- ದಾವಣಗೆರೆ ವಿಮಾನ ಮಟ್ಟಿ ಚೆಕ್ ಪೋಸ್ಟ್ ಬಳಿ ರಾತ್ರೋರಾತ್ರಿ ಸ್ವತ್ತು ವಶಕ್ಕೆ । ಸೂಕ್ತ ದಾಖಲೆ ಇಲ್ಲದ ಕಾರಣಕ್ಕೆ ವಶ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಸುಮಾರು ₹12.50 ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣಗಳನ್ನು ನಗರದ ಹೊರವಲಯದ ವಿಮಾನ ಮಟ್ಟಿ ಸಮೀಪದ ಲೋಕಿಕೆರೆ ಕ್ರಾಸ್‌ನ ಚೆಕ್ ಪೋಸ್ಟ್‌ನಲ್ಲಿ ಗುರುವಾರ ರಾತ್ರಿ ಜಪ್ತಿ ಮಾಡಲಾಗಿದೆ.ಚೆಕ್ ಪೋಸ್ಟ್‌ನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಚಿನ್ನ ಹಾಗೂ ವಜ್ರಾಭರಣಗಳ ಸ್ವತ್ತು ಪತ್ತೆಯಾಗಿವೆ. ದಾವಣಗೆರೆಯ ವಿವಿಧ ಚಿನ್ನಾಭರಣದ ಅಂಗಡಿಗಳಿಗೆ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಸಾಗಿಸುತ್ತಿದ್ದುದಾಗಿ ವಾಹನದಲ್ಲಿದ್ದ ಸಿಬ್ಬಂದಿ ಹೇಳಿದ್ದಾರೆ. ಸ್ವತ್ತುಗಳ ಮಾಲೀಕರು ಚಿನ್ನಾಭರಣ ಮತ್ತು ವಜ್ರದ ಆಭರಣಗಳ ಏ.6 ಮತ್ತು 9ನೇ ತಾರೀಖಿನ ಹಳೆಯ ಬಿಲ್‌ಗಳನ್ನು ತೋರಿಸಿ, ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ, ಪೂರಕವಾದ ಸೂಕ್ತ ದಾಖಲೆಗಳನ್ನು ಹಾಜರುಪಡಿಸಲಿಲ್ಲ. ಮಾಲೀಕರ ಸಮರ್ಥನೆಗೆ ಸೊಪ್ಪುಹಾಕದೇ ಚುನಾವಣಾಧಿಕಾರಿ ಲೋಕೇಶ್ ನೇತೃತ್ವದಲ್ಲಿ ಗುರುವಾರ ರಾತ್ರಿಯೇ ₹12.50 ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣಳನ್ನು ವಾಹನ ಸಮೇತ ವಶಕ್ಕೆ ಪಡೆಯಲಾಯಿತು.
ಲೋಕಸಭೆ ಚುನಾವಣೆ ಹಿನ್ನೆಲೆ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಶುರು ಆಗುವುದರೊಂದಿಗೆ ಚುನಾವಣೆ ಕಾವೇರುತ್ತಿದೆ. ಈ ಹಿನ್ನೆಲೆ ಬಹುಕೋಟಿ ಮೌಲ್ಯದ ಚಿನ್ನಾಭರಣ, ವಜ್ರದ ಆಭರಣಗಳನ್ನು ಅಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳಾದ ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಮಕ್ಷಮ ವಶಕ್ಕೆ ಪಡೆಯಲಾಗಿದೆ.ಕಳೆದ ಕೆಲ ದಿನಗಳಿಂದಲೂ ದಿನದ 24 ಗಂಟೆ ಆಯಕಟ್ಟಿನ ಸ್ಥಳಗಳಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ನಗರಾಭಿವೃದ್ಧಿ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ಚೆಕ್ ಪೋಸ್ಟ್‌ಗಳಲ್ಲಿ ಕಣ್ಗಾವಲಿಟ್ಟಿದ್ದಾರೆ. ಪರಸ್ಥಳದಿಂದ ಬರುವಂತಹ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ₹50 ಸಾವಿರಕ್ಕಿಂತ ಹೆಚ್ಚಿನ ಹಣ ಹಾಗೂ ಚುನಾವಣೆಯಲ್ಲಿ ಆಸೆ, ಆಮಿಷವೊಡ್ಡುವಂತಹ ವಸ್ತುಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಜಪ್ತಿ ಮಾಡುತ್ತಿದ್ದಾರೆ.
