ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಒಕ್ಕಲುತನಕ್ಕೆ ಹೇಳಿ ಮಾಡಿಸಿದ ಜಿಲ್ಲೆ ವಿಜಯಪುರ. ಕೃಷಿಕರೇ ಹೆಚ್ಚಾಗಿರುವ ಈ ಜಿಲ್ಲೆಯಲ್ಲಿ ಸಾಕಷ್ಟು ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳನ್ನು ಬೆಳೆಯಲಾಗುತ್ತದೆ. ಉತ್ತಮ ಬೆಲೆ ಸಿಗುತ್ತದೆ ಎಂಬ ಕಾರಣಕ್ಕೆ ರೈತರು ತಾವು ಬೆಳೆದ ಬೆಳೆಗಳನ್ನೆಲ್ಲ ಜಿಲ್ಲಾ ಕೇಂದ್ರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಗೆ ತರುತ್ತಾರೆ. ಹೀಗೆ ವ್ಯಾಪಾರ, ವಹಿವಾಟಿಗಾಗಿ ಎಪಿಎಂಸಿಗೆ ಬರುವ ಅನ್ನದಾತರಿಗೆ ಒಂದು ಸುಸಜ್ಜಿತ ರೈತ ಭವನ ಕೂಡ ಇಲ್ಲದಂತಾಗಿದೆ. ಇದ್ದರೂ ಸಂಪೂರ್ಣ ಶಿಥಿಲಗೊಂಡಿದೆ. ರೈತ ಭವನದ ಕಟ್ಟಡ ನೋಡಿದರೆ ಇದರಲ್ಲಿ ಯಾರೂ ತಂಗುವ ಪರಿಸ್ಥಿತಿ ಇರುವುದಿಲ್ಲ. ಏಕೆಂದರೆ ಈ ಕಟ್ಟಡ ಈಗಲೋ ಆಗಲೋ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಒಕ್ಕಲುತನ ಹುಟ್ಟುವಳಿ ಸಮಿತಿಯ ಮಹದಾಸೆಯಿಂದ ನಿರ್ಮಾಣವಾಗಿದ್ದ ಅರ್ಧ ಶತಮಾನದ ಕಟ್ಟಡ ಈಗ ದುಸ್ಥಿತಿಗೆ ತಲುಪಿದೆ.ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ಅನ್ನದಾತರಿಗೆ ರಾತ್ರಿ ವೇಳೆ ತಂಗಲು ಹಾಗೂ ಬೆಳಗ್ಗೆ ಎದ್ದು ನಗರದಲ್ಲಿರುವ ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಅನುಕೂಲವಾಗಲೆಂದು ಕಳೆದ 51 ವರ್ಷಗಳ ಹಿಂದೆ ಎಪಿಎಂಸಿ ಯಾರ್ಡ್‌ನಲ್ಲಿ ರೈತ ಭವನ ನಿರ್ಮಿಸಲಾಗಿದೆ. ಆದರೆ ರೈತರಿಗೆ ಉಪಯೋಗವಾಗಬೇಕಿದ್ದ ಈ ರೈತ ಭವನದ ಆಯಸ್ಸು ಮುಗಿದಿದೆ. ಈಗ ಅದು ಸಂಪೂರ್ಣವಾಗಿ ಶಿಥಿಲಗೊಂಡಿದೆ. ಯಾವಾಗ ಕುಸಿಯುತ್ತದೆಯೋ ಗೊತ್ತಿಲ್ಲ. ಕಟ್ಟಡದ ಛಾವಣಿ, ಕಾಲಂಗಳು, ಗೋಡೆಗಳು ಶಿಥಿಲವಾಗಿವೆ. ಅಷ್ಟೆಯಲ್ಲದೆ ಭವನದ ಅಡಿಪಾಯಕ್ಕೆ ಹಾಕಿದ ಬೇಸ್‌ಮೆಂಟ್, ಹೊರಭಾಗದ ಗೋಡೆ ಹಾಗೂ ಕಿಟಕಿಗಳ ಸಜ್ಜಾಗಳು ಸಹ ಕುಸಿದಿವೆ. ಅವನತಿ ಹಂತಕ್ಕೆ ತಲುಪಿದ ಈ ರೈತ ಭವನದಲ್ಲಿ ಇಲಿ, ಹೆಗ್ಗಣಗಳು ವಾಸಿಸುವಂತಾಗಿವೆ. ಭವನದ ಸುತ್ತ ಮುತ್ತ ಮಲ, ಮೂತ್ರ ವಿಸರ್ಜನೆ ಮಾಡಲಾಗುತ್ತಿದೆ.ಮುಗಿದ ರೈತ ಭವನದ ಆಯಸ್ಸು: ರೈತ ಭವನಕ್ಕೆ 1968 ಫೆ.14ರಂದು ಅಂದಿನ ಸಹಕಾರಿ ಸಚಿವ ಪಿ.ಎಂ.ನಾಡಗೌಡರು ಅಡಿಗಲ್ಲು ಹಾಕಿದ್ದರು. ಕೇವಲ ಮೂರೂವರೆ ಲಕ್ಷ ರು. ವೆಚ್ಚದಲ್ಲಿ ಸುಂದರ ಹಾಗೂ ಗುಣಮಟ್ಟದಲ್ಲಿ ನಿರ್ಮಾಣವಾಗಿದ್ದ ರೈತ ಭವನವನ್ನು 1974 ಮೇ 19ರಂದು ಅಂದಿನ ಸಹಕಾರಿ ಸಚಿವ ಸಿ.