ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಹಾಗೂ ರೈತರ ಸಂಕಷ್ಟದ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆಯೆಂದು ಘೋಷಿಸಿ, ರೈತರಿಗೆ ತುರ್ತು ಪರಿಹಾರ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಅವರಿಗೆ ಜಿಲ್ಲಾಧಿಕಾರಿ ಜಿ.ಪ್ರಭುರವರ ಮೂಲಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕ ಮನವಿ ಸಲ್ಲಿಸಿತು.

ಕುರುಬೂರು ಶಾಂತಕುಮಾರ್ ಬಣದ ಜಿಲ್ಲಾ ಸಂಘದ ನಿಯೋಗವು ಜಿಲ್ಲಾಧ್ಯಕ್ಷ ಶ್ರೀನಿವಾಸಲು ನೇತೃತ್ವದಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭುರವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಸಲ್ಲಿಸಿದ ಮನವಿಯಲ್ಲಿ, ರಾಜ್ಯದಲ್ಲೇ ಅತಿ ಕಡಿಮೆ ಮಳೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಾಖಲಾಗಿದ್ದು, ಜುಲೈ ತಿಂಗಳು ಕಳೆದರೂ ಬಹುತೇಕ ಕಡೆ ಬಿತ್ತನೆ ನಡೆದಿಲ್ಲ. ಕೆರೆ- ಕಟ್ಟೆಗಳು ಬತ್ತಿ, ಅಂತರ್ಜಲ ಮಟ್ಟ ಕುಸಿದು ನೂರಾರು ಕೊಳವೆ ಬಾವಿಗಳು ಒಣಗಿವೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದ್ದು, ರೈತರು ಹಾಗೂ ಕೃಷಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿವರಿಸಿದರು.

ರೈತರಿಗೆ ಪ್ರತಿ ಎಕರೆಗೆ ₹25 ಸಾವಿರ ಬೆಳೆ ಪರಿಹಾರ, ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿ ಮುಂದೂಡಿಕೆ ಮತ್ತು ಬಡ್ಡಿ ಮನ್ನಾ, ನರೇಗಾ ಯೋಜನೆಯಡಿ 200 ದಿನಗಳ ಉದ್ಯೋಗ ಖಾತರಿ, ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಬರ ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಜಿ.ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಬಗ್ಗೆ ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ಕುಡಿಯುವ ನೀರು, ಮೇವು ಸೇರಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬೆಳೆ ವಿಮೆ ಕುರಿತು ರೈತರಿಗೆ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಳೆ ಪರಿಸ್ಥಿತಿಯ ಸಮಗ್ರ ಪರಿಶೀಲನೆಯ ಬಳಿಕ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು, ನಿಮ್ಮ ಬೇಡಿಕೆಗಳಲ್ಲಿ ನಮ್ಮ ಹಂತದಲ್ಲಿಯೇ ಪರಿಹಾರ ಕಾಣಿಸುವಂತಹವನ್ನು ಶೀಘ್ರವೇ ಪರಿಹರಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.


ನಿಯೋಗದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶ್ರೀನಿವಾಸುಲು, ಬೈರಾರೆಡ್ಡಿ, ಸತ್ಯನಾರಾಯಣ ವಿ.ಕೆ., ಕೃಷ್ಣಪ್ಪ, ಜೆ.ವಿ. ರಾಜಣ್ಣ, ಜಿ. ಶಾಂತಮ್ಮ, ಕಾಕಲಚಿಂತೆ ನಾರಾಯಣಸ್ವಾಮಿ, ಬಿ.ವಿ. ವೆಂಕಟಶಿವಾರೆಡ್ಡಿ, ರಾಮಪ್ಪ, ಕದಿರಪ್ಪ ಮತ್ತಿತರರು ಇದ್ದರು.