- - - ಬಾಕ್ಸ್‌ಜಿಎಸ್‌ಟಿ ಬಿಲ್ ಸಾಮ್ಯತೆದಾವಣಗೆರೆ: ದಾಖಲೆ ಇಲ್ಲದ ₹12 ಕೋಟಿ ಮೌಲ್ಯದ ಚಿನ್ನಾಭರಣ ಸಾಗಿಸುತ್ತಿದ್ದ ವಾಹನ ಮಾಲು ಸಮೇತ ವಶಕ್ಕೆ ಪಡೆದಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಇದೀಗ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.ವಶಪಡಿಸಿಕೊಂಡ ಚಿನ್ನಕ್ಕೆ ಜಿಎಸ್‌ಟಿ ಬಿಲ್ ತಾಳೆಯಾಗುತ್ತಿದೆ. ಆದರೆ, ನಗರದ ಲೋಕಿಕೆರೆ ಕ್ರಾಸ್‌ನ ಚೆಕ್ ಪೋಸ್ಟ್‌ನಲ್ಲಿ ಸಾಗಾಣಿಕೆ ಬಗ್ಗೆ ಚುನಾವಣಾ ಸಂದರ್ಭ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಲಿಖಿತ ಮಾಹಿತಿ ನೀಡಲು ವಿಫಲವಾಗಿದ್ದರು. ಆದ್ದರಿಂದ ಚಿನ್ನಾಭರಣವನ್ನು ವಾಹನ ಸಮೇತ ಜಪ್ತಿ ಮಾಡಲಾಗಿತ್ತು.ಬೆಂಗಳೂರಿನಿಂದ ದಾವಣಗೆರೆ ಮತ್ತು ಶಿವಮೊಗ್ಗದ ಕಲ್ಯಾಣ ಜ್ಯೂಯಲರ್ಸ್, ಮಲಬಾರ್, ಬಿಮಾ ಗೋಲ್ಡ್ ಹಾಗೂ ಇತರೆ ವರ್ತಕರಿಗೆ ಚಿನ್ನಾಭರಣಗಳನ್ನು ಸರಬರಾಜು ಮಾಡಲಾಗುತ್ತಿತ್ತು ಎಂದು ಜಿಲ್ಲಾಡಳಿತ ತಿಳಿಸಿದೆ.
- - - ಬಾಕ್ಸ್ ಅಂಗಡಿಗಳಿಗೆ ಆಭರಣ ಸಾಗಿಸುವ ವಾಹನ ಪ್ರಸ್ತುತ ಜಪ್ತಿ ಮಾಡಿರುವ ವಾಹನವು ಬೆಂಗಳೂರು ಇನ್ನಿತರೆ ಕಡೆಗಳಿಂದ ಚಿನ್ನ ಮತ್ತು ವಜ್ರದ ಆಭರಣಗಳನ್ನು ತಂದು, ದಾವಣಗೆರೆ ಸೇರಿದಂತೆ ವಿವಿಧ ಕಡೆಗಳ ಚಿನ್ನಾಭರಣ ಮಾರಾಟದ ಅಂಗಡಿಗಳಿಗೆ ತಲುಪಿಸುವ ಕೆಲಸ ಮಾಡುತ್ತದೆ ಎನ್ನಲಾಗಿದೆ. ಎಟಿಎಂಗಳಿಗೆ ಸೂಕ್ತ ಬಂದೋಬಸ್ತ್‌ನಲ್ಲಿ ಹಣ ತುಂಬಿಸಲು ನಿಗದಿತ ವಾಹನ ವ್ಯವಸ್ಥೆ ಇರುತ್ತದೆ. ಹಾಗೆಯೇ, ಈ ವಾಹನದಲ್ಲಿ ಸಹ ಅಂಗಡಿಗಳಿಗೆ ಚಿನ್ನಾಭರಣ ತಲುಪಿಸುತ್ತದೆ ಎನ್ನಲಾಗಿದೆ. ಆದರೆ, ನಿರ್ದಿಷ್ಟ ದಿನಾಂಕಗಳ ಸೂಕ್ತ ದಾಖಲಾತಿ ಇಲ್ಲದ್ದಕ್ಕೆ ಈಗ ಸ್ವತ್ತುಗಳ ಮಾಲೀಕರು ಪರದಾಡುವಂತಾಗಿದೆ.- - -
-12ಕೆಡಿವಿಜಿ2, 3:ದಾವಣಗೆರೆ ವಿಮಾನ ಮಟ್ಟಿ ಬಳಿ ಲೋಕಿಕೆರೆ ಕ್ರಾಸ್ ಚೆಕ್ ಪೋಸ್ಟ್‌ನಲ್ಲಿ ₹12.50 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣ ಸ್ವತ್ತು ಹಾಗೂ ವಾಹನವನ್ನು ಅಧಿಕಾರಿಗಳು, ಸಿಬ್ಬಂದಿ ಜಪ್ತಿ ಮಾಡಿದರು.