ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌: ಕಾಗೆ

| Published : Oct 07 2025, 02:00 AM IST

ಸಾರಾಂಶ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಹೊಸದಾಗಿ 700 ಬಸ್‌ ಖರೀದಿಸುತ್ತಿದ್ದು, 300 ಬಸ್‌ ಖರೀದಿಗೆ ಶೀಘ್ರ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳಲಿದೆ ಎಂದು ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಹೊಸದಾಗಿ 700 ಬಸ್‌ ಖರೀದಿಸುತ್ತಿದ್ದು, 300 ಬಸ್‌ ಖರೀದಿಗೆ ಶೀಘ್ರ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳಲಿದೆ ಎಂದು ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಹೇಳಿದರು.

ನಗರದ ಗೋಕುಲ ರಸ್ತೆಯಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾಗಿ ಬೆಳಗಾವಿಯ ಸುನೀಲ ಹನಮಣ್ಣವರ ಸೋಮವಾರ ಅಧಿಕಾರ ವಹಿಸಿಕೊಂಡ ಕಾರ್ಯಕ್ರಮದಲ್ಲಿ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, 2019ರ ಅಧಿಸೂಚನೆಯಂತೆ ಚಾಲಕ, ಚಾಲಕ ಕಂ ನಿರ್ವಾಹಕ ಸೇರಿ 2814 ಹುದ್ದೆ ಭರ್ತಿ ಮಾಡಿಕೊಳ್ಳಬೇಕಿತ್ತು. ಕೋವಿಡ್‌ನಿಂದ ಅದು ವಿಳಂಬವಾಯಿತು. ಆ ನಂತರ 1000 ಸಿಬ್ಬಂದಿ ನೇಮಕಕ್ಕೆ ಮಾತ್ರ ಸರ್ಕಾರ ಅನುಮತಿ ನೀಡಿದ್ದರಿಂದ ನೇಮಕ ಮಾಡಿಕೊಳ್ಳಲಾಗಿದೆ. 57 ಸಾವಿರ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪಾರದರ್ಶಕವಾಗಿ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಅವರು ಕೇಳಿದ ಸ್ಥಳಗಳಿಗೆ ನಿಯೋಜಿಸಲಾಗಿದೆ. ಅಲ್ಲದೆ, ಇನ್ನೂ 1 ಸಾವಿರ ಚಾಲಕರು, ನಿರ್ವಾಹಕರ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರ ಅನುಮತಿ ಸಿಗುವ ವಿಶ್ವಾಸ ಇದೆ ಎಂದರು.ಹುಬ್ಬಳ್ಳಿಯ ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣ ನವೀಕರಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರ ಲೋಕಾರ್ಪಣೆ ನಡೆಯಲಿದೆ. ಸಾಕಷ್ಟು ವರ್ಕ್‌ಶಾಪ್‌ಗಳು ಹಳೆಯದಾಗಿದ್ದು, ಚಿಕ್ಕೋಡಿಯಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ವರ್ಕ್‌ಶಾಪ್‌ ಇದೆ. ಅವುಗಳನ್ನು ನೆಲಸಮ ಮಾಡಿ ಹೊಸದಾಗಿ ನಿರ್ಮಾಣ ಮಾಡಲಾಗುವುದು ಎಂದರು.ಶಕ್ತಿ ಯೋಜನೆಯಿಂದ ಉತ್ತಮ ಆದಾಯ ಬರುತ್ತಿರುವುದರಿಂದ ಪ್ರತಿ ತಿಂಗಳು ನೌಕರರ ವೇತನವನ್ನು ಐದನೇ ತಾರೀಖಿನ ಒಳಗೆ ನೀಡಲಾಗುತ್ತಿದೆ. ಈ ಹಿಂದೆ ವಿಳಂಬವಾಗುತ್ತಿತ್ತು ಎಂದು ಹೇಳಿದರು.ಬಸ್‌ ನಿಲ್ದಾಣಗಳಲ್ಲಿ ಡಾಂಬರ್ ರಸ್ತೆಗಳಿವೆ. ಮಳೆ, ಬಸ್‌ ಸಂಚಾರದಿಂದ ಡಾಂಬರ್ ಕಿತ್ತು ಹೋಗಿ ತೊಂದರೆ ಆಗುತ್ತಿತ್ತು. ಎಲ್ಲ ನಿಲ್ದಾಣ, ಡಿಪೊಗಳಲ್ಲಿ ಸಿಸಿ ರಸ್ತೆ ನಿರ್ಮಿಸಲು ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ ₹ 20 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದೆ ಎಂದ ಅವರು, ಹೊಸದಾಗಿ 300 ಮಳಿಗೆ ನಿರ್ಮಿಸಲಾಗಿದ್ದು, ಅದರಿಂದ ಆದಾಯ ಬರುತ್ತಿದೆ. 242 ಮಳಿಗೆ ಖಾಲಿ ಇವೆ. ಅವುಗಳನ್ನು ಶೀಘ್ರ ಹಂಚಿಕೆ ಮಾಡಲಾಗುವುದು. ಆರ್ಥಿಕ ಸಂಪನ್ಮೂಲ ಹೆಚ್ಚಿಸಲು ಪ್ರಯತ್ನಿಸಲಾಗುವುದು. ಸರ್ಕಾರದಿಂದ ಶಕ್ತಿ ಯೋಜನೆಯ ₹ 860 ಕೋಟಿ ಅನುದಾನ ಬರುವುದು ಬಾಕಿ ಇದ್ದು, ಅದು ಬಂದರೆ, ಸಂಸ್ಥೆಯನ್ನು ಲಾಭದಾಯಕವಾಗಿ ನಡೆಸಬಹುದು ಎಂದರು.ಉಪಾಧ್ಯಕ್ಷ ಸುನೀಲ ಹನಮಣ್ಣವರ ಮಾತನಾಡಿ, ಸಂಸ್ಥೆಯ ಬಗ್ಗೆ ತಿಳಿದುಕೊಂಡು, ಅಧ್ಯಕ್ಷರೊಂದಿಗೆ ಕ್ರಿಯಾಶೀಲವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.ಈ ವೇಳೆ ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಮುಖಂಡರಾದ ಪ್ರಕಾಶಗೌಡ ಪಾಟೀಲ, ಅನಿಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ, ಶರಣಪ್ಪ ಕೊಟಗಿ, ಮೋಹನ ಹಿರೇಮನಿ ಸೇರಿದಂತೆ ಹಲವರು ಇದ್ದರು.ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಎನ್‌.ಎಚ್‌. ಕೋನರಡ್ಡಿ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಸೇರಿದಂತೆ ಹಲವರು ಸುನೀಲ ಹನಮಣ್ಣವರ ಅವರನ್ನು ಅಭಿನಂದಿಸಿದರು.