ಅಪಘಾತದಲ್ಲಿ ಕಾಲು ಕಳಕೊಂಡವ್ಯಾಪಾರಿಗೆ ₹11 ಲಕ್ಷ ಪರಿಹಾರ

KannadaprabhaNewsNetwork |  
Published : Oct 08, 2025, 02:03 AM IST
ಹೈಕೋರ್ಟ್‌ | Kannada Prabha

ಸಾರಾಂಶ

ರಸ್ತೆ ಅಪಘಾತದಿಂದ ಎಡಗಾಲು ಕಳೆದುಕೊಂಡು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ತರಕಾರಿ ವ್ಯಾಪಾರಿಯೊಬ್ಬರಿಗೆ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣ (ಎಂಎಸಿಟಿ) ನಿಗದಿಪಡಿಸಿದ ₹5 ಲಕ್ಷ ಪರಿಹಾರ ಮೊತ್ತವನ್ನು ₹11 ಲಕ್ಷಕ್ಕೆ ಹೆಚ್ಚಿಸಿ ಹೈಕೋರ್ಟ್‌ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಸ್ತೆ ಅಪಘಾತದಿಂದ ಎಡಗಾಲು ಕಳೆದುಕೊಂಡು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ತರಕಾರಿ ವ್ಯಾಪಾರಿಯೊಬ್ಬರಿಗೆ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣ (ಎಂಎಸಿಟಿ) ನಿಗದಿಪಡಿಸಿದ ₹5 ಲಕ್ಷ ಪರಿಹಾರ ಮೊತ್ತವನ್ನು ₹11 ಲಕ್ಷಕ್ಕೆ ಹೆಚ್ಚಿಸಿ ಹೈಕೋರ್ಟ್‌ ಆದೇಶಿಸಿದೆ.

ಪರಿಹಾರದ ಮೊತ್ತ ಹೆಚ್ಚಿಸುವಂತೆ ಕೋರಿ ಆನೇಕಲ್ ತಾಲೂಕಿನ ದೊಮ್ಮಸಂದ್ರದ ನಿವಾಸಿ ಮುನಿಯಪ್ಪ (62) ಸಲ್ಲಿಸಿದ್ದ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಚಿಲ್ಲಕೂರು ಸುಮಲತಾ ಅವರ ಪೀಠ ಈ ಆದೇಶ ಮಾಡಿದೆ. ಅಪಘಾತದಿಂದ ಅರ್ಜಿದಾರನ ಎಡಗಾಲನ್ನು ಮೊಣಕಾಲಿನಿಂದ ಕೆಳಗೆ ಕತ್ತರಿಸಲಾಗಿದೆ. ಒಂದು ಕಾಲು ಕಳೆದುಕೊಂಡಿರುವ ಮೇಲ್ಮನವಿದಾರ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ತರಕಾರಿ ಮಾರಾಟ ಮಾಡುತ್ತಿದ್ದು, ಅರ್ಜಿದಾರನಿಗೆ ಭವಿಷ್ಯದಲ್ಲಿ ಉದ್ಯೋಗ ಮುಂದುವರಿಸುವುದು ಹಾಗೂ ಹಣ ಸಂಪಾದನೆ ಮಾಡುವುದು ಕಷ್ಟಕರ. ನ್ಯಾಯಾಧಿಕರಣವು ಮೇಲ್ಮನವಿದಾರನ ಇಡೀ ದೇಹಕ್ಕೆ ಸಂಬಂಧಿಸಿದಂತೆ ಅಂಗವೈಕಲ್ಯವನ್ನು ಶೇ.25 ಎಂದು ಪರಿಗಣಿಸಿರುವುದು ಸರಿಯಲ್ಲ ಎಂದು ಪೀಠ ಹೇಳಿದೆ.

