ಚೈತನ್ಯ ವಿಶೇಷಮಕ್ಕಳ ಶಿಕ್ಷಣ ಸಂಸ್ಥೆಗೆ ದಶಮಾನೋತ್ಸವ ಸಂಭ್ರಮ

KannadaprabhaNewsNetwork | Published : Dec 2, 2023 12:45 AM

ಸಾರಾಂಶ

ಜೋಗ ಜಲಪಾತ ಸಮೀಪದ ಮಲೆನಾಡಹಳ್ಳಿ ಬಚ್ಚಗಾರು ಎಂಬ ಹಳ್ಲಿಯಲ್ಲಿಯೇ ಬೆಳೆದ ಶಾಂತಲಾ ಅವರು ಸಾಗರದಲ್ಲಿ ಪದವಿ ಮುಗಿಸಿದವರು. ಬಳಿಕ ಹೆಗ್ಗೋಡು ಸಮೀಪ ಮುಂಗರವಳ್ಳಿ ಎಂಬ ಊರಿನ ಸುರೇಶ್ ಎಂಬವರೊಂದಿಗೆ ವಿವಾಹವಾಗಿ ಮತ್ತೆ ಹಳ್ಳಿಗೇ ಬಂದರು. ಜೀವನದಲ್ಲಿ ಸಮಾಜಕ್ಕಾಗಿ ದುಡಿಯುವ ತುಡಿತ ಒಳಗಿನಿಂದ ಬಂದಿತು. ವಿಕಲಚೇತನ ಮಕ್ಕಳ ಸೇವೆ ಮಾಡುವ ಸಂಕಲ್ಪ ಮಾಡಿದರು. ಚೈತನ್ಯ ಟ್ರಸ್ಟ್‌ ಸ್ಥಾಪಿಸಿ, ಅದರ ಮೂಲಕ ಅದೇ ಹಳ್ಳಿಯಲ್ಲಿ ಪತಿ ಸುರೇಶ್ ಜೊತೆ ಸೇರಿ ಅನೌಪಚಾರಿಕವಾಗಿ ಬುದ್ಧಿಮಾಂದ್ಯ ಮಕ್ಕಳ ಮಕ್ಕಳ ಶಾಲೆ ಆರಂಭಿಸಿದರು. ಶಿರಸಿಯ ಅಜಿತ ಮನೋಚೇತನ ಸಂಸ್ಥೆಗೆ ಭೇಟಿ ನೀಡಿ, ಅವರ ಮಾರ್ಗದರ್ಶನ ಪಡೆದು, ಸರ್ಕಾರದಿಂದ ಮಾನ್ಯತೆ ಸಹ ಪಡೆದರು. ಆದರೆ ಅನುದಾನ ಸಿಗಲಿಲ್ಲ. ದಾನಿಗಳ ನೆರವು ಪಡೆದು ಪೂರ್ಣ ಪ್ರಮಾಣದ ಬುದ್ಧಿಮಾಂದ್ಯ ಮಕ್ಕಳ ಗ್ರಾಮೀಣ ಶಾಲೆ ಆರಂಭಿಸಿದರು.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಯುವ ವಯಸ್ಸಿನಲ್ಲಿ ಕಾಣುವ ಕನಸು ಬೇರೆಯದೇ ಇರುತ್ತದೆ. ಆದರೆ, ಮಲೆನಾಡಿನ ಹಳ್ಳಿಯ ಸಾಮಾನ್ಯ ಯುವತಿಯೊಬ್ಬರು ಮದುವೆಯ ಬಳಿಕ ಆಧುನಿಕತೆ, ನಗರದ ಸೆಳೆತಕ್ಕೆ ಸಿಲುಕದೆ ತಮ್ಮ ಕುಟುಂಬದೊಂದಿಗೆ ಬುದ್ಧಿಮಾಂದ್ಯ ಮಕ್ಕಳ ಸೇವೆಗೆ ನಿಂತಿದ್ದು, ಯುವ ಸಮೂಹಕ್ಕೆ ಆದರ್ಶಪ್ರಾಯವಾಗಿದ್ದಾರೆ.

