ನಾಳೆ ಮುಖ್ಯಮಂತ್ರಿಗಳಿಂದ 1146.76 ಕೋಟಿ ರು. ವೆಚ್ಚದ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ

KannadaprabhaNewsNetwork |  
Published : Jul 27, 2025, 12:00 AM IST
25ಕೆಎಂಎನ್ ಡಿ16,17   | Kannada Prabha

ಸಾರಾಂಶ

ಮದ್ದೂರು ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಇತಿಹಾಸದಲ್ಲೆ ಅಧಿಕಾರಕ್ಕೆ ಬಂದ ಕೇವಲ 2 ವರ್ಷಗಳಲ್ಲಿ ಸಾವಿರಾರು ಕೋಟಿ ಅನುದಾನದ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿಯೊಬ್ಬರೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 28 ರಂದು ಸಾಧನಾ ಸಮಾವೇಶದಲ್ಲಿ ₹1146.76 ಕೋಟಿಗೂ ಹೆಚ್ಚಿನ ಅನುದಾನದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕ್ಷೇತ್ರದ ಜನರು ಪಕ್ಷಾತೀತವಾಗಿ ಆಗಮಿಸಬೇಕು ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಮನವಿ ಮಾಡಿದರು.

ತಾಲೂಕಿನ ಸೋಮನಹಳ್ಳಿಯ ತಿಮ್ಮದಾಸ್ ಹೋಟೆಲ್ ಸಮೀಪ ಆಯೋಜಿಸಿರುವ ಬೃಹತ್ ವೇದಿಕೆಯನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತಾ ಕಾರ್ಯ ವೀಕ್ಷಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮದ್ದೂರು ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಇತಿಹಾಸದಲ್ಲೆ ಅಧಿಕಾರಕ್ಕೆ ಬಂದ ಕೇವಲ 2 ವರ್ಷಗಳಲ್ಲಿ ಸಾವಿರಾರು ಕೋಟಿ ಅನುದಾನದ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿಯೊಬ್ಬರೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಸಂಪುಟದ ಸಚಿವರು, ನಿಗಮ, ಮಂಡಳಿ ಅಧ್ಯಕ್ಷರು ಹಾಗೂ ಜಿಲ್ಲೆಯ ಶಾಸಕರುಗಳು ಆಗಮಿಸಲಿದ್ದಾರೆ. ಈ ವೇಳೆ 1200 ಕೋಟಿ ರು. ಮೊತ್ತದ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಚಾಲನೆ ನೀಡಲಿದ್ದಾರೆ ಎಂದರು.

ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ ಎಂಬುವುದಕ್ಕೆ ಸಾಧನಾ ಸಮಾವೇಶ ಸಾಕ್ಷಿಯಾಗಲಿದೆ. ಕ್ಷೇತ್ರದ ಜನರ ಬಹು ಬೇಡಿಕೆಗಳಾದ ನಾಲೆ ಮತ್ತು ಕೆರೆಗಳ ಅಭಿವೃದ್ಧಿಗೆ ಕಾವೇರಿ ನೀರಾವರಿ ನಿಗಮದಿಂದ 300 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಕಾಮಗಾರಿಗಳು ನಡೆಯುತ್ತಿದೆ. ಇದರಲ್ಲಿ ರೈತರಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.

ಲೋಕೋಪಯೋಗಿ, ಇಂಧನ, ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಸೇರಿದಂತೆ ವಿವಿಧ ಇಲಾಖೆಗಳ ಮೂಲಕ 1400 ರು. ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಹಲವು ಕಾಮಗಾರಿಗಳು ಉದ್ಘಾಟನೆಗೆ ಸಿದ್ಧಗೊಂಡಿವೆ ಮತ್ತು ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ 500ಕ್ಕೂ ಹೆಚ್ಚಿನ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಯಾವುದೇ ಗೊಂದಲ ಸೃಷ್ಟಿಯಾಗದಂತೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, 16 ಇಲಾಖೆಗಳಿಂದ ಒಟ್ಟು 87 ಕಾಮಗಾರಿಗಳ ಪೈಕಿ 60 ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ 27 ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಲಿದೆ. ಎಲ್ಲಾ ಕಾಮಗಾರಿಗಳ ಒಟ್ಟು ಮೊತ್ತ 1146.76 ಕೋಟಿಗಳಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ಆಗಮಿಸುವ ವಾಹನಗಳನ್ನು ನಿಲುಗಡೆ ಮಾಡಲು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸೂಕ್ತ ಬಂದೋಬಸ್ತ್ ವ್ಯವಸ್ಥೆಗಾಗಿ ಒಬ್ಬ ಎಸ್ಪಿ ನೇತೃತ್ವದಲ್ಲಿ 1000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾವುದೇ ರೀತಿಯ ಗೊಂದಲಗಳಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಜಿಪಂ ಸಿಇಒ ಕೆ.ಆರ್. ನಂದಿನಿ ಮಾತನಾಡಿ, ಕಾರ್ಯಕ್ರಮದಂದು ಜೀತ ವಿಮುಕ್ತ 85 ಜನರಿಗೆ ನನ್ನ ಗುರುತು ಅಭಿಯಾನದಡಿ 14 ದಾಖಲೆ ನೀಡಲಾಗುವುದು. ಸಾರಥಿ ಯೋಜನೆಯಡಿ ಇಬ್ಬರಿಗೆ ಕಾರ್ ಖರೀದಿಸಲು ಸಹಾಯಧನ ನೀಡಲಾಗುವುದು ಎಂದರು.

ಸಿಎಂ, ಡಿಸಿಎಂ ಹಾಗೂ ಸಚಿವರು, ಶಾಸಕರನ್ನು ಸ್ವಾಗತಿಸಲು ಶಿವಪುರ ಸತ್ಯಾಗ್ರಹ ಧ್ವಜ ಸೌಧದ ವಿನ್ಯಾಸ ದೊಂದಿಗೆ ವೇದಿಕೆಯ ಮುಂಭಾಗ ಆಕರ್ಷಿತವಾಗಿ ಸಿದ್ಧವಾಗಿದೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ವಸ್ತುಪ್ರದರ್ಶನ ಮಳಿಗೆಯನ್ನು ತೆರೆಯಲಾಗುವುದು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಪುರಸಭಾ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಪ್ರಸನ್ನಕುಮಾರ್, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ , ತಾಪಂ ಇಒ ರಾಮಲಿಂಗಯ್ಯ, ಪುರಸಭಾಧ್ಯಕ್ಷೆ ಕೋಕಿಲ ಅರುಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಚೆಲುವರಾಜು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...