ಮಕ್ಕಳ ಉಚಿತ ಸಮವಸ್ತ್ರ ಹೊಲಿಸಲು ₹1000 ಬೇಕು!

KannadaprabhaNewsNetwork | Updated : Jun 08 2024, 10:12 AM IST

ಸಾರಾಂಶ

ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಉಚಿತ ಸಮವಸ್ತ್ರವನ್ನು ಹೊಲಿಸುವ ವೆಚ್ಚದ ಬಗ್ಗೆ ಕುರಿತು ಪೋಷಕರಿಗೆ ಚಿಂತೆಯಾಗಿರುವುದು.

ಲಿಂಗರಾಜು ಕೋರಾ

  ಬೆಂಗಳೂರು : ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ಹೊಲಿಸುವ ವೆಚ್ಚವನ್ನು ಸರ್ಕಾರವೇ ನೀಡಬೇಕು, ಇಲ್ಲದಿದ್ದರೆ ಈ ಹಿಂದೆ ಇದ್ದಂತೆ ರೆಡಿಮೇಡ್‌ ಸಮವಸ್ತ್ರ ನೀಡಬೇಕೆಂಬ ಪೋಷಕರ ಆಗ್ರಹಕ್ಕೆ ಈ ಬಾರಿಯೂ ಮನ್ನಣೆ ಸಿಕ್ಕಿಲ್ಲ. ಪ್ರಸಕ್ತ ಸಾಲಿನ ಶಾಲಾರಂಭದ ದಿನವೇ ಎರಡೂ ಜೊತೆ ಉಚಿತ ಸಮವಸ್ತ್ರಗಳ ಬಟ್ಟೆಯನ್ನು ಮಕ್ಕಳಿಗೆ ನೀಡಿರುವ ಸರ್ಕಾರ, ಹೊಲಿಗೆ ವೆಚ್ಚವನ್ನು ಪೋಷಕರಿಗೇ ಹೊರಿಸಿದೆ.

ಈ ಬಾರಿ ಸರ್ಕಾರಿ ಶಾಲೆಗಳಲ್ಲಿನ 1ರಿಂದ 10ನೇ ತರಗತಿ ವರೆಗಿನ 42 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ವಿತರಿಸಲು ಸರಬರಾಜು ಮಾಡಿರುವ ಎರಡು ಜೊತೆ ಸಮವಸ್ತ್ರಗಳನ್ನು ಶಿಕ್ಷಕರು ಶಾಲಾರಂಭದ ದಿನವೇ ವಿತರಿಸಿ ತಮ್ಮ ಪೋಷಕರಿಗೆ ಹೇಳಿ ಹೊಲಿಸಿಕೊಂಡು ಬರುವಂತೆ ಸೂಚಿಸಿದ್ದಾರೆ. ಇದಕ್ಕೆ ಕೆಲವೆಡೆ ಶಾಲೆಗಳಿಗೆ ಬಂದ ಪೋಷಕರು ಶಿಕ್ಷಕರ ಮುಂದೆ ಅಸಮಾಧಾನ ವ್ಯಕ್ತಪಡಿಸಿರುವ ಘಟನೆಗಳು ನಡೆದಿವೆ.

ಹೊಲಿಗೆ ವೆಚ್ಚ ವರ್ಷದಿಂದ ವರ್ಷಕ್ಕೆ ದುಬಾರಿಯಾಗುತ್ತಲೇ ಇದೆ. ಗಂಡು ಮಕ್ಕಳಿಗಾಗಲಿ ಹೆಣ್ಣು ಮಕ್ಕಳಿಗಾಗಲಿ ಒಂದು ಜೊತೆ ಬಟ್ಟೆ ಹೊಲಿಸಲು ಕನಿಷ್ಠ 500ರಿಂದ ಗರಿಷ್ಠ 800 ರು. ನೀಡಬೇಕು. ಎರಡು ಜೊತೆ ಸಮವಸ್ತ್ರಕ್ಕೆ ಇದರ ದುಪ್ಪಟ್ಟು ಹೊರೆಯಾಗುತ್ತದೆ. ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವ ಬಡ, ಕೂಲಿ ಕಾರ್ಮಿಕ ಕುಟುಂಬದವರು ಇಷ್ಟು ಮೊತ್ತವನ್ನು ಭರಿಸಲು ಸಾಧ್ಯವಿಲ್ಲ. ಹಾಗಾಗಿ ಸರ್ಕಾರವೇ ಹೊಲಿಗೆ ವೆಚ್ಚ ಭರಿಸಬೇಕು ಇಲ್ಲವೇ ರೆಡಿಮೇಡ್‌ ಸಮವಸ್ತ್ರ ಖರೀದಿಸಿ ನೀಡಬೇಕು ಎನ್ನುವುದು ಶಾಲಾ ಮೇಲುಸ್ತುವಾರಿ ಸಮಿತಿಗಳು ಹಾಗೂ ಪಾಲಕ ಪೋಷಕರ ವರ್ಗದ ಆಗ್ರಹವಾಗಿದೆ.

