11.45 ಲಕ್ಷ ರು. ಸೊತ್ತು ಆನ್‌ಲೈನ್‌ ಆರ್ಡರ್‌ ಮಾಡಿ ವಂಚನೆ: ಇಬ್ಬರ ಸೆರೆ

KannadaprabhaNewsNetwork |  
Published : Nov 04, 2024, 12:32 AM IST
ಬಂಧಿತ ಆರೋಪಿಗಳು. | Kannada Prabha

ಸಾರಾಂಶ

ಪ್ರಕರಣ ನಡೆದ ಬಳಿಕ ಅಮೆಜಾನ್‌ ಸಂಸ್ಥೆಯ ಡೆಲಿವರಿ ಪಾಲುದಾರ ಮಹೀಂದ್ರ ಲಾಜಿಸ್ಟಿಕ್ಸ್ ಸಿಬ್ಬಂದಿ ಸ್ಟಿಕ್ಕರ್‌ಗಳನ್ನು ಪರಿಶೀಲಿಸಿದಾಗ ವಂಚನೆ ನಡೆದಿರುವುದು ಗೊತ್ತಾಗಿದೆ. ಬಳಿಕ ಅದನ್ನು ಅಮೆಜಾನ್‌ಗೆ ವರದಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಆನ್‌ಲೈನ್‌ ಡೆಲಿವರಿ ಸಂಸ್ಥೆ ಅಮೆಜಾನ್‌ನಲ್ಲಿ ಸುಳ್ಳು ಗುರುತು ತೋರಿಸಿ 11,45,000 ರು. ಮೌಲ್ಯದ ಕ್ಯಾಮರಾ ಆರ್ಡರ್ ಮಾಡಿ, ವಿತರಣೆಗೆ ಬಂದ ಡೆಲಿವರಿ ಬಾಯ್‌ ಗಮನ ಬೇರೆಡೆ ಸೆಳೆದು ಅಸಲಿ ವಸ್ತುಗಳನ್ನು ಸುಲಿಗೆ ಮಾಡಿ, ನಕಲಿ ವಸ್ತುಗಳನ್ನು ಅದರಲ್ಲಿಟ್ಟು ವಂಚಿಸಿದ ಇಬ್ಬರು ಆರೋಪಿಗಳನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳು ಇದೇ ರೀತಿ ಲಕ್ಷಾಂತರ ರು. ಮೌಲ್ಯದ ಸರಕುಗಳನ್ನು ಆರ್ಡರ್‌ ಮಾಡಿ ವಂಚಿಸಿರುವುದು ತನಿಖೆ ವೇಳೆ ಬಯಲಾಗಿದೆ.

ರಾಜಸ್ಥಾನ ಮೂಲದ ರಾಜ್ ಕುಮಾರ್ ಮೀನಾ (23) ಮತ್ತು ಸುಭಾಷ್ ಗುರ್ಜರ್ (27) ಬಂಧಿತರು.

