ಹುಬ್ಬಳ್ಳಿ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಅವಳಿ ನಗರದಲ್ಲಿ 1300 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅದರಲ್ಲಿ 1008 ಮನೆಗಳನ್ನು ಮೇ ಮೊದಲ ವಾರದಲ್ಲಿ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುವುದು ಎಂದು ವಸತಿ, ವಕ್ಫ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಅವರು ಇಲ್ಲಿನ ಮಂಟೂರ ರಸ್ತೆ, ಹೊಸಯಲ್ಲಾಪುರ ಗ್ರಾಮದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಯೋಜನೆಯಡಿ ನಿರ್ಮಾಣವಾಗಿರುವ ಮನೆಗಳ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಈ ಬಾರಿ 42,345 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುತ್ತಿದೆ. ಕಳೆದ ಬಾರಿ 36,789 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿತ್ತು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಒಟ್ಟಾರೆಯಾಗಿ 1,80, 253 ಮನೆಗಳನ್ನು ನಿರ್ಮಿಸಲು ಮಂಜೂರಾತಿ ದೊರೆತಿತ್ತು. ಒಂದು ಮನೆಗೆ ₹7.50 ಲಕ್ಷ ವೆಚ್ಚವಾಗಲಿದೆ. ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ₹1.50 ಲಕ್ಷ ಸಹಾಯಧನ ನೀಡಲಾಗುತ್ತದೆ. ರಾಜ್ಯ ಸರ್ಕಾರದಿಂದ ₹1.20 ಲಕ್ಷ ಸಾಮಾನ್ಯ ಫಲಾನುಭವಿಗಳಿಗೆ ಹಾಗೂ ಎಸ್.ಸಿ, ಎಸ್.ಟಿ. ಫಲಾನುಭವಿಗಳಿಗೆ ₹2 ಲಕ್ಷ ಸಹಾಯಧನವನ್ನು ಒದಗಿಸಲಾಗುತ್ತದೆ. ಈ ಸಹಾಯಧನದಲ್ಲಿ ಫಲಾನುಭವಿಗಳಿಗೆ ಮನೆಯನ್ನು ನಿರ್ಮಾಣ ಮಾಡಲು ಕಷ್ಟವಾಗುತ್ತದೆ. 1,80,253 ಮನೆಗಳಿಗೆ ₹7,400 ಕೋಟಿ ಖರ್ಚಾಗಲಿದೆ. ಈಗಾಗಲೇ ₹310 ಕೋಟಿ ಮಾತ್ರ ಬಿಡುಗಡೆಯಾಗಿದೆ. ಹೀಗಾಗಿ ಮನೆಗಳ ನಿರ್ಮಾಣ ಕಾಮಗಾರಿ ಕುಂಠಿತವಾಗಿತ್ತು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ರಾಜೀವಗಾಂಧಿ ಆವಾಸ ಯೋಜನೆಯಡಿ 48 ಸಾವಿರಕ್ಕೂ ಅಧಿಕ ಮನೆಗಳನ್ನು ಮಂಜೂರು ಮಾಡಲಾಗಿತ್ತು. ₹2,100 ಕೋಟಿ ಹಣ ಬಿಡುಗಡೆ ಮಾಡಬೇಕಾಗಿತ್ತು. ಆದರೆ ₹109 ಕೋಟಿ ಮಾತ್ರ ಬಿಡುಗಡೆಯಾಗಿತ್ತು. ಎರಡು ಯೋಜನೆಗಳು ಸೇರಿ ಒಟ್ಟಾರೆ 2 ಲಕ್ಷ 30 ಸಾವಿರ ಮನೆಗಳಿಗೆ ₹9.50 ಸಾವಿರ ಕೋಟಿ ಹಣ ಬೇಕಾಗುತ್ತದೆ. ಕಳೆದ ವರ್ಷ ₹500 ಕೋಟಿ ಹಣ ಬಿಡುಗಡೆಗೊಳಿಸಿದ ನಂತರ 36,789 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಪ್ರಸಕ್ತ ವರ್ಷದಲ್ಲಿ 47,355 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುವುದು. ಮುಂದಿನ ವರ್ಷದಲ್ಲಿ 35ರಿಂದ 40 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವ ಯೋಜನೆ ರೂಪಿಸಲಾಗಿದೆ ಎಂದರು.
2016ರಲ್ಲಿ ಮುಖ್ಯಮಂತ್ರಿಗಳು ಬೀದಿ ವ್ಯಾಪಾರಸ್ಥರು, ಆಟೋ ಚಾಲಕರಿಗೆ ಸ್ವಂತ ಮನೆ ಹೊಂದುವ ಉದ್ದೇಶದಿಂದ ಬೆಂಗಳೂರಿನಲ್ಲಿ 1 ಲಕ್ಷ ಮನೆ ನಿರ್ಮಿಸುವ ಯೋಜನೆ ರೂಪಿಸಿದ್ದರು. ಸುಮಾರು 1023 ಎಕರೆ ಭೂಮಿಯನ್ನು ರಾಜೀವಗಾಂಧಿ ಆವಾಸ ಯೋಜನೆಗೆ ನೀಡಲಾಗಿತ್ತು. 47 ಸಾವಿರ ಮನೆಗಳನ್ನು ಆನ್‌ಲೈನ್ ಟೆಂಡರ್ ಕರೆದು ಪ್ರಾರಂಭಿಸಲಾಗಿತ್ತು. ಮನೆ ನಿರ್ಮಾಣಕ್ಕೆ ಸುಮಾರು 7 ರಿಂದ 8 ಲಕ್ಷ ವೆಚ್ಚವಾಗಲಿದೆ. ಕೇಂದ್ರ ಸರ್ಕಾರದಿಂದ ₹1.50 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ ₹1.50 ಲಕ್ಷ ಸಹಾಯಧನ ದೊರೆಯಲಿದೆ. ಫಲಾನುಭವಿಗಳು ಉಳಿದ ಹಣವನ್ನು ಬ್ಯಾಂಕಿನಿಂದ ಲೋನ್ ಮಾಡಿಸಿಕೊಳ್ಳಬಹುದಾಗಿತ್ತು ಎಂದರು.ಎರಡನೇ ಹಂತದಲ್ಲಿ ನಿರ್ಮಾಣವಾಗಿರುವ ಮನೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿಗಳು ಆಯಾ ಜಿಲ್ಲೆಗಳ ಶಾಸಕರು, ಸಚಿವರ ಸಮ್ಮುಖದಲ್ಲಿ ಉದ್ಘಾಟನೆ ಮಾಡುವರು ಎಂದರು. ಸ್ಲಂ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿದರು. ಈ ವೇಳೆ ಹೆಸ್ಕಾಂ ಅಧ್ಯಕ್ಷರಾದ ಸೈಯದ್ ಅಜೀಮಪೀರ್ ಖಾದ್ರಿ, ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಂಸದ ಐ.ಜಿ. ಸನದಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಪಾಲಿಕೆಯ ಆಯುಕ್ತ ರುದ್ರೇಶ ಘಾಳಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತ ಅಶೋಕ ಡಿ.ಆರ್, ಮುಖ್ಯ ಎಂಜಿನಿಯರ್ ಎಚ್.ಪಿ. ಸುಧೀರ್, ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ ಸೇರಿದಂತೆ ಹಲವರಿದ್ದರು.