ಮಾಸ್ಟರ್‌ ಮಂಜುನಾಥ್‌ ಪ್ರಕರಣ ಸೇರಿದಂತೆ ಕೆಲ ಪ್ರಕರಣಗಳಲ್ಲಿ ಮಕ್ಕಳಿಗೆ ಹೊಲಿಗೆ ಮಾಡಿಸಿದ ಸಮವಸ್ತ್ರ ನೀಡುವಂತೆ ಹೈಕೋರ್ಟ್‌ ಚಾಟಿ ಬೀಸಿದ ಉದಾಹರಣೆಗಳಿವೆ. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. 2019-20ನೇ ಸಾಲಿಗಿಂತ ಹಿಂದಿನ ವರ್ಷಗಳಲ್ಲಿ ರೆಡಿಮೇಡ್‌ ಸಮವಸ್ತ್ರಗಳನ್ನೇ ಖರೀದಿಸಲು ಆಯಾ ಶಾಲಾ ಎಸ್‌ಡಿಎಂಸಿಗಳಿಗೆ ನಿಗದಿತ ಹಣ ನೀಡುತ್ತಿದ್ದ ಸರ್ಕಾರ ಸಮವಸ್ತ್ರ ಖರೀದಿಯಲ್ಲಿ ಅಕ್ರಮ, ಗುಣಮಟ್ಟ ಇರುವುದಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ನಂತರ ಬಟ್ಟೆ ನೀಡಲಾರಂಭಿಸಿದೆ. ಅಕ್ರಮ ತಡೆಗಟ್ಟಿ, ಗುಣಮಟ್ಟದ ಸಮವಸ್ತ್ರ ಖರೀದಿಗೆ ಕ್ರಮ ವಹಿಸುವ ಬದಲು ಮಕ್ಕಳು ಅಥವಾ ಅವರ ಪೋಷಕರ ಕಿಸೆಗೆ ಹೊರೆಯಾಗುವ ನಿರ್ಧಾರ ಕೈಗೊಂಡಿದ್ದು ಸರಿಯಲ್ಲ ಎನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯ. ಶಾಲಾ ಮಕ್ಕಳ ಉಚಿತ ಸಮವಸ್ತ್ರದ ಬಟ್ಟೆ ಹೊಲಿಸುವ ವೆಚ್ಚವನ್ನು ಪೋಷಕರೇ ಭರಿಸಬೇಕೆಂಬುದು ಹಿಂದಿನ ಕೆಲ ವರ್ಷಗಳಿಂದಲೂ ಜಾರಿಯಲ್ಲಿದೆ. ಹೊಲಿಗೆ ವೆಚ್ಚ ನೀಡಿ, ಇಲ್ಲವೇ ರೆಡಿಮೇಡ್‌ ಸಮವಸ್ತ್ರ ನೀಡಿ ಎಂದು ಪೋಷಕರು ಕೇಳುತ್ತಿದ್ದರೆ ಈ ಬಗ್ಗೆ ನಮಗೆ ಮನವಿ ಸಲ್ಲಿಸಬಹುದು. ಸರ್ಕಾರದ ಗಮನಕ್ಕೆ ತರಲಾಗುವುದು.

- ರಿತೇಶ್‌ ಕುಮಾರ್‌ ಸಿಂಗ್‌, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ

Share this article