ನಾಗಲಮಡಿಕೆ ದೇವಸ್ಥಾನ ಅಭಿವೃದ್ಧಿಗೆ 12 ಕೋಟಿ ರು. ಬಿಡುಗಡೆ

KannadaprabhaNewsNetwork | Published : Jan 22, 2025 12:30 AM

ಸಾರಾಂಶ

ಐತಿಹಾಸಿಕ ಹಿನ್ನಲೆ ಹಾಗೂ ಮುಜರಾಯಿ ಇಲಾಖೆಗೆ ವ್ಯಾಪ್ತಿಗೆ ಒಳಪಟ್ಟ ತಾಲೂಕಿನ ನಾಗಲಮಡಿಕೆಯ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದ ಪ್ರಗತಿಗೆ ಸಿದ್ದತೆ ಕೈಗೊಂಡಿದ್ದು ಕುಕ್ಕೆ ಮಾದರಿಯಲ್ಲಿ 30 ಕೋಟಿ ರು. ವೆಚ್ಚದಲ್ಲಿ ದೇವಸ್ಥಾನ ನವೀಕರಣಕ್ಕೆ ಸಜ್ಜಾಗಿದ್ದು ಈಗಾಗಲೇ ರಾಜ್ಯ ಮುಜರಾಯಿ ಇಲಾಖೆಯಿಂದ 12ಕೋಟಿ ರು. ಹಣ ಬಿಡುಗಡೆಯಾಗಿದೆ ಶಾಸಕ ಎಚ್.ವಿ.ವೆಂಕಟೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಐತಿಹಾಸಿಕ ಹಿನ್ನಲೆ ಹಾಗೂ ಮುಜರಾಯಿ ಇಲಾಖೆಗೆ ವ್ಯಾಪ್ತಿಗೆ ಒಳಪಟ್ಟ ತಾಲೂಕಿನ ನಾಗಲಮಡಿಕೆಯ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದ ಪ್ರಗತಿಗೆ ಸಿದ್ದತೆ ಕೈಗೊಂಡಿದ್ದು ಕುಕ್ಕೆ ಮಾದರಿಯಲ್ಲಿ 30 ಕೋಟಿ ರು. ವೆಚ್ಚದಲ್ಲಿ ದೇವಸ್ಥಾನ ನವೀಕರಣಕ್ಕೆ ಸಜ್ಜಾಗಿರುವುದಾಗಿ ಶಾಸಕ ಎಚ್.ವಿ.ವೆಂಕಟೇಶ್ ಹೇಳಿದರು.ಮಂಗಳವಾರ ಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ಎಚ್.ವಿ.ವೆಂಕಟೇಶ್, ಪಾವಗಡ ಪಟ್ಟಣದಿಂದ ಸುಮಾರು 20 ಕಿಮೀ ದೂರದಲ್ಲಿರುವ ತಾಲೂಕಿನ ನಾಗಲಮಡಿಕೆಯ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನವಿದ್ದು ಅಂತ್ಯ ಸುಬ್ರಮಣ್ಯಸ್ವಾಮಿ ಎಂದೇ ಖ್ಯಾತಿ ಪಡೆದಿದೆ. ಈ ದೇವಸ್ಥಾನಕ್ಕೆ ಕರ್ನಾಟಕ,ಆಂಧ್ರ ತಮಿಳುನಾಡು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರಿದ್ದು, ಸುಮಾರು 400ವರ್ಷಗಳ ಇತಿಹಾಸ ಹೊಂದಿದೆ.ಇಲ್ಲಿನ ನಾಗಲಮಡಿಕೆಯ ಶ್ರೀ ಸುಬ್ರಮಣ್ಯಸ್ವಾಮಿ ದೇಗುಲ ಕಂದಾಯ ಇಲಾಖೆಗೆ ಸೇರಿದ್ದ 12ಎಕರೆ ಜಮೀನಿನಲ್ಲಿ ವ್ಯಾಪಿಸಿಕೊಂಡಿದ್ದು, ದೇವಸ್ಥಾನದ ಮುಂಭಾಗದಲ್ಲಿ ಉತ್ತರ ಪಿನಾಕಿನಿ ನದಿ ಹರಿಯುತ್ತಿದೆ. ಈ ನದಿಗೆ ಅಡ್ಡಲಾಗಿ ಬೃಹತ್ ಬ್ಯಾರೇಜ್‌ ನಿರ್ಮಿಸಿದ್ದು ಈ ಭಾಗದಲ್ಲಿ ಕುಡಿಯುವ ನೀರು ಹಾಗೂ ಕೊಳವೆಬಾವಿಯ ಅಂಜರ್ಜಲ ಹೆಚ್ಚಳಕ್ಕೆ ಸಹಕಾರಿಯಾಗಿದೆ ಎಂದರು.