ಶಾಂತಲಾ ಸುರೇಶ್ ಎಂಬುವವರೇ ಈ ಸಾಧನೆ ಮಾಡಿದವರು. ಇವರ ಸೇವೆಗೆ ಈಗ ಭರ್ತಿ 10 ವರ್ಷ. ಕಳೆದ 10 ವರ್ಷಗಳಿಂದ ನಡೆಸಿದ ಈ ಮಾನವೀಯ ಸೇವಾ ಸಂಸ್ಥೆಗೀಗ ದಶಮಾನೋತ್ಸವದ ಸಂಭ್ರಮ! ಶಾಂತಲಾ - ಸುರೇಶ ಅವರ ಜೊತೆಗೆ ಚೈತನ್ಯ ಸಂಸ್ಥೆಯ ಈಗಿನ ಅಧ್ಯಕ್ಷ ಬಿ.ಎಚ್. ರಾಘವೇಂದ್ರ ತಂಡ ದಶಮಾನೋತ್ಸವ ಸಂಭ್ರಮದಲ್ಲಿದೆ.

ಜೋಗ ಜಲಪಾತ ಸಮೀಪದ ಮಲೆನಾಡಹಳ್ಳಿ ಬಚ್ಚಗಾರು ಎಂಬ ಹಳ್ಲಿಯಲ್ಲಿಯೇ ಬೆಳೆದ ಶಾಂತಲಾ ಅವರು ಸಾಗರದಲ್ಲಿ ಪದವಿ ಮುಗಿಸಿದವರು. ಬಳಿಕ ಹೆಗ್ಗೋಡು ಸಮೀಪ ಮುಂಗರವಳ್ಳಿ ಎಂಬ ಊರಿನ ಸುರೇಶ್ ಎಂಬವರೊಂದಿಗೆ ವಿವಾಹವಾಗಿ ಮತ್ತೆ ಹಳ್ಳಿಗೇ ಬಂದರು. ಜೀವನದಲ್ಲಿ ಸಮಾಜಕ್ಕಾಗಿ ದುಡಿಯುವ ತುಡಿತ ಒಳಗಿನಿಂದ ಬಂದಿತು. ವಿಕಲಚೇತನ ಮಕ್ಕಳ ಸೇವೆ ಮಾಡುವ ಸಂಕಲ್ಪ ಮಾಡಿದರು. ಚೈತನ್ಯ ಟ್ರಸ್ಟ್‌ ಸ್ಥಾಪಿಸಿ, ಅದರ ಮೂಲಕ ಅದೇ ಹಳ್ಳಿಯಲ್ಲಿ ಪತಿ ಸುರೇಶ್ ಜೊತೆ ಸೇರಿ ಅನೌಪಚಾರಿಕವಾಗಿ ಬುದ್ಧಿಮಾಂದ್ಯ ಮಕ್ಕಳ ಮಕ್ಕಳ ಶಾಲೆ ಆರಂಭಿಸಿದರು. ಶಿರಸಿಯ ಅಜಿತ ಮನೋಚೇತನ ಸಂಸ್ಥೆಗೆ ಭೇಟಿ ನೀಡಿ, ಅವರ ಮಾರ್ಗದರ್ಶನ ಪಡೆದು, ಸರ್ಕಾರದಿಂದ ಮಾನ್ಯತೆ ಸಹ ಪಡೆದರು. ಆದರೆ ಅನುದಾನ ಸಿಗಲಿಲ್ಲ. ದಾನಿಗಳ ನೆರವು ಪಡೆದು ಪೂರ್ಣ ಪ್ರಮಾಣದ ಬುದ್ಧಿಮಾಂದ್ಯ ಮಕ್ಕಳ ಗ್ರಾಮೀಣ ಶಾಲೆ ಆರಂಭಿಸಿದರು.

