ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೊಡಗು ವೈದ್ಯಕೀಯ ಶಿಕ್ಷಣ, ಜಿಲ್ಲಾ ಪೊಲೀಸ್, ಯುವ ಸಬಲೀಕರಣ ಮತ್ತು ಕ್ರೀಡೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಸಮಾಜ ಕಲ್ಯಾಣ, ಪದವಿ ಪೂರ್ವ ಶಿಕ್ಷಣ, ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಘಟಕ, ನೆಹರು ಯುವ ಕೇಂದ್ರ, ಕೊಡಗು ಯುವ ಒಕ್ಕೂಟ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಯೋಗ ಭಾರತಿ, ಪ್ರಣವ ಯೋಗ ಕೇಂದ್ರ, ಪತಂಜಲಿ ಯೋಗ ಶಿಕ್ಷಣ, ಆರ್ಟ್ ಆಪ್ ಲಿವಿಂಗ್, ಸ್ಕೌಟ್ಸ್ ಮತ್ತು ಗೈಡ್ಸ್, ನೀಮಾ ಸಂಸ್ಥೆ ಹೀಗೆ ಸರ್ಕಾರಿ ಮತ್ತು ಸರ್ಕಾರೇತರ ವಿವಿಧ ಸಂಸ್ಥೆಗಳ ಸಹಕಾರದಲ್ಲಿ ದಿನಾಚರಣೆ ನಡೆಯಿತು.
‘ಯೋಗ ಫಾರ್ ಸೆಲ್ಫ್ ಅಂಡ್ ಸೊಸೈಟಿ’ ಹೆಸರಿನಲ್ಲಿ ನಡೆದ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ನಗರಸಭೆ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ, ಯೋಗ ಶಿಕ್ಷಕ ಮಹೇಶ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಟಿ.ವಿಸ್ಮಯಿ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ನೀಮಾ ಜಿಲ್ಲಾ ಅಧ್ಯಕ್ಷ ಡಾ.ರಾಜಾರಾಮ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ದೇಹ ಮತ್ತು ಮನಸ್ಸಿನ ನಡುವೆ ಸಮನ್ವಯ ಸಾಧಿಸಲು ಯೋಗಾಭ್ಯಾಸ ಅಗತ್ಯವಾಗಿದೆ ಎಂದರು.
ಯೋಗ/ ವ್ಯಾಯಾಮ ಮಾಡುವುದರಿಂದ ಪ್ರತಿನಿತ್ಯ ಚಟುವಟಿಕೆಯಿಂದ ಇರಲು ಸಾಧ್ಯ. ಆ ನಿಟ್ಟಿನಲ್ಲಿ ಉತ್ತಮ ಆರೋಗ್ಯಕ್ಕೆ ಯೋಗ ಮತ್ತು ವ್ಯಾಯಾಮ ಮಾಡುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾದೇವಿ ಮಾತನಾಡಿ, ಯೋಗ ದಿನಾಚರಣೆಗೆ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು ಕೈಜೋಡಿಸಿ ಯಶಸ್ವಿಗೊಳಿಸಿದ್ದಾರೆ ಎಂದು ತಿಳಿಸಿದರು.
ಮದೆನಾಡು ಬಿಜಿಎಸ್ ಶಾಲೆಯ 5 ನೇ ತರಗತಿ ವಿದ್ಯಾರ್ಥಿನಿ ಸಿಂಚನಾ ಯೋಗ ಪ್ರದರ್ಶನ ಮೂಲಕ ಗಮನ ಸೆಳೆದರು.