ರೈತರತ್ನ ಪ್ರಶಸ್ತಿ- 2024ಗೆ ಕೃಷಿ ಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿದ 11 ಸಾಧಕರ ಆಯ್ಕೆ

KannadaprabhaNewsNetwork | Updated : Mar 13 2025, 10:55 AM IST

ಸಾರಾಂಶ

ಕೃಷಿ ಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿ ಇತರರಿಗೆ ಮಾದರಿಯಾಗಬಲ್ಲ ರಾಜ್ಯದ ರೈತರು ಹಾಗೂ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ‘ಕನ್ನಡಪ್ರಭ’ ದಿನಪತ್ರಿಕೆ ಹಾಗೂ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಪ್ರತಿಷ್ಠಿತ ‘ರೈತ ರತ್ನ-2024’ ಪ್ರಶಸ್ತಿಗೆ  ಒಟ್ಟು11 ಸಾಧಕರನ್ನು  ಆಯ್ಕೆ ಮಾಡಲಾಯಿತು.

 ಬೆಂಗಳೂರು : ಕೃಷಿ ಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿ ಇತರರಿಗೆ ಮಾದರಿಯಾಗಬಲ್ಲ ರಾಜ್ಯದ ರೈತರು ಹಾಗೂ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ‘ಕನ್ನಡಪ್ರಭ’ ದಿನಪತ್ರಿಕೆ ಹಾಗೂ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಪ್ರತಿಷ್ಠಿತ ‘ರೈತ ರತ್ನ-2024’ ಪ್ರಶಸ್ತಿಗೆ 10 ವಿಭಾಗ ಹಾಗೂ ತೀರ್ಪುಗಾರರ ವಿಶೇಷ ಪ್ರಶಸ್ತಿ ಸೇರಿ ಒಟ್ಟು11 ಸಾಧಕರನ್ನು ಬುಧವಾರ ಆಯ್ಕೆ ಮಾಡಲಾಯಿತು.

ಬೆಂಗಳೂರಿನಲ್ಲಿರುವ ‘ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಕೇಂದ್ರ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ತೀರ್ಪುಗಾರರಾಗಿ ಕೃಷಿ-ಪರಿಸರ ತಜ್ಞ ಹಾಗೂ ಪತ್ರಕರ್ತ ಶಿವಾನಂದ ಕಳವೆ, ಕೃಷಿ ತಜ್ಞ ಕೃಷ್ಣ ಪ್ರಸಾದ್‌, ರತ್ನಗಿರಿ ಇಂಪೆಕ್ಸ್‌ ಸಂಸ್ಥೆಯ ಮುಖ್ಯಸ್ಥ ಎಸ್‌.ಎ.ವಾಸುದೇವ ಮೂರ್ತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್‌ ಪ್ರಾದೇಶಿಕ ನಿರ್ದೇಶಕ ಮನೋಜ್‌ ಮಿನೇಜಸ್‌, ಟ್ರಸ್ಟ್‌ ಗ್ರೊ ಫರ್ಟಿಲೈಜರ್ಸ್‌ ಸಂಸ್ಥೆಯ ಸಿಇಒ ಎ.ಎಂ.ಶರತ್‌ ಚಂದ್ರ ಅವರು ಭಾಗವಹಿಸಿದ್ದರು.

11 ವಿಜೇತರ ಆಯ್ಕೆ: ಆಧುನಿಕ ಕೃಷಿ, ಕೃಷಿ ಸಂಶೋಧಕ ರೈತ, ಕೃಷ್ಯುತ್ಪನ್ನ ಸಂಸ್ಥೆ ಅಥವಾ ವ್ಯಕ್ತಿ, ತೋಟಗಾರಿಕೆ, ಪಶು ಸಂಗೋಪನೆ, ಯುವ ರೈತ, ರೈತ ಮಹಿಳೆ, ಸಾವಯವ ಕೃಷಿ, ಸುವರ್ಣ ಕೃಷಿ ಶಾಲೆ ಹಾಗೂ ಸುಸ್ಥಿರ ಕೃಷಿ ಎಂಬ 10 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿತ್ತು. ಸುಮಾರು ಒಂದೂವರೆ ತಿಂಗಳ ಕಾಲ ನಡೆದ ಪ್ರಕ್ರಿಯೆ ವೇಳೆ ಬರೋಬ್ಬರಿ 655ಕ್ಕೂ ಹೆಚ್ಚು ನಾಮನಿರ್ದೇಶನಗಳು ಹರಿದು ಬಂದಿದ್ದವು.

