ಕನ್ನಡಪ್ರಭ ವಾರ್ತೆ ಖಾನಾಪುರ
ತಾಲೂಕಿನ 51 ಗ್ರಾಪಂಗಳ ಪೈಕಿ 11 ಗ್ರಾಪಂಗಳು ಕರವಸೂಲಾತಿಯಲ್ಲಿ ನೂರು ಪ್ರತಿಶತ ಗುರಿ ಸಾಧಿಸಿರುವುದು ಅಭಿನಂದನಾರ್ಹ. ಇನ್ನುಳಿದ ಎಲ್ಲ ಗ್ರಾಪಂಗಳೂ ಮಾರ್ಚ್ ಅಂತ್ಯದೊಳಗೆ ಕರವಸೂಲಾತಿಯಲ್ಲಿ ಪ್ರತಿಶತ ಗುರಿ ಸಾಧಿಸಬೇಕು ಎಂಬ ಗುರಿ ನೀಡಲಾಗಿದೆ ಎಂದು ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ವಿಜಯ ಕೋತಿನ ಹೇಳಿದರು.ಸ್ಥಳೀಯ ತಾಪಂ ಸಭಾಭವನದಲ್ಲಿ ನಡೆದ ಪಂಚಾಯತ್ ರಾಜ್ ವಿಷಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕರವಸೂಲಾತಿಯಲ್ಲಿ ನೂರಕ್ಕೂ ಹೆಚ್ಚು ಪ್ರತಿಶತ ಗುರಿ ಸಾಧಿಸಿದ ತಾಲೂಕಿನ ವಿವಿಧ ಗ್ರಾಪಂಗಳ ಸಿಬ್ಬಂದಿ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕರ ವಸೂಲಾತಿಯಲ್ಲಿ ನೀಡಿದ ಪ್ರಗತಿ ಸಾಧಿಸಿದಲ್ಲಿ ಪ್ರಸ್ತುತ ತಾಲೂಕಿನ ಒಟ್ಟಾರೆ ಶೇ.68.69ರ ಪ್ರಗತಿ ಮಾರ್ಚ್ ಅಂತ್ಯದೊಳಗೆ ನೂರರ ಗುರಿ ತಲುಪುವ ಸಾಧ್ಯತೆ ಇದೆ. ಈ ಪ್ರಗತಿ ಸಾಧಿಸಲು ಎಲ್ಲರೂ ಶ್ರಮಿಸಬೇಕು. ಕರ ವಸೂಲಾತಿಯಿಂದ ಬರುವ ಹಣದಲ್ಲಿ ಗ್ರಾಪಂ ಸಿಬ್ಬಂದಿ ವೇತನ, ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವುದು ಸೇರಿದಂತೆ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾರ್ಯ ಕೈಗೊಳ್ಳಬಹುದಾಗಿದೆ. ಹೀಗಾಗಿ ಗ್ರಾಪಂ ಸಿಬ್ಬಂದಿ ಕರ ಬಾಕಿ ಇರಿಸಿಕೊಂಡ ಮನೆಗಳಿಗೆ ಭೇಟಿ ನೀಡಬೇಕು. ಕರ ಬಾಕಿ ಇರಿಸಿಕೊಂಡ ಗ್ರಾಮಸ್ಥರ ಮನವೊಲಿಸಿ ಕರ ಪಡೆಯಬೇಕು ಎಂದು ಕರೆ ನೀಡಿದರು.
ಕರವಸೂಲಿಯಲ್ಲಿ ಸಾಧನೆಗೈದ ತಾಲೂಕಿನ ನಾಗುರ್ಡಾ, ಗೋಲ್ಯಾಳಿ, ಮಂತುರ್ಗಾ, ನೀಲಾವಡೆ, ಶಿರೋಲಿ, ಭೂರಣಕಿ, ನೇರಸೆ, ಲೋಂಡಾ, ಕೊಡಚವಾಡ, ಕಡತನ ಬಾಗೇವಾಡಿ, ಅಮಟೆ ಗ್ರಾಪಂಗಳ ಕಾರ್ಯದರ್ಶಿಗಳು ಹಾಗೂ ಕರವಸೂಲಿಗಾರರನ್ನು ತಾಪಂ ಅಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ತಾಪಂ ವ್ಯವಸ್ಥಾಪಕ ಶ್ರೀಕಾಂತ ಸೊಪ್ಪಡ್ಲ, ತಾಪಂ ಯೋಜನಾಧಿಕಾರಿ ಗಂಗಾ ಪಡಗುಗ್ಗರಿ, ಸಹಾಯಕ ಲೆಕ್ಕಾಧಿಕಾರಿ ಎಸ್.ಸಿ ಜಾಲಗೇರಿ, ವಿಷಯ ನಿರ್ವಾಹಕಿ ಮಯೂರಿ ಘಾಡಿ, ಸಂಪತ್ ಬಿರ್ಜೆ, ಲಕ್ಷ್ಮಣ ದೇಸಾಯಿ, ನಾಗರಾಜ ಮಸ್ತಿ, ಯಳ್ಳೂರ, ವಿಠ್ಠಲ ದೇವಲತ್ತಿ, ದೊಡ್ಡಪ್ಪ ಉಪಾಶಿ, ಸಿದ್ದು ಸೇರಿದಂತೆ ವಿವಿಧ ಗ್ರಾಪಂಗಳ ಕಾರ್ಯದರ್ಶಿಗಳು, ಕರವಸೂಲಿಗಾರರು, ತಾಪಂ ಸಿಬ್ಬಂದಿ ಇದ್ದರು.