ಕೇಂದ್ರ ಸರ್ಕಾರವು ‘ಅಗ್ನಿಪಥ’ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಸೇನಾಪಡೆಯ ಅಗ್ನಿವೀರರ ಕರ್ತವ್ಯದ ಅವಧಿಯನ್ನು ಹೆಚ್ಚುವರಿಯಾಗಿ 2 ವರ್ಷಗಳವರೆಗೆ ವಿಸ್ತರಿಸುವ ಪ್ರಮುಖ ಘೋಷಣೆ ಮಾಡಿದೆ.

ನವದೆಹಲಿ: ಕೇಂದ್ರ ಸರ್ಕಾರವು ‘ಅಗ್ನಿಪಥ’ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಸೇನಾಪಡೆಯ ಅಗ್ನಿವೀರರ ಕರ್ತವ್ಯದ ಅವಧಿಯನ್ನು ಹೆಚ್ಚುವರಿಯಾಗಿ 2 ವರ್ಷಗಳವರೆಗೆ ವಿಸ್ತರಿಸುವ ಪ್ರಮುಖ ಘೋಷಣೆ ಮಾಡಿದೆ. ಇದರರ್ಥ ಅಗ್ನಿವೀರರ ಸೇವಾವಧಿಯನ್ನು 4 ವರ್ಷದಿಂದ 6 ವರ್ಷಗಳಿಗೆ ಹೆಚ್ಚಿಸಲಾಗಿದೆ.

ಇದಲ್ಲದೆ, 6 ವರ್ಷಗಳ ಅವಧಿಯನ್ನು ಪಡೆಯುವ ಅಗ್ನಿವೀರರಿಗೆ ನಂತರ ಕಾರ್ಯಕ್ಷಮತೆಯ ಮೌಲ್ಯಮಾಪನದ ಆಧಾರದ ಮೇಲೆ ಶಾಶ್ವತ ಸ್ಥಾನಗಳನ್ನು ನೀಡಲು ನಿರ್ಧರಿಸಲಾಗಿದೆ.

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮೂಲ ಯೋಜನೆಯ ಪ್ರಕಾರ ಅಗ್ನಿವೀರರ ಸೇವಾ ಅವಧಿ 4 ವರ್ಷಗಳಾಗಿರುತ್ತವೆ. ಹೊಸ ತೀರ್ಮಾನದಂತೆ, ಶೇ.75ರಷ್ಟು ಅಗ್ನಿವೀರರಿಗೆ ಹೆಚ್ಚುವರಿಯಾಗಿ 2 ವರ್ಷಗಳ ಕಾಲ ಸೇವಾ ವಿಸ್ತರಣೆ ನೀಡಲಾಗುತ್ತದೆ. ಸುಮಾರು 18,000 ಅಗ್ನಿವೀರರು 4 ವರ್ಷಗಳ ಕರ್ತವ್ಯ ಅವಧಿ ಮುಗಿಸಿ ಸಶಸ್ತ್ರ ಪಡೆಗಳಿಂದ ಹೊರಬರಲು ಕೆಲವೇ ದಿನ ಬಾಕಿ ಇದ್ದು, ಅದಕ್ಕಿಂತ ಮುಂಚೆ ಈ ನಿರ್ಧಾರ ಪ್ರಕಟಿಸಲಾಗಿದೆ.

ಸಶಸ್ತ್ರ ಪಡೆಗಳ ಮುಖ್ಯಸ್ಥ (ಸಿಎಸ್‌ಡಿ) ಜ। ಎನ್.ಎಸ್. ರಾಜ ಸುಬ್ರಮಣ್ಯಂ ಅವರು ಪರಿಷ್ಕೃತ ಅಗ್ನಿವೀರ ಯೋಜನೆಯ ವಿವರ ನೀಡಿ, ಅಗ್ನಿವೀರರ ಸೇವಾವಧಿಯನ್ನು 6 ವರ್ಷಗಳಿಗೆ ವಿಸ್ತರಿಸಲಾಗಿದೆ ಎಂದರು.

ಬದಲಾವಣೆ ಏನು?:

- ಈ ಹಿಂದೆ ಅಗ್ನಿವೀರರ ಸೇವಾ ಅವಧಿ 4 ವರ್ಷಗಳಷ್ಟಿತ್ತು. ಈಗ 2 ವರ್ಷ ವಿಸ್ತರಣೆಯಾಗಿರುವುದರಿಂದ ಒಟ್ಟು ಸೇವಾ ಅವಧಿ 6 ವರ್ಷಗಳಿಗೆ ಏರಿಕೆಯಾಗಲಿದೆ.

- ಮೂಲ ಯೋಜನೆಯ ಪ್ರಕಾರ, 4 ವರ್ಷಗಳ ನಂತರ ಶೇ. 25ರಷ್ಟು ಅಗ್ನಿವೀರರನ್ನು ಮಾತ್ರ ಕಾಯಂ ಸೇವೆಗೆ ಸೇರಿಸಿಕೊಂಡು, ಉಳಿದ ಶೇ. 75ರಷ್ಟು ಜನರನ್ನು ಸೇವೆಯಿಂದ ಬಿಡುಗಡೆ ಮಾಡಬೇಕಿತ್ತು. ಆದರೆ ಈಗ ಪರಿಷ್ಕೃತ ನಿಯಮದಂತೆ, ಮೊದಲ ಹಂತದಲ್ಲಿ ಕಾಯಂ ಆಗದೇ ಉಳಿದ ಶೇ. 75ರಷ್ಟು ಅಗ್ನಿವೀರರಿಗೂ ಹೆಚ್ಚುವರಿ 2 ವರ್ಷಗಳ ಸೇವಾ ಅವಧಿಯನ್ನು ನೀಡಲಾಗುತ್ತದೆ.

ಆಸಕ್ತರಿರುವ ಎಲ್ಲಾ ಅಗ್ನಿವೀರರಿಗೂ ಅವಕಾಶ

- ಈ ವಿಸ್ತರಿತ 2 ವರ್ಷಗಳ ಅವಧಿ ಮುಗಿದ ನಂತರ, ಆಸಕ್ತರಿರುವ ಎಲ್ಲಾ ಅಗ್ನಿವೀರರಿಗೂ ಅವರ ಅರ್ಹತೆ ಮತ್ತು ನಿಗದಿಪಡಿಸಿದ ಆಯ್ಕೆ ಪ್ರಕ್ರಿಯೆಯ ಆಧಾರದ ಮೇಲೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಕಾಯಂ ಸೈನಿಕರಾಗಿ ಸೇರಲು ಮತ್ತೊಂದು ಅವಕಾಶ ಸಿಗಲಿದೆ.

- 2 ವರ್ಷಗಳ ವಿಸ್ತರಿತ ಅವಧಿಯಲ್ಲಿ ಸೇವೆ ಸಲ್ಲಿಸುವ ಅಗ್ನಿವೀರರಿಗೆ ಹೆಚ್ಚಿನ ವೇತನ ದೊರೆಯಲಿದ್ದು, ಆ ಬಳಿಕ ಸೇವೆಯಿಂದ ಹೊರಬರಲು ಇಚ್ಛಿಸುವವರಿಗೆ ಪರಿಷ್ಕೃತ ’ಸೇವಾ ನಿಧಿ’ ಪ್ಯಾಕೇಜ್ ಕೂಡ ಸಿಗಲಿದೆ.