ಮಂಗಳೂರು-ಪೊಳಲಿ ನಡುವೆ ಕೆಎಸ್ಸಾರ್ಟಿಸಿ ನರ್ಮ್‌ ಬಸ್‌ ಸಂಚಾರಕ್ಕೆ ಚಾಲನೆ

| Published : Oct 04 2025, 12:00 AM IST

ಮಂಗಳೂರು-ಪೊಳಲಿ ನಡುವೆ ಕೆಎಸ್ಸಾರ್ಟಿಸಿ ನರ್ಮ್‌ ಬಸ್‌ ಸಂಚಾರಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ಹಾಗೂ ಪೊಳಲಿಯ ನಡುವೆ ನರ್ಮ್ ಬಸ್ ಓಡಾಟ ಆರಂಭಗೊಂಡಿದ್ದು, ಇದರ ಉದ್ಘಾಟನೆಯನ್ನು ಮಂಗಳೂರು ಬಿಜೈನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಗುರುವಾರ ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ ನೆರವೇರಿಸಿದರು.

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮಂಗಳೂರು ಹಾಗೂ ಪೊಳಲಿಯ ನಡುವೆ ನರ್ಮ್ ಬಸ್ ಓಡಾಟ ಆರಂಭಗೊಂಡಿದ್ದು, ಇದರ ಉದ್ಘಾಟನೆಯನ್ನು ಮಂಗಳೂರು ಬಿಜೈನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಗುರುವಾರ ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ ನೆರವೇರಿಸಿದರು.ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗ ವಾಮಂಜೂರು, ಬೋಂಡಂತಿಲ, ಪೂಳಲಿ ಮಾರ್ಗವಾಗಿ ಸರ್ಕಾರಿ ಬಸ್ ಸೌಲಭ್ಯ ಒದಗಿಸಿಕೊಡುವಂತೆ ಸಾರ್ವಜನಿಕರು ಮನವಿಯನ್ನು ಸಲ್ಲಿಸಿದ್ದರು. ಈ ಬಗ್ಗೆ ಸರ್ಕಾರದ ಗಮನ ಸೆಳೆದು ನಿಗಮಕ್ಕೆ ಪತ್ರವನ್ನು ಬರೆಯಲಾಗಿತ್ತು. ಇದಕ್ಕೆ ಸ್ಪಂದಿಸಿ ಬಸ್ ಓಡಾಟ ಆರಂಭಗೊಂಡಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕು ಎಂದು ಹೇಳಿದರು. ಗ್ರಾಮೀಣ ಭಾಗದ ರಸ್ತೆ ಅಗಲ ಕಿರಿದಾದ ತಿರುವುಗಳನ್ನು ಹೊಂದಿರುವ ಕಾರಣ ಸಣ್ಣ ಬಸ್ಸುಗಳು ಮಾತ್ರ ಓಡಾಟ ನಡೆಸುತ್ತವೆ. ಸಾರ್ವಜನಿಕರಿಗೆ ಅನುಕೂಲವಾಗುವ ಸಮಯದಲ್ಲಿ ಬಸ್ ಸಂಚಾರ ಏರ್ಪಡಿಸುವಂತೆ ವೇಳಾಪಟ್ಟಿ ನಿಗದಿ ಮಾಡಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಸ್ಥಳೀಯ ಶಾಸಕರಾದ ಡಾ. ಭರತ್‌ ಶೆಟ್ಟಿ ಅವರು ಸರ್ಕಾರಿ ಬಸ್ಸಿನ ಬೇಡಿಕೆಯನ್ನು ಮಂಡಿಸಿ ಸೌಲಭ್ಯ ಜಾರಿಯಾಗುವಂತೆ ಮಾಡುವಲ್ಲಿ ಶ್ರಮಿಸಿದ್ದಾರೆ. ಸರ್ಕಾರವು ಸ್ಥಳೀಯವಾಗಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಮಂಗಳೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರವೀಂದ್ರ ಕಂಬಳಿ, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಶೆಟ್ಟಿ, ಸಂಚಾರ ನಿಯಂತ್ರಣಾಧಿಕಾರಿ ಕಮಲ್‌ ಕುಮಾರ್‌, ವಿಭಾಗೀಯ ಯಾಂತ್ರಿಕ ಅಭಿಯಂತರ ವಿನಯ್‌ ಮತ್ತಿತರರಿದ್ದರು. ಬಸ್‌ ಸಂಚಾರ ವೇಳಾಪಟ್ಟಿಮಂಗಳೂರು ಬಸ್‌ ನಿಲ್ದಾಣದಿಂದ ಪೊಳಲಿಗೆ ಹೊರಡುವ ಸಮಯ-ಬೆಳಗ್ಗೆ 6 ಗಂಟೆ, 8.45, 11.40, ಸಂಜೆ 3.30, 6.30. ವಯಾ : ಪಿ.ವಿ.ಎಸ್, ಬಂಟ್ಸ್ ಹಾಸ್ಟೆಲ್, ನಂತೂರು, ಬಿಕರ್ನಕಟ್ಟೆ, ಕುಲಶೇಖರ, ಬೈತುರ್ಲಿ, ಕುಡುಪು, ವಾಮಂಜೂರು, ಕೆತ್ತಿಕಲ್, ಬೊಂಡಂತಿಲ, ತಾರಿಗುಡ್ಡೆ, ಬದ್ರಿಯಾನಗರ, ಮಲ್ಲೂರು, ಕಲಾಯಿ, ಅಮ್ಮುಂಜೆ, ಬಡಕಬೈಲು, ಪುಂಚಮೆ. ಪೊಳಲಿಯಿಂದ ಮಂಗಳೂರಿಗೆ ಹೊರಡುವ ಸಮಯ-ಬೆಳಗ್ಗೆ 6.55, 10.10, ಮಧ್ಯಾಹ್ನ 1.50, ಸಂಜೆ 4.35, ರಾತ್ರಿ 8 ಗಂಟೆ. ವಯಾ ಸ್ಥಳಗಳು:ಪುಂಚಮೆ, ಬಡಕಬೈಲು, ಅಮ್ಮುಂಜೆ ಕಲಾಯಿ, ಮಲ್ಲೂರು, ಬದ್ರಿಯಾ ನಗರ, ತಾರಿಗುಡ್ಡೆ, ಬೊಂಡಂತಿಲ, ಕೆತ್ತಿಕಲ್, ವಾಮಂಜೂರು, ಕುಡುಪು, ಬೈತುರ್ಲಿ, ಕುಲಶೇಖರ, ಬಿಕರ್ನಕಟ್ಟೆ, ನಂತೂರು, ಬಂಟ್ಸ್ ಹಾಸ್ಟೆಲ್, ಪಿವಿಎಸ್.