ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ನಿತ್ಯ 3,500 ಕ್ಯೂಸೆಕ್‌ ನೀರನ್ನು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದ ವಿರುದ್ಧ ರೈತರ ಆಕ್ರೋಶ ಭುಗಿಲೆದ್ದಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಬುಧವಾರ ಕಾವೇರಿ ಕೊಳ್ಳದ ಜಿಲ್ಲೆಗಳ ವ್ಯಾಪ್ತಿಯಲ್ಲಿ ರೈತರ ಬೃಹತ್‌ ಪ್ರತಿಭಟನೆ

ಬೆಂಗಳೂರು: ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ನಿತ್ಯ 3,500 ಕ್ಯೂಸೆಕ್‌ ನೀರನ್ನು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದ ವಿರುದ್ಧ ರೈತರ ಆಕ್ರೋಶ ಭುಗಿಲೆದ್ದಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಬುಧವಾರ ಕಾವೇರಿ ಕೊಳ್ಳದ ಜಿಲ್ಲೆಗಳ ವ್ಯಾಪ್ತಿಯಲ್ಲಿ ರೈತರು ಬೃಹತ್‌ ಪ್ರತಿಭಟನೆ ನಡೆಸಿದರು. ಅದರಲ್ಲೂ, ಮಂಡ್ಯ ಜಿಲ್ಲೆಯಲ್ಲಿ ಹೋರಾಟದ ಕಿಚ್ಚು ತಾರಕಕ್ಕೇರಿತ್ತು. ಮಂಡ್ಯದಲ್ಲಿ ರೈತರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಉರುಳು ಸೇವೆ ನಡೆಸಿ, ಕಲ್ಲು ಹೊತ್ತು, ಬಿಂದಿಗೆ ಹಿಡಿದು ಧರಣಿ ನಡೆಸಿದರೆ, ಬಿಜೆಪಿಯವರು ಜನರಿಗೆ ಲಾಲಿಪಾಪ್‌ ಹಂಚಿ, ಹುರಳಿಕಾಳುಗಳೊಂದಿಗೆ ಪ್ರತಿಭಟನೆ ನಡೆಸಿದರು.

ಮಂಡ್ಯದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ರೈತಸಂಘ (ಮೂಲ ಸಂಘಟನೆ), ಕರ್ನಾಟಕ ರಕ್ಷಣಾ ವೇದಿಕೆ (ಕೆ.ನಾರಾಯಣಗೌಡ) ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು. ಪುರುಷರು ಕಲ್ಲುಗಳನ್ನು ಹೊತ್ತುಕೊಂಡರೆ, ಮಹಿಳೆಯರು ಬಿಂದಿಗೆಯನ್ನು ತಲೆಯ ಮೇಲೆ ಹೊತ್ತು, ಒಣಗಿದ ಕಬ್ಬಿನ ಜೊಲ್ಲೆಗಳನ್ನು ಪ್ರದರ್ಶಿಸಿ ಪ್ರತಿಭಟನೆಯಲ್ಲಿ ಭಾಗಿಯಾದರು. ಪ್ರತಿಭಟನಾಕಾರರು ಬೆಂಗಳೂರು-ಮೈಸೂರು ಹೆದ್ದಾರಿ ತಡೆಗೆ ಮುಂದಾದಾಗ ಪೊಲೀಸರು ಅವರನ್ನು ತಡೆದರು. ಈ ವೇಳೆ, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.

ಈ ಮಧ್ಯೆ, ಬಿಜೆಪಿಯವರು ಜನರಿಗೆ ಲಾಲಿಪಾಪ್ ಹಂಚಿ, ಹುರುಳಿಕಾಳು ಮುಂದಿಟ್ಟು ಚಳವಳಿ ನಡೆಸಿದರು. ಇದೇ ವೇಳೆ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ) ಕಾರ್ಯಕರ್ತರು ನಗರದಲ್ಲಿ ರಸ್ತೆ ತಡೆ ನಡೆಸಿದರು. ಇದೇ ವೇಳೆ, ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರಗಳಲ್ಲಿಯೂ ರೈತರಿಂದ ಪ್ರತಿಭಟನೆ, ಉರುಳುಸೇವೆಗಳು ನಡೆದವು.

