₹11.51 ಕೋಟಿ ತೆರಿಗೆ ಬಾಕಿ: ರಾಕ್‌ಲೈನ್‌ ಮಾಲ್‌ಗೆ ಬೀಗ

KannadaprabhaNewsNetwork | Published : Feb 15, 2024 1:35 AM

ಸಾರಾಂಶ

ಬಿಬಿಎಂಪಿಗೆ 14 ವರ್ಷದಿಂದ 11 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ರಾಕ್‌ಲೈನ್‌ ಮಾಲ್‌ಗೆ ಬೀಗ ಜಡಿಯಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆಸ್ತಿ ತೆರಿಗೆ ಪಾವತಿ ಮಾಡದ ತುಮಕೂರು ರಸ್ತೆಯಲ್ಲಿರುವ ರಾಕ್‌ಲೈನ್‌ ಮಾಲನ್ನು ಬಿಬಿಎಂಪಿ ಅಧಿಕಾರಿಗಳು ಬುಧವಾರ ಬೀಗ ಹಾಕಿ ಸೀಜ್‌ ಮಾಡಿದ್ದಾರೆ.

ರಾಕ್ ಲೈನ್ ಮಾಲ್‌ 2011ರಿಂದ 2023-24ರ ಅವಧಿಯ ಒಟ್ಟು ₹11.51 ಕೋಟಿ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ. ತೆರಿಗೆ ಪಾವತಿಸಲು ಈಗಾಗಲೇ ಹಲವು ಬಾರಿ ಬಿಬಿಎಂಪಿ ಕಂದಾಯ ಅಧಿಕಾರಿಗಳು ನೋಟಿಸ್‌ ನೀಡಿದರೂ ರಾಕ್‌ ಲೈನ್‌ ಮಾಲ್‌ ಮಾಲೀಕರು ತೆರಿಗೆ ಪಾವತಿ ಮಾಡಿಲ್ಲ. ಹೀಗಾಗಿ, ಬುಧವಾರ ಬಿಬಿಎಂಪಿಯ ದಾಸರಹಳ್ಳಿ ವಲಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ರಾಕ್ ಲೈನ್ ಮಾಲನ್ನು ಸೀಜ್ ಮಾಡಲಾಗಿದೆ.

ಈ ಕುರಿತು ಮಾಹಿತಿ ನೀಡಿದ ದಾಸರಹಳ್ಳಿ ವಲಯ ಜಂಟಿ ಆಯುಕ್ತ ಬಾಲಶೇಖರ್, ಕೋಟ್ಯಂತರ ರುಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಕಳೆದ 11 ವರ್ಷದಿಂದ ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ. ನೋಟಿಸ್‌ ನೀಡಿದರೂ ತೆರಿಗೆ ಪಾವತಿಗೆ ಮುಂದಾಗಿಲ್ಲ. ಹೀಗಾಗಿ, ಮಾಲ್‌ ಸೀಜ್‌ ಮಾಡಿದ್ದೇವೆ. ತೆರಿಗೆ ಪಾವತಿ ಮಾಡುವವರೆಗೆ ಮಾಲ್‌ ತೆರೆಯುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಏಕಾಏಕಿ ಮಾಲ್‌ಗೆ ಬೀಗ: ವ್ಯವಸ್ಥಾಪಕ ಆರೋಪ

ಇನ್ನು ರಾಕ್ ಲೈನ್ ಮಾಲ್‌ನ ಮ್ಯಾನೇಜರ್ ಪ್ರಕಾಶ್ ಮಾತನಾಡಿ, ಮಂಗಳವಾರ ರಾತ್ರಿ 9.30ಕ್ಕೆ ಬಂದಿದ್ದರು. ನಮಗೆ ನೋಟಿಸ್‌ ನೀಡಿಲ್ಲ. ನೋಟಿಸ್‌ ತೋರಿಸಿ ಹಾಗೇ ವಾಪಾಸ್‌ ತೆಗೆದುಕೊಂಡು ಹೋಗಿದ್ದಾರೆ. ಮೇಲಾಧಿಕಾರಿಗಳ ಒತ್ತಡ ಇದೆ. ಹಾಗಾಗಿ, ಮಾಲ್‌ ಸೀಜ್‌ ಮಾಡುತ್ತೇವೆ ಎಂದು ಹೇಳಿ ಹೋಗಿದ್ದರು. ಈ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಗಿದ್ದು, ಕೋರ್ಟ್‌ ಸೂಚಿಸಿದಂತೆ ಹಣ ಠೇವಣಿ ಮಾಡಿದ್ದೇವೆ. ಈ ಬಗ್ಗೆ ಆಕ್ಷೇಪಣೆಗಳಿದ್ದರೆ ಸಲ್ಲಿಕೆ ಮಾಡುವಂತೆ ಕೋರ್ಟ್‌ ಸೂಚಿಸಿದೆ. ಆದರೆ, ಬಿಬಿಎಂಪಿ ಆಕ್ಷೇಪಣೆ ಸಲ್ಲಿಕೆ ಮಾಡಿಲ್ಲ. ಈಗ ಏಕಾಏಕಿ ಬಂದು ಮಾಲ್‌ಗೆ ಬೀಗ ಹಾಕಿದ್ದಾರೆ ಎಂದು ಆರೋಪಿಸಿದರು.

Share this article