ಸಾಗರ ನಗರ, ವಿವಿಧ ಹಳ್ಳಿಗಳ ಬುದ್ಧಿಮಾಂದ್ಯ ಮಕ್ಕಳ ಪಾಲಕರ ಭೇಟಿ ಮಾಡಿದರು. ಶಾಂತಲಾ ಮತ್ತು ಸುರೇಶ ದಂಪತಿಗೆ ಚೈತನ್ಯ ತಂಡ ಗಟ್ಟಿ ಬೆಂಬಲ ನೀಡಿತು. ಕುಂದಾಪುರದ ರಾಮಕೃಷ್ಣ ಶೇರೇಗಾರ್, ಲಕ್ಷ್ಮೀನಾರಾಯಣ ಕಾಶಿ, ವರದಹಳ್ಳಿ ಶ್ರೀಧರಾಶ್ರಮದವರು, ಚಂದ್ರಶೇಖರ ಕಾಕಾಲ್ ಸೇರಿದಂತೆ ಹಿತೈಗಳು ಬೆಂಬಲಿಸಿದರು. ಬೆಂಗಳೂರಿನ ಧರಿತ್ರಿಯ ಉಷಾ ಜಾಗೀರದಾರ್ ತರಬೇತಿ ನೀಡಲು ಮುಂದೆ ಬಂದರು. ಪಿಜಿಯೋ ಥೆರಪಿ, ಸ್ಪೀಚ್ ಥೆರಪಿ ತಜ್ಞರು ಬಂದರು. ಇನ್ನಷ್ಟು ತರಬೇತಿ, ಅನುಭವ ಪಡೆದರು. ಜೊತೆಗೆ ಪರಿಸರ-ಸಾಮಾಜಿಕ ಹೋರಾಟಗಾರರಾದ ಅನಂತ ಹೆಗಡೆ ಅಶೀಸರ ಅವರ ನಿರಂತರ ಮಾರ್ಗದರ್ಶನವನ್ನು, ದೂರದ ಬೆಂಗಳೂರಿನ ಪೂರ್ಣಚಂದ್ರ ತೇಜಸ್ವಿನಿ ಅವರನ್ನು ಶಾಂತಲಾ ಸ್ಮರಿಸುತ್ತಾರೆ. ಬಂದ್ ಆಗಿದ್ದ ಹಳ್ಳಿಯ ಸರ್ಕಾರಿ ಶಾಲಾ ಕಟ್ಟಡದಲ್ಲಿ ವಿಕಲಚೇತನರ ಶಾಲೆ ನಡೆಸುತ್ತಿದ್ದಾರೆ.

ಇದೀಗ ಶಾಂತಲಾ ಅವರು ರಾಜ್ಯ ಸ್ಪೇಶಲ್ ಒಲಂಪಿಕ್ಸ್ ನಿರ್ದೇಶಕ ತಂಡದಲ್ಲಿ ಇದ್ದಾರೆ. ಸರ್ಕಾರದ ಅನುದಾನ ಸಿಗದಿದ್ದರೂ ಸಮಾಜದ ಬೆಂಬಲ ನಮ್ಮ ಸೇವಾ ಕಾರ್ಯಕ್ಕೆ ಸಿಗುತ್ತಿದೆ ಎಂಬ ಕೃತಜ್ಞತಾಭಾವ ಅವರಲ್ಲಿದೆ.

ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಅಂಗವಿಕಲ ಮಕ್ಕಳ ಸ್ಫರ್ಧೆಗಳಲ್ಲಿ ಈ ಶಾಲೆಯ ಮಕ್ಕಳು ಯೋಗ ಸ್ಫರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಚೈತನ್ಯ ಶಾಲೆ ಯಕ್ಷಗಾನ ಕಂಪ್ಯೂಟರ್, ಆನ್ ಲೈನ್, ಸ್ಪೆಷಲ್ ಓಲಂಪಿಂಕ್ ಸ್ಪರ್ಧೆಗಳಲ್ಲಿ ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ವರ್ಷದ ಹಿಂದೆ ರಾಜ್ಯ ಸರ್ಕಾರ ವಿಕಲಚೇತನರ ಸೇವಾ ಪ್ರಶಸ್ತಿ ನೀಡಿದೆ.ವಿಶ್ವ ಅಂಗವಿಕಲರ ದಿನಾಚರಣೆ ದಿನವಾದ ಡಿ.2 ರಂದು ಸಾಗರ ತಾಲೂಕಿನ ಭೀಮನಕೋಣೆಯಲ್ಲಿ ಚೈತನ್ಯ ವಿಶೇಷ ಮಕ್ಕಳ ಸಂಸ್ಥೆಯ ದಶಮಾನೋತ್ಸವ ಸಮಾರಂಭ ನಡೆಯಲಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸೇರಿ ಇದರಲ್ಲಿ ಭಾಗಿಯಾಗಲಿದ್ದಾರೆ. ದಿನಪೂರ್ತಿ ನಡೆಯುವ ಸಮಾರಂಭದಲ್ಲಿ ಬುದ್ಧಿಮಾಂದ್ಯ ಮಕ್ಕಳೇ ಸಾಂಸ್ಕೃತಿಕ ಸಂಜೆ ನಡೆಸುತ್ತಾರೆ. - - - -ಫೋಟೋ:

ಚೈತನ್ಯ ವಿಶೇಷ ಮಕ್ಕಳ ಶಿಕ್ಷಣ ಸಂಸ್ಥೆಯ ಬುದ್ಧಿಮಾಂದ್ಯ ಮಕ್ಕಳೊಂದಿಗೆ ಸಂಸ್ಥಾಪಕಿ ಶಾಂತಲಾ ಸುರೇಶ್.

Share this article