ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಾರ್ಯಭಾರ ಹಂಚಿಕೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಮ್ಮೇಳನದ ಉದ್ಘಾಟನೆ ಹಾಗೂ ಮೆರವಣಿಗೆಯಲ್ಲಿ ಸುಮಾರು 5000 ಜನರು ಭಾಗವಹಿಸುವ ನಿರೀಕ್ಷೆ ಇದೆ. ಅವರೆಲ್ಲರಿಗೂ ಊಟ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕಲಾವಿದರಿಗೆ ವಸತಿ ವ್ಯವಸ್ಥೆ ಸೇರಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹೆಚ್ಚಿನ ಜನರು ಭಾಗವಹಿಸಲು 15 ರಿಂದ 20 ಸಾವಿರ ಕರಪತ್ರಗಳನ್ನು ಜಿಲ್ಲಾದ್ಯಂತ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿರುವ ಎಲ್ಲಾ ಸ್ವಚ್ಛತಾ ವಾಹಿನಿಗಳ ಧ್ವನಿ ವರ್ಧಕದ ಮೂಲಕ ಪ್ರಚಾರ ಮಾಡಲಾಗುತ್ತದೆ ಎಂದು ತಿಳಿಸಿದರು.
ವೇದಿಕೆ ಸಿದ್ಧತೆ, ಕವಿಗೋಷ್ಠಿ, ಪುಸ್ತಕ ಪ್ರದರ್ಶನ, ಅಲಂಕಾರ, ಆಸನ ವ್ಯವಸ್ಥೆ, ಪೋಲಿಸ್ ಬಿಗಿ ಭದ್ರತೆ, ಆಹ್ವಾನ ಪತ್ರಿಕೆಗಳ ಮುದ್ರಣ, ವಿತರಣೆ, ಕಾರ್ಯಕ್ರಮ ನಿರ್ವಹಣೆ, ನಿರೂಪಣೆ ಇನ್ನಿತರೆ ಸಿದ್ಧತಾ ಕಾರ್ಯಗಳನ್ನು ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಕಾರ್ಯಭಾರ ಹಂಚಿಕೆ ಮಾಡಿ ಈ ಎಲ್ಲಾ ಕಾರ್ಯಗಳನ್ನು ಸಮರ್ಪಕವಾಗಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.ಮಾಜಿ ಸಚಿವ ಹಾಗೂ ಹಾಲಿ ಶಾಸಕ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಚಿಂತಾಮಣಿ ನಗರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕಳೆದ 15 ದಿನಗಳಿಂದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಈಗಾಗಲೇ 5 ಲಕ್ಷ ಹಣ ಬಿಡುಗಡೆಯಾಗಿದೆ. ಜಾನಪದ ಕಲಾವಿದ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ರಾಜ್ಯಸಭಾ ಸದಸ್ಯರಾದ ಎಲ್. ಹನುಮಂತಯ್ಯ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಅಂದು ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ, 9:30 ರಿಂದ 11 ಗಂಟೆಯವರೆಗೆ ಮೆರವಣಿಗೆ, 11 ಗಂಟೆ ನಂತರ ವೇದಿಕೆ ಕಾರ್ಯಕ್ರಮಗಳು, ಕವಿಗೋಷ್ಠಿಗಳು ನಡೆಯಲಿವೆ. 2ನೇ ದಿನದ ಮುಕ್ತಾಯ ಸಮಾರಂಭದಲ್ಲಿ ಕೈವಾರ ಯೋಗಿನಾರೇಯಣ ಮಠದ ಧರ್ಮಾಧಿಕಾರಿ ಜಯರಾಂ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮಗಳು ಜರುಗಲಿವೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಜಿಲ್ಲೆಯ ಜನಪ್ರತಿನಿಧಿಗಳು, ಸಾಹಿತಿಗಳು, ಲೇಖಕರು, ಕಸಾಪ ಸದಸ್ಯರು, ಪದಾಧಿಕಾರಿಗಳು, ಕನ್ನಡ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೋ. ಕೋಡಿರಂಗಪ್ಪ ಮಾತನಾಡಿ, ಎರಡು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆ ಮತ್ತು ನಾಡಿನ ಖ್ಯಾತ ಸಾಧಕರು, ಕಲಾವಿದರು, ಹಿರಿಯ ಕವಿಗಳು, ಲೇಖಕರು, ಸಾಹಿತಿಗಳು ಭಾಗವಹಿಸಲಿದ್ದಾರೆ. ಸಾಹಿತ್ಯ ಚರ್ಚೆ, ಸಾಂಸ್ಕೃತಿಕ ನೃತ್ಯ ಪ್ರದರ್ಶನ ಹಾಗೂ ಸಮಾಜ ಪರಿವರ್ತನೆ ಆಶಯ ಹೊಂದಿರುವ ನಾಟಕಗಳ ಪ್ರದರ್ಶನ ಇರಲಿದ್ದು, ಜಿಲ್ಲೆಯ ಸಮಸ್ತ ನಾಗರಿಕರು ಆಗಮಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶೋಭಿತಾ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತಿಕ್ ಪಾಷಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎಂ.ಆರ್.ಮಂಜುನಾಥ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.