ಬಾಗೂರು: ಹೋಬಳಿಯ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 11ನೇ ವರ್ಷದ ಶ್ರೀ ವಿಶ್ವಕರ್ಮ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಶಾಸಕ ಸಿಎನ್ ಬಾಲಕೃಷ್ಣ ಉತ್ಸವದಲ್ಲಿ ಪಾಲ್ಗೊಂಡು ವಿಶ್ವಕರ್ಮ ಜಯಂತ್ಯುತ್ಸವಕ್ಕೆ ಶುಭಕೋರಿ ವಿಶ್ವಕರ್ಮ ದೇವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.
ಪೂಜೆ ಬಳಿಕ ಮಾತನಾಡಿದ ಶಾಸಕರು, ಹೋಬಳಿ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 11ನೇ ವರ್ಷದ ವಿಶ್ವಕರ್ಮ ಜಯಂತ್ಯುತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ. ಸಂಘದ ಎಲ್ಲಾ ಸದಸ್ಯರ ಸಹಕಾರದಿಂದ ಜಯಂತ್ಯುತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದ್ದು, ಹೋಬಳಿ ಕೇಂದ್ರದಲ್ಲಿ ಸಂಘದ ಕಟ್ಟಡ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದ್ದು, ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಹೋಬಳಿ ಕೇಂದ್ರದ ವ್ಯಾಪ್ತಿಯಲ್ಲಿ ಸೂಕ್ತ ಜಾಗ ನೀಡುವುದಾಗಿ ಭರವಸೆ ನೀಡಿದರು. ಸರ್ಕಾರದ ವತಿಯಿಂದ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪನೆಗೊಂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಸಮಾಜದ ಜನರಿಗೆ ನೆರವಾಗುವಂತೆ ಮನವಿ ಮಾಡಿದರು.ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಸಿ. ಎನ್. ಬಾಲಕೃಷ್ಣ ಅವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು.
ಹೋಬಳಿ ಅಧ್ಯಕ್ಷ ರಾಜ ಆಚಾರ್, ಉಪಾಧ್ಯಕ್ಷ ನಾಗೇಶ ಆಚಾರ್, ಕಾರ್ಯದರ್ಶಿಗಳಾದ ರಂಗಾಚಾರ್, ಭಾಸ್ಕರಾಚಾರ್, ಯೋಗೀಶ ಆಚಾರ್, ಖಜಾಂಚಿ ಬಿ.ಡಿ. ನವೀನ್, ಗೌರವಾಧ್ಯಕ್ಷ ಮಂಜಾಚಾರ್, ಮುಖಂಡರಾದ ಬಾಗೂರು ಶಿವಣ್ಣ, ಕಾಂತರಾಜ್ ಸೇರಿ ಸಂಘದ ಎಲ್ಲಾ ಸರ್ವ ಸದಸ್ಯರು ಹಾಗೂ ಸಮಾಜದ ಪ್ರಮುಖರು ಮತ್ತು ಗ್ರಾಮಸ್ಥರು ಹಾಜರಿದ್ದರು.