ಎಸ್.ಪಾಟೀಲ ಉದ್ಘಾಟಿಸಿದ್ದರು. ಅಂದಿನಿಂದ ನಿತ್ಯ ನೂರಾರು ರೈತರಿಗೆ ಆಧಾರವಾಗಿದ್ದ ರೈತ ಭವನ ಇಂದು ಅವಸಾನದ ಹಂತ ತಲುಪಿದೆ.ಸದಾ ರೈತರಿಗಾಗಿ ಶ್ರಮಿಸುವ, ಅನ್ನದಾತರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಎಲ್ಲದಕ್ಕೂ ಮುಖ್ಯವಾಗಿ ಜಿಲ್ಲೆಯವರೇ ಆದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರೇ ಇರುವುದರಿಂದ ರೈತ ಭವನದ ಮರು ನಿರ್ಮಾಣವೇನೂ ಕಷ್ಟವಲ್ಲ. ಸಂಪೂರ್ಣ ಶಿಥಿಲಗೊಂಡಿರುವ 50 ವರ್ಷ ಹಳೆಯದಾದ ಕಟ್ಟಡವನ್ನು ದುರಸ್ತಿಗೊಳಿಸಿ ಅಥವಾ ನೆಲಸಮಗೊಳಿಸಿ, ಹೊಸ ಕಟ್ಟಡ ಕಟ್ಟಿಸುವ ಮೂಲಕ ತಮ್ಮ ಅಧಿಕಾರವಧಿಯಲ್ಲಿ ಜಿಲ್ಲೆಯ ರೈತರಿಗೆ ರೈತ ಭವನದ ಕೊಡುಗೆಯನ್ನು ನೀಡಬಹುದು ಎಂಬ ಆಶಯ ರೈತರದ್ದು. ಮುಂಬರುವ ಬಜೆಟ್‌ನಲ್ಲಿಯೇ ಈ ಕಾರ್ಯ ಕೈಗೆತ್ತಿಕೊಂಡರೆ ಜಿಲ್ಲೆಯ ರೈತರು ಸಚಿವರನ್ನು ಸ್ಮರಿಸುವುದರಲ್ಲಿ ಅನುಮಾನವಿಲ್ಲ.ಧವಸ, ಧಾನ್ಯಗಳ ವ್ಯಾಪಾರಕ್ಕಾಗಿ ಜಿಲ್ಲೆಯ ಮೂಲೆ ಮೂಲೆಗಳಿಂದ ಜಿಲ್ಲಾ ಕೇಂದ್ರದಲ್ಲಿರುವ ಎಪಿಎಂಸಿಗೆ ನಿತ್ಯ ಸಾವಿರಾರು ರೈತರು ಬರುತ್ತಾರೆ. ಅವರಿಗೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಅವರೆಲ್ಲರೂ ಸಾವಿರಾರು ರೂಪಾಯಿ ಹಣ ಖರ್ಚುಮಾಡಿ ಲಾಡ್ಜ್‌ಗಳಲ್ಲಿ ತಂಗಬೇಕಾಗಿದೆ. ಎಪಿಎಂಸಿಯಲ್ಲಿರುವ ರೈತ ಭವನವನ್ನು ದುರಸ್ತಿಗೊಳಿಸಿ ಅಥವಾ ಅದನ್ನು ನೆಲಸಮಗೊಳಿಸಿ ಹೊಸದಾದ ರೈತ ಭವನವನ್ನು ನಿರ್ಮಿಸಿದರೆ ಅನುಕೂಲವಾಗಲಿದೆ. ಜಿಲ್ಲೆಯವರೇ ಆದ ಎಪಿಎಂಸಿ ಸಚಿವರು ಇದರತ್ತ ಗಮನ ಹರಿಸಬೇಕು.- ಸಂಗಮೇಶ ಸಗರ, ಜಿಲ್ಲಾಧ್ಯಕ್ಷ, ಹಸಿರುಸೇನೆ.ನಗರದ ಎಪಿಎಂಸಿಯಲ್ಲಿರುವ ರೈತ ಭವನದಲ್ಲಿ ಒಟ್ಟು 24 ಕೊಠಡಿಗಳಿದ್ದು, ಕಳೆದ ಆರು ವರ್ಷಗಳಿಂದ ರೈತರು ಇಲ್ಲಿಗೆ ಬಂದಿಲ್ಲ. ರೈತರು ಯಾರಾದರು ವಸತಿಗೆ ಬಂದರೆ ಅವರಿಗೆ ಪ್ರತಿದಿನಕ್ಕೆ ₹50ರಂತೆ ಚಲನ ಕಟ್ಟಿಸಿಕೊಂಡು ವಸತಿಗೆ ಅವಕಾಶ ಮಾಡಿಕೊಡಲಾಗುವುದು. ಇನ್ನು ಈ ಕಟ್ಟಡಕ್ಕೆ 50 ವರ್ಷ ತುಂಬಿದ್ದರಿಂದ ಕಟ್ಟಡದ ಗುಣಮಟ್ಟ ಪರಿಶೀಲಿಸಲು ಎಂಜಿನಿಯರ್‌ಗೆ ತಿಳಿಸಲಾಗಿದೆ. ಅವರು ಬಂದು ಪರಿಶೀಲಿಸಿ ಈ ಕಟ್ಟಡ ಬಳಕೆಗೆ ಯೋಗ್ಯವಿದೆಯೋ ಅಥವಾ ಇಲ್ಲವೋ ಎಂಬ ವರದಿ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.
- ಅಲ್ಲಾಬಕ್ಷ್ ಬಿಜಾಪುರ,
ಕಾರ್ಯದರ್ಶಿಗಳು, ಎಪಿಎಂಸಿ, ವಿಜಯಪುರ.