ತರಕಾರಿ ವ್ಯಾಪಾರಿಗಳು ತರಕಾರಿಗಳನ್ನು ಬೆಳೆಯುವ ಹಳ್ಳಿಗಳಿಗೆ, ಆ ನಿರ್ದಿಷ್ಟ ಪ್ರದೇಶದ ಸಗಟು ಮಾರುಕಟ್ಟೆಗಳಿಗೆ ತೆರಳಿ ತರಕಾರಿ ತರಬೇಕು. ಅವುಗಳನ್ನು ವಿಂಗಡಿಸಿದ ನಂತರ ಮಾರಾಟ ಸ್ಥಳಕ್ಕೆ ಸಾಗಿಸಬೇಕು. ಇಡೀ ದಿನ ಅಥವಾ ಕುಳಿತು ತರಕಾರಿ ಮಾರಾಟ ಮಾಡಿ ಗ್ರಾಹಕರಿಂದ ಹಣ ಸಂಗ್ರಹಿಸಬೇಕು. ದಿನದ ಅಂತ್ಯದಲ್ಲಿ ಉಳಿದ ಎಲ್ಲ ತರಕಾರಿಗಳನ್ನು ಮತ್ತೆ ಚೀಲದಲ್ಲಿ ತುಂಬಿ ಮರುದಿನದ ವ್ಯಾಪಾರಕ್ಕಾಗಿ ಅವುಗಳನ್ನು ಸಂರಕ್ಷಿಸಬೇಕು. ಇಷ್ಟೆಲ್ಲ ಕೆಲಸಗಳನ್ನು ಕೇವಲ ಒಂದು ಕಾಲಿನ ಸಹಾಯದಿಂದ ಮಾಡಲು ಕಷ್ಟ. ಆದ್ದರಿಂದ, ಮೇಲ್ಮನವಿದಾರರ ದೇಹದ ಅಂಗವೈಕಲ್ಯವನ್ನು ಶೇ. 40 ಎಂದು ಪರಿಗಣಿಸುವುದು ಸೂಕ್ತ. ಅದರಂತೆ 11,40,795 ರು. ಪರಿಹಾರ ಪಡೆಯಲು ಮೇಲ್ಮನವಿದಾರ ಅರ್ಹರಾಗಿದ್ದಾರೆ ಎಂದು ತಿಳಿಸಿದೆ.

ಪ್ರಕರಣದ ಹಿನ್ನೆಲೆ:ತರಕಾರಿ ವ್ಯಾಪಾರಿ ಮುನಿಯಪ್ಪ 2022ರ ಮೇ 25ರಂದು ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಮುನಿಯಪ್ಪ ಎಡಗಾಲನ್ನು ಮಂಡಿಯ ಕೆಳಭಾಗದಿಂದ ಕತ್ತರಿಸಿದ್ದರು. ಕಾಲು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ 50 ಲಕ್ಷ ರು. ಪರಿಹಾರ ಕೋರಿ ಮುನಿಯಪ್ಪ ಬೆಂಗಳೂರಿನ ಎಂಎಸಿಟಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಮಂಡಳಿ 5,98,300 ರು. ಪರಿಹಾರ ನೀಡಿತ್ತು.

ಇದರಿಂದ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಮುನಿಯಪ್ಪ, ನಾನು ತರಕಾರಿ ವ್ಯಾಪಾರಿಯಾಗಿದ್ದೆ. ಪ್ರತಿ ದಿನ ಎರಡು ಸಾವಿರ ರು. ಸಂಪಾದಿಸುತ್ತಿದ್ದೆ. ನನ್ನ ಉದ್ಯೋಗ ಹಾಗೂ ಸಂಪಾದನೆ ಪರಿಗಣಿಸದೆಯೇ ಅಲ್ಪ ಮೊತ್ತವನ್ನು ಪರಿಹಾರವಾಗಿ ನೀಡಿದೆ. ಆದ್ದರಿಂದ, ಪರಿಹಾರದ ಮೊತ್ತ ಹೆಚ್ಚಿಸಬೇಕು ಎಂದು ಕೋರಿದ್ದರು.

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