‘2029ರ ವೇಳೆಗೆ ಎನ್‌ಡಿಎ ಆಡಳಿತದ ಎಲ್ಲ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರುತ್ತೇವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂಬೈ: ‘2029ರ ವೇಳೆಗೆ ಎನ್‌ಡಿಎ ಆಡಳಿತದ ಎಲ್ಲ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರುತ್ತೇವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಲವು ರಾಜ್ಯಗಳಲ್ಲಿ ಯುಸಿಸಿ ಜಾರಿ

ಮುಂಬೈನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾವು ಈಗಾಗಲೇ ಹಲವು ರಾಜ್ಯಗಳಲ್ಲಿ ಯುಸಿಸಿಯನ್ನು ಜಾರಿಗೆ ತಂದಿದ್ದೇವೆ. ಬಿಜೆಪಿ-ಎನ್‌ಡಿಎ ಆಡಳಿತವಿರುವ 21 ರಾಜ್ಯಗಳಲ್ಲಿ 2029ರೊಳಗೆ ಇದನ್ನು ಜಾರಿಗೆ ತರುತ್ತೇವೆ ಎಂಬ ವಿಶ್ವಾಸ ನನಗಿದೆ’ ಎಂದರು. ಮುಂದಿನ ಲೋಕಸಭಾ ಚುನಾವಣೆ 2029ಕ್ಕೆ ನಡೆಯಲಿರುವುದು ಗಮನಾರ್ಹ.

ಮಧ್ಯಪ್ರದೇಶದ ಸಚಿವ ಸಂಪುಟ ಸಭೆ ಯುಜಿಸಿಗೆ ಅನುಮೋದನೆ

ಇತ್ತೀಚೆಗೆ ಮಧ್ಯಪ್ರದೇಶದ ಸಚಿವ ಸಂಪುಟ ಸಭೆ ಯುಜಿಸಿಗೆ ಅನುಮೋದನೆ ನೀಡಿದೆ. 2024ರಲ್ಲಿ ಯುಸಿಸಿ ಅಂಗೀಕರಿಸಿದ ದೇಶದ ಮೊದಲ ರಾಜ್ಯವಾಗಿ ಉತ್ತರಾಖಂಡ ಹೊರಹೊಮ್ಮಿತ್ತು. ಉತ್ತರಾಖಂಡವು 2025ರಿಂದಲೇ ಇದನ್ನು ಸಂಪೂರ್ಣವಾಗಿ ಜಾರಿಗೆ ತಂದಿದ್ದರೆ, ಗುಜರಾತ್, ಅಸ್ಸಾಂ ಮತ್ತು ಮಧ್ಯಪ್ರದೇಶಗಳು ರಾಷ್ಟ್ರಪತಿಗಳ ಅಂಕಿತ ಹಾಗೂ ಅಧಿಸೂಚನೆಗಾಗಿ ಕಾಯುತ್ತಿವೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢ ಕರಡು ರಚನಾ ಸಮಿತಿಗಳನ್ನು ರಚಿಸಿವೆ.