ಇವರಿಬ್ಬರು ಸೆ. 21ರಂದು ‘ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ’ ಎಂಬ ವಿಳಾಸದಲ್ಲಿ ಅಮಿತ್ ಎಂಬ ನಕಲಿ ಹೆಸರಿನಲ್ಲಿ ದುಬಾರಿ ಸೋನಿ ಕ್ಯಾಮೆರಾ ಮತ್ತು ಇತರ 10 ವಸ್ತುಗಳನ್ನು (11.45 ಲಕ್ಷ ರು. ಮೊತ್ತ) ಆರ್ಡರ್ ಮಾಡಿದ್ದರು. ಈ ವಸ್ತುಗಳ ವಿತರಣೆಗೆ ಡೆಲಿವರಿ ಬಾಯ್‌ ಬಂದಾಗ ಆರೋಪಿ ರಾಜ್ ಕುಮಾರ್ ಮೀನಾ ಪೂರ್ವ ಯೋಜನೆಯಂತೆ ತಪ್ಪು ಒಟಿಪಿ ನೀಡುತ್ತಾ ವಿಳಂಬ ಮಾಡಿದ್ದಾನೆ. ಈ ವೇಳೆ ಇನ್ನೋರ್ವ ಆರೋಪಿ ಸುಭಾಷ್ ಗುರ್ಜರ್ ಡೆಲಿವರಿ ಬಾಯ್‌ ಗಮನ ಬೇರೆಡೆ ಸೆಳೆದು ಸೋನಿ ಕ್ಯಾಮೆರಾ, ಉಳಿದ ವಸ್ತುಗಳನ್ನು ಹಾಗೂ ಅವುಗಳ ಮೂಲ ಸ್ಟಿಕ್ಕರ್‌ಗಳನ್ನು ತೆಗೆದು ನಕಲಿ ವಸ್ತುಗಳನ್ನು ಅದರಲ್ಲಿಟ್ಟು ನಕಲಿ ಸ್ಟಿಕ್ಕರ್‌ ಅಂಟಿಸಿದ್ದಾನೆ. ಇಷ್ಟೊತ್ತಿಗೆ ತಪ್ಪಾದ ಒಟಿಪಿ ನೀಡಿದ್ದರಿಂದ ಡೆಲಿವರಿ ದೃಢೀಕರಣ ವಿಳಂಬವಾಯಿತು.

ಬಳಿಕ ಆರೋಪಿಗಳು ಮರುದಿನ ಕ್ಯಾಮೆರಾ ಸಂಗ್ರಹಿಸುವುದಾಗಿ ವಿತರಣಾ ಸಿಬ್ಬಂದಿಗೆ ತಿಳಿಸಿ ಅವರನ್ನು ವಾಪಸ್ ಕಳುಹಿಸಿದ್ದಾರೆ. ಡೆಲಿವರಿ ಮಾಡುವ ವ್ಯಕ್ತಿಗೆ ಈ ವಂಚನೆ ಕುರಿತು ಯಾವುದೇ ಸುಳಿವು ಸಿಗದೆ ಹಿಂತಿರುಗಿದ್ದಾರೆ. ಬಳಿಕ ಆರೋಪಿಗಳು ತಾವು ಮಾಡಿದ್ದ ಆರ್ಡರನ್ನೇ ರದ್ದುಗೊಳಿಸಿದರು. ಈ ರೀತಿ ವಂಚನೆ ಮೂಲಕ ಪಡೆದ ಲಕ್ಷಾಂತರ ರು. ಸರಕನ್ನು ಮಾರಾಟ ಮಾಡಿ ಸಂಪಾದಿಸೋದೆ ಇವರ ಚಾಳಿಯಾಗಿತ್ತು ಎಂದು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗ್ರವಾಲ್‌ ತಿಳಿಸಿದ್ದಾರೆ.

ಪ್ರಕರಣ ನಡೆದ ಬಳಿಕ ಅಮೆಜಾನ್‌ ಸಂಸ್ಥೆಯ ಡೆಲಿವರಿ ಪಾಲುದಾರ ಮಹೀಂದ್ರ ಲಾಜಿಸ್ಟಿಕ್ಸ್ ಸಿಬ್ಬಂದಿ ಸ್ಟಿಕ್ಕರ್‌ಗಳನ್ನು ಪರಿಶೀಲಿಸಿದಾಗ ವಂಚನೆ ನಡೆದಿರುವುದು ಗೊತ್ತಾಗಿದೆ. ಬಳಿಕ ಅದನ್ನು ಅಮೆಜಾನ್‌ಗೆ ವರದಿ ಮಾಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಉರ್ವ ಪೊಲೀಸರು ಡೆಲಿವರಿ ಪಾಯಿಂಟ್ ಮತ್ತು ಏರ್‌ಪೋರ್ಟ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ತನಿಖೆಗೆ ಇಳಿದು ಆರೋಪಿಗಳನ್ನು ಬಂಧಿಸಿದ್ದಾರೆ. ಕ್ಯಾಮರಾ ಮಾರಾಟದಿಂದ ಪಡೆದ 11,45,000 ರು. ನಗದನ್ನು ಪೊಲೀಸರು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಭಾರೀ ವಂಚಕರು:

