾತ್ರವನ್ನು ವಹಿಸುತ್ತದೆ. ಯುವ ತಂತ್ರಜ್ಞರು, ಸಣ್ಣ ಮಾರಾಟಗಾರರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಅನುವು ಮಾಡಿಕೊಡುವ ಎಐ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಬೇಕು. ಇದರಿಂದಾಗಿ ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸಬಹುದು ಎಂದರು.
ಹೆಡ್ ಹೆಲ್ಡ್ ಹೈ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಮದನ್ ಪದಕಿ ಮಾತನಾಡಿ, ಎಐ ಮೂಲಕ ಗ್ರಾಮೀಣ ಸಮುದಾಯಗಳನ್ನು ಸಬಲೀಕರಣಗೊಳಿಸುವ ಗುರಿಯೊಂದಿಗೆ ಜನ್ ಎಐ ಉಪಕ್ರಮವನ್ನು ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ 3,500 ಜನರು ಜನ್ ಎಐಗೆ ನೋಂದಾಯಿಸಿಕೊಂಡಿದ್ದಾರೆ ಮತ್ತು 1,500 ಜನರು ತರಬೇತಿ ಪಡೆದುಕೊಂಡಿದ್ದಾರೆ ಎಂದರು.ಧಾರವಾಡದ ಐಐಐಟಿ ನಿರ್ದೇಶಕ ಮಹಾದೇವ್ ಪ್ರಸನ್ನ, ಸಂಸ್ಥೆಯು ಸಾಮಾನ್ಯ ಜನರಿಗೆ ಎಐ ಲಭ್ಯವಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅದಕ್ಕಾಗಿ ವಿವಿಧ ತಂತ್ರಜ್ಞರು ನಮಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ. ಎಐ ವೇಗವಾಗಿ ಬೆಳೆಯುತ್ತಿದ್ದು, ಸವಾಲುಗಳಿಗೆ ಪರಿಹಾರಗಳನ್ನು ನೀಡುತ್ತದೆ. ನಮ್ಮ ವಿದ್ಯಾರ್ಥಿಗಳು ದೈನಂದಿನ ಸಮಸ್ಯೆಗಳನ್ನು ಪರಿಹರಿಸುವುದಲ್ಲದೆ ವ್ಯವಹಾರಗಳನ್ನು ವೇಗಗೊಳಿಸಲು ಸಹಾಯ ಮಾಡುವ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸಲು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಎಐ ಅಂತಿಮವಾಗಿ ಯುಪಿಐ ಪಾವತಿಗಳಂತೆ ಜನರಿಗೆ ಸಹಾಯ ಮಾಡುವುದನ್ನು ಇನ್ನಷ್ಟೇ ನಾವು ಸಾಧಿಸಬೇಕು ಎಂದರು.
ಐಐಐಟಿ- ಧಾರವಾಡದ ವಿದ್ಯಾರ್ಥಿಗಳು ಪ್ರಸ್ತುತ ಎರಡು ಎಐ- ಚಾಲಿತ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಒಂದು ಕೃಷಿಗಾಗಿ ಮತ್ತು ಇನ್ನೊಂದು ಆರೋಗ್ಯ ರಕ್ಷಣೆಗಾಗಿ ಎಂದು ಅವರು ಕೃಷಿ ಅಪ್ಲಿಕೇಶನ್ ರೈತರಿಗೆ ರೋಗಪೀಡಿತ ಬೆಳೆಗಳ ಛಾಯಾಚಿತ್ರವನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ನಂತರ ಎಐ ತಕ್ಷಣವೇ ಸಮಸ್ಯೆಯನ್ನು ಪತ್ತೆ ಹಚ್ಚುತ್ತದೆ ಮತ್ತು ಪರಿಹಾರಗಳನ್ನು ಸೂಚಿಸುತ್ತದೆ. ಅದೇ ರೀತಿ, ಮನೋವೈದ್ಯಕೀಯ ಬೆಂಬಲವನ್ನು ಒದಗಿಸಲು ಮಾನಸಿಕ ಆರೋಗ್ಯ ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.