ರಾಮನಗರದ ಐಜೂರು ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಯಿತು. ಇದರಿಂದಾಗಿ ಹಳೇ ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು.

ಮೈಸೂರಿನಲ್ಲಿ ಬುಧವಾರ ನೀರು ಬಿಡುಗಡೆ ವಿರೋಧಿಸಿ ಸರಣಿ ಪ್ರತಿಭಟನೆಗಳು ನಡೆದವು. ಕರ್ನಾಟಕ ಸೇನಾ ಪಡೆಯ ಪದಾಧಿಕಾರಿಗಳು ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರೆ, ನಗರದ ಗನ್‌ ಹೌಸ್‌ ಸಮೀಪ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ರಸ್ತೆ ತಡೆ ಚಳವಳಿ ನಡೆಸಿದರು. ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಕರ್ನಾಟಕ ಸೇನಾಪಡೆ ವತಿಯಿಂದ ಖಾಲಿಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ, ದೊಡ್ಡಬಳ್ಳಾಪುರ, ಹಾಸನ, ಮಡಿಕೇರಿ ಸೇರಿ ಕಾವೇರಿ ಕಣಿವೆಯ ಇತರೆಡೆಯೂ ಪ್ರತಿಭಟನೆಗಳು ನಡೆದವು.

ತಮಿಳ್ನಾಡಿಗೆ ನೀರು: ರೈತರ ಆರೋಪ

ಮಂಡ್ಯ: ತಮಿಳುನಾಡಿಗೆ ನೀರು ಬಿಡುಗಡೆಗೆ ಆದೇಶವಾದ ಬೆನ್ನಲ್ಲೇ ಕಬಿನಿ, ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಸರ್ಕಾರ ನೀರು ಬಿಡುಗಡೆ ಮಾಡಲು ಆರಂಭಿಸಿದೆ ಎಂದು ರೈತರು ಆರೋಪ ಮಾಡಿದ್ದಾರೆ. ಕೆಆರ್‌ಎಸ್ ಹೊರಹರಿವು 1745 ಕ್ಯುಸೆಕ್ ಇದೆ. ಕಬಿನಿಯಿಂದಲೂ ಇಷ್ಟೇ ನೀರು ಹೊರಬಿಡಲಾಗುತ್ತಿದೆ. ಕಳೆದ ಹದಿನೈದು ದಿನಗಳಿಂದ ಸುತ್ತಮುತ್ತ ಎಲ್ಲಿಯೂ ಮಳೆಯಾಗದೇ ಇದ್ದರೂ ಗಗನಚುಕ್ಕಿ ಜಲಪಾತದಲ್ಲಿ ಭಾನುವಾರ ಹೆಚ್ಚಿನ ನೀರಿನ ಹರಿವು ಕಂಡುಬರಲು ಹೇಗೆ ಸಾಧ್ಯ ಎಂದು ರೈತರು ಪ್ರಶ್ನಿಸಿದ್ದಾರೆ.

ನಾಳೆ ಮಂಡ್ಯದಲ್ಲಿ ಧರಣಿ: ವಿಜಯೇಂದ್ರ

ಶಿವಮೊಗ್ಗ: ತಮಿಳುನಾಡಿಗೆ ಪ್ರತಿದಿನ 3500 ಕ್ಯುಸೆಕ್‌ ಕಾವೇರಿ ನೀರನ್ನು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿರುವ ಶಿಫಾರಸ್ಸು, ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ದೊಡ್ಡ ಹೊಡೆತ ನೀಡಲಿದೆ. ಹೀಗಾಗಿ ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿ ಜು. 31 ರಂದು ಮಂಡ್ಯದಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.