ಕನ್ನಡಪ್ರಭ ಸಂಪಾದಕೀಯ ತಂಡ ಪ್ರತಿಯೊಂದು ನಾಮನಿರ್ದೇಶನವನ್ನೂ ಕೂಲಂಕಷವಾಗಿ ಪರಿಶೀಲಿಸಿ ಪ್ರತಿ ವಿಭಾಗದಲ್ಲೂ ತಲಾ 6 ರಿಂದ 7 ಸಾಧಕರನ್ನು ಆರಿಸಿತ್ತು.

ಆಯ್ದ 63 ನಾಮನಿರ್ದೇಶನಗಳನ್ನು ತೀರ್ಪುಗಾರರ ಮುಂದಿಡಲಾಗಿತ್ತು. ಪ್ರತಿ ಕ್ಷೇತ್ರದಲ್ಲೂ ಉತ್ಕೃಷ್ಟ ಸಾಧನೆ ಮಾಡಿದ್ದ ರೈತರು, ಕೃಷಿ ಸಂಬಂಧಿ ಸಾಧಕರನ್ನು ತೀರ್ಪುಗಾರರು ಪರಸ್ಪರ ಸಮಾಲೋಚಿಸಿ, ಅಳೆದು ತೂಗಿ 10 ಸಾಧಕರನ್ನು ಪ್ರಶಸ್ತಿಗೆ ಅಂತಿಮಗೊಳಿಸಿದರು.

ಜತೆಗೆ, ತೀರ್ಪುಗಾರರ ಆಯ್ಕೆಯ ಒಂದು ವಿಶೇಷ ಪ್ರಶಸ್ತಿಗೆ ಎರಡು ನಾಮನಿರ್ದೇಶಗಳ ಪೈಕಿ ಅತ್ಯುತ್ತಮ ಸಾಧಕರೊಬ್ಬರನ್ನು ಸರ್ವಾನುಮತದಿಂದ ಅಂತಿಮಗೊಳಿಸಲಾಗಿದೆ. ಈ ಮೂಲಕ ಕೃಷಿ ರತ್ನ ಪ್ರಶಸ್ತಿ-2024ರ 5ನೇ ಆವೃತ್ತಿಗೆ 11 ಸಾಧಕರ ಪಟ್ಟಿ ಸಿದ್ದಪಡಿಸಲಾಯಿತು.

ಈ ವೇಳೆ ಕನ್ನಡಪ್ರಭದ ಪ್ರಧಾನ ಸಂಪಾದಕ ರವಿ ಹೆಗಡೆ, ಪ್ರಧಾನ ಪುರವಣಿ ಸಂಪಾದಕ ಗಿರೀಶ್‌ರಾವ್‌ ಹತ್ವಾರ್‌ (ಜೋಗಿ), ಕಾರ್ಯನಿರ್ವಾಹಕ ಸಂಪಾದಕ ಎಸ್.ಗಿರೀಶ್‌ ಬಾಬು, ವಿಶೇಷ ಯೋಜನೆಗಳ ಸಂಪಾದಕ ವಿನೋದ್‌ಕುಮಾರ್‌ ಬಿ. ನಾಯ್ಕ್‌, ಹಿರಿಯ ಮುಖ್ಯ ಉಪ ಸಂಪಾದಕ ರಾಜೇಶ್‌ ಶೆಟ್ಟಿ ಉಪಸ್ಥಿತರಿದ್ದರು.

Share this article