೩ ವರ್ಷದಲ್ಲಿ ರಾಜ್ಯದಲ್ಲಿ ೧೦೪೨ ಬಾಲ್ಯವಿವಾಹ

KannadaprabhaNewsNetwork | Published : Dec 16, 2023 2:01 AM

ಸಾರಾಂಶ

೩ ವರ್ಷದಲ್ಲಿ ರಾಜ್ಯದಲ್ಲಿ ೧೦೪೨ ಬಾಲ್ಯವಿವಾಹ, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲೇ ಹೆಚ್ಚು ಪ್ರಕರಣ ಬೆಳಕಿಗೆ, ಬಾಲಕಿಯರ ವಿವಾಹ ಶೇ.೨೪.೭, ಬಾಲಕರದ್ದು ಶೇ.೭.೨ ರಷ್ಟು ಹೆಚ್ಚಳ, ವಿಧಾನ ಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು ೧೦೪೨ ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ. ೨೦೨೦-೨೧ರಲ್ಲಿ ೨೯೬, ೨೦೨೧-೨೨ರಲ್ಲಿ ೪೧೮ ಹಾಗೂ ೨೦೨೨-೨೩ರಲ್ಲಿ ೩೨೮ ಪ್ರಕರಣಗಳು ಬೆಳಕಿಗೆ ಬಂದಿವೆ. ಮಂಡ್ಯ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ.

ಬಾಲ್ಯವಿವಾಹದಲ್ಲಿ ಮಂಡ್ಯ ಜಿಲ್ಲೆ ರಾಜ್ಯಕ್ಕೇ ಮೊದಲ ಸ್ಥಾನದಲ್ಲಿದೆ. ೨೦೨೦-೨೧ರಲ್ಲಿ ೩೪, ೨೦೨೧-೨೨ರಲ್ಲಿ ೭೬ ಹಾಗೂ ೨೦೨೨-೨೩ರಲ್ಲಿ ೬೨ ಬಾಲ್ಯ ವಿವಾಹಗಳು ಜರುಗಿವೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಅನ್ವಯ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯವಿವಾಹ ಪ್ರಮಾಣ ಬಾಲಕಿಯರದು ಶೇ.೨೪.೭ ರಷ್ಟಿದ್ದರೆ, ಬಾಲಕರದು ಶೇ.೭.೨ರಷ್ಟಿದೆ. ಹಾಗೆಯೇ ಪಟ್ಟಣ/ನಗರ ಪ್ರದೇಶದಲ್ಲಿ ಬಾಲ್ಯವಿವಾಹ ಪ್ರಮಾಣ ಬಾಲಕಿಯರದು ಶೇ.೧೬.೧ ರಷ್ಟಿದ್ದರೆ, ಬಾಲಕರದು ಶೇ.೪.೫ ರಷ್ಟಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಶಾಸಕ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯವು ೨೦೧೯-೨೦ನೇ ಸಾಲಿನಲ್ಲಿ ನಡೆಸಿದ ಘೆಊಏಖ-೫ ಅನ್ವಯ ಈ ಮಾಹಿತಿ ಬೆಳಕಿಗೆ ಬಂದಿದೆ. ಬಡತನ, ಅಜ್ಞಾನ, ಮೂಢನಂಬಿಕೆ, ಅರಿವಿನಕೊರತೆ, ಅನಕ್ಷರತೆ, ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ಸೇರಿದಂತೆ ಹೆಚ್ಚಿನ ಕಾರಣಗಳಿಗಾಗಿ ಬಾಲ್ಯವಿವಾಹಗಳು ಗೌಪ್ಯವಾಗಿ ನಡೆಯುತ್ತಿದ್ದು ಪ್ರಕರಣಗಳು ನಂತರ ಬೆಳಕಿಗೆ ಬರುತ್ತಿವೆ. ಬಾಲ್ಯವಿವಾಹಗಳನ್ನು ಸಂಪೂರ್ಣ ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಬಾಲ್ಯವಿವಾಹ ನಿಷೇದಾಧಿಕಾರಿಗಳ ಅಂದಾಜು ಸಂಖ್ಯೆ ೫೯,೦೦೦ ರಷ್ಟಿದೆ. ರಾಜ್ಯ, ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಾಲ್ಯವಿವಾಹ ನಿಷೇದಾಧಿಕಾರಿಗಳೆಂದು ಗುರುತಿಸಲಾಗಿದೆ ಎಂದಿದ್ದಾರೆ.

Share this article