ಇತ್ತೀಚೆಗೆ ಎಂಜಿನಿಯರ್ ಹಾಗೂ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳ ತಂಡ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಅಂದಾಜು ವೆಚ್ಚದಂತೆ ದೇವಸ್ಥಾನದ ನವೀಕರಣಗೊಳಿಸಲು ಈಗಾಗಲೇ ರಾಜ್ಯ ಮುಜರಾಯಿ ಇಲಾಖೆಯಿಂದ 12ಕೋಟಿ ರು. ಹಣ ಬಿಡುಗಡೆಯಾಗಿದೆ. ಇದರ ಜತೆ ಜೋಳಿಗೆ ಹಿಡಿದು ಭಕ್ತರಲ್ಲಿ ಚಂದಾ ಎತ್ತುವ ಮೂಲಕ ಹಣ ಕೂಡಿಕರಿಸಿ ಕೂಡಲೇ ದೇವಸ್ಥಾನದ ನವೀಕರಣಕ್ಕೆ ಅಡಿಪಾಯಿ ಹಾಕಲು ಸಜ್ಜಾಗಿರುವುದಾಗಿ ಹೇಳಿದರು.

ದೇವಸ್ಥನದ ಗರ್ಭಗುಡಿ ಹೊರತುಪಡಿಸಿ ಸುಸಜ್ಜಿತವಾದ ದೇವಸ್ಥಾನದ ಗೋಡೆ, ಆಕರ್ಷಣೀಯವಾದ ದೇಗುಲದ ಗೋಪುರ, ದೇವಸ್ಥಾನದ ಒಳ ಮತ್ತು ಹೊರಭಾಗದಲ್ಲಿ ಟೈಲ್ಸ್, ವಿವಾಹ ಇತರೆ ಶುಭಸಮಾರಂಭಗಳಿಗೆ ಸುಸಜ್ಜಿತವಾದ ಸಮುದಾಯ ಭವನ, ಪಾರ್ಕಿಂಗ್ ವ್ಯವಸ್ಥೆ,ದೇ ವಸ್ತಾನಕ್ಕೆ ಬರುವ ಭಕ್ತರಿಗೆ ಸಮಸ್ಯೆ ಆಗದಂತೆ ಸರದಿ ಸಾಲಿನಲ್ಲಿ ತೆರಳಲು ವ್ಯವಸ್ಥೆ, ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ಅಭಿವೃದ್ಧಿ ಪಡಿಸಲಾಗುವುದು. ಈಗಾಗಲೇ ದೇವಸ್ಥಾನದ ನವೀಕರಣಕ್ಕೆ ಮುಜರಾಯಿ ಹಾಗೂ ಕಂದಾಯ ಇಲಾಖೆ ಸಿದ್ಧತೆ ಕೈಗೊಂಡಿದ್ದು ಪಂಚಾಗದ ಪ್ರಕಾರ ಶುಭದಿನದ ಮಾಹಿತಿ ಪಡೆದು ದೇವಸ್ಥಾನದ ಪ್ರಗತಿಗೆ ಸ್ವಾಮೀಜಿ ಹಾಗೂ ಹಿರಿಯ ಗಣ್ಯ ವ್ಯಕ್ತಿಗಳಿಂದ ಶಾಸ್ತ್ರೋಕ್ತವಾಗಿ ಅಡಿಗಲ್ಲು ಹಾಕುವುದಾಗಿ ಹೇಳಿದ ಅವರು. ಮುಂದಿನ ವರ್ಷ ಸುಬ್ರಮಣ್ಯಸ್ವಾಮಿ ಬ್ರಹ್ಮರಥೋತ್ಸವ ವೇಳೆಗೆ ಪ್ರಗತಿ ಕಾಣಲು ಸಾಧ್ಯವಿದೆ ಎಂದರು.

Share this article