ಆರೋಪಿಗಳಿಬ್ಬರ ವಿರುದ್ಧ ಇದೇ ರೀತಿ ವಂಚನೆ ಮಾಡಿದ 11 ಪ್ರಕರಣಗಳು ದಾಖಲಾಗಿವೆ. ಅಸ್ಸಾಂನ ಜಬಲ್‌ಪುರಿ ಪೊಲೀಸ್‌ ಠಾಣೆ (20.09 ಲಕ್ಷ ರು. ಮೌಲ್ಯದ ಕ್ಯಾಮರಾ), ಒಡಿಶಾದ ಭರತ್‌ಪುರ ಪೊಲೀಸ್ ಠಾಣೆ (20.28 ಲಕ್ಷ ರು. ಮೌಲ್ಯದ ಕ್ಯಾಮೆರಾ), ಔರಂಗಾಬಾದ್‌ನ ಒಸ್ಮಾನ್‌ಪುರ ಪೊಲೀಸ್ ಠಾಣೆ (10.96 ಲಕ್ಷ ರು. ಮೌಲ್ಯದ ಕ್ಯಾಮೆರಾ), ರಾಜಸ್ಥಾನದ ಮೌಂಟ್ ಅಬು ಪೊಲೀಸ್ ಠಾಣೆ (3.71 ಲಕ್ಷ ರು. ಮೌಲ್ಯದ ಕ್ಯಾಮೆರಾ), ತೆಲಂಗಾಣದ ಮೈಲಾರ್‌ದೇವಪಲ್ಲಿ ಪೊಲೀಸ್ ಠಾಣೆ (14 ಲಕ್ಷ ರು. ಮೌಲ್ಯದ ಕ್ಯಾಮೆರಾ ಮತ್ತು ಲ್ಯಾಪ್‌ಟಾಪ್), ಉತ್ತರ ಪ್ರದೇಶದ ಸುಲ್ತಾನ್‌ಪುರ ಪೊಲೀಸ್ ಠಾಣೆ (10.35 ಲಕ್ಷ ರು. ಮೌಲ್ಯದ ಕ್ಯಾಮೆರಾ), ಸೇಲಂನ ಪಲ್ಲಪಟ್ಟಿ ಪೊಲೀಸ್ ಠಾಣೆ (14.34 ಲಕ್ಷ ರು. ಮೌಲ್ಯದ ಕ್ಯಾಮೆರಾಗಳು), ಕೇರಳದ ಮರಡು ಪೊಲೀಸ್ ಠಾಣೆ (14.50 ಲಕ್ಷ ರು. ಮೌಲ್ಯದ ಕ್ಯಾಮೆರಾ), ಹಜರತ್‌ಗಂಜ್ ಪೊಲೀಸ್ ಠಾಣೆ (6.01 ಲಕ್ಷ ರು. ಮೌಲ್ಯದ ಐಫೋನ್‌ಗಳು), ಹಜರತ್‌ಗಂಜ್ ಪೊಲೀಸ್ ಠಾಣೆ (ಐಫೋನ್‌ಗಳು- ಪತ್ತೆಯಾಗಿಲ್ಲ), ಏರ್‌ಪೋರ್ಟ್ ಪೊಲೀಸ್ ಠಾಣೆ ತಿರುಚ್ಚಿ (15 ಲಕ್ಷ ರು. ಮೌಲ್ಯದ ಕ್ಯಾಮರಾ) ಸೇರಿದಂತೆ ಭಾರೀ ವಂಚನೆ ನಡೆಸಿರುವುದು ಗೊತ್ತಾಗಿದೆ.

ಮಂಗಳೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಷನ್ 346, 350(1), 323, 319(3) ಬಿಎನ್‌ಎಸ್ ಅಡಿ ಪ್ರಕರಣ ದಾಖಲಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ
ಸರ್ಕಾರದಿಂದ ಗೋಬ್ಯಾಕ್‌ ಗೌರ್ನರ್‌ ಅಭಿಯಾನ ಚಿಂತನೆ