ವಿಜಯನಗರ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ₹12 ಕೋಟಿ ಅನುದಾನ ಒದಗಿಸಿರುವೆ: ಶಾಸಕ ಎಚ್.ಆರ್.ಗವಿಯಪ್ಪ

KannadaprabhaNewsNetwork |  
Published : Nov 13, 2025, 01:15 AM IST
12ಎಚ್‌ಪಿಟಿ3- ಹೊಸಪೇಟೆ ತಾಲೂಕಿನ ಪಾಪಿನಾಯಕಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯನ್ನು ಬುಧವಾರ ಶಾಸಕ ಎಚ್.ಆರ್‌. ಗವಿಯಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ಗ್ರಾಮೀಣ ಹೆಣ್ಣು ಮಕ್ಕಳು ಹಾಗೂ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು

ಹೊಸಪೇಟೆ: ಗ್ರಾಮೀಣ ಹೆಣ್ಣು ಮಕ್ಕಳು ಹಾಗೂ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಅವರಿಗೆ ಉನ್ನತ ಶಿಕ್ಷಣ ನಿಡುವ ಸದುದ್ದೇಶದಿಂದ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಲಾಗುತ್ತಿದೆ. ಪ್ರಸುತ್ತ ವರ್ಷದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ₹12 ಕೋಟಿ ಅನುದಾನ ನೀಡಲಾಗಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.ತಾಲೂಕಿನ ಪಾಪಿನಾಯಕಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯದಿಂದ ಹಾಗೂ ರಾಜ್ಯ ಯೋಜನೆಯಡಿ ಮಂಜೂರಾದ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯನ್ನು ಉದ್ಘಾಟಿಸಿ ಅವರು ಬುಧವಾರ ಮಾತನಾಡಿದರು.

ಸರ್ಕಾರದ ಈ ಕ್ರಮ ಶಾಲೆಯ ಸುತ್ತಮುತ್ತಲಿನ ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸಹಕಾರಿಯಾಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಗಳನ್ನು ಉನ್ನತೀಕರಿಸಲಾಗುತ್ತಿದೆ. ಪ್ರತಿಯೊಬ್ಬರೂ ಶಿಕ್ಷಣ ಪಡೆಯುವ ಹಕ್ಕಿದೆ. ಮುಂದಿನ ದಿನಗಳಲ್ಲಿ ಜನರು ಗ್ರಾಮದಲ್ಲಿ ಒಂದು ಸೂಕ್ತ ಸ್ಥಳವನ್ನು ಗುರುತಿಸಿ ಕೊಟ್ಟಲ್ಲಿ ನೂತನ ಪ್ರೌಢಶಾಲೆ ಕಟ್ಟಡ ಹಾಗೂ ಹೊಸ ಕ್ರೀಡಾಂಗಣವನ್ನು ನಿರ್ಮಾಸಲಾಗುತ್ತದೆ ಎಂದರು.

ವಿವಿಧ ಜಿಲ್ಲೆಗಳಿಂದ ಆಗಮಿಸುವ ಕ್ರಿಡಾಪಟುಗಳಿಗೆ ಮೂಲಸೌಲಭ್ಯ ಒದಗಿಸಲು ಮತ್ತು ಜಿಲ್ಲಾ ಕ್ರೀಡಾಂಗಣವನ್ನು ಅಭಿವೃದ್ದಿಪಡಿಸಲು ₹5 ಕೋಟಿ ಅನುದಾನವನ್ನು ಬಳಕೆ ಮಾಡಲಾಗುತ್ತಿದೆ. ಪಾಪಿನಾಯಕನ ಹಳ್ಳಿ, ನಾಗೇನಹಳ್ಳಿ, ಬಸವನದುರ್ಗ, ಗಾದಿಗನೂರು, ಕಮಲಾಪುರದ ಶಾಲೆಯಲ್ಲಿನ ಕ್ರೀಡಾಂಗಣಗಳನ್ನು ಅಭಿವೃದ್ದಿ ಪಡಿಸಲಾಗುವುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರ ಹೊರಪೇಟೆ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಮೊದಲ ಬಾರಿ ಎರಡು ಪ್ರೌಢಶಾಲೆಗಳನ್ನು ಉನ್ನತೀಕರಿಸಲಾಗಿದೆ. ಪಾಪಿನಾಯಕಹಳ್ಳಿಯ ಭಾಗದಲ್ಲಿ ಪ್ರೌಢಶಾಲೆಯನ್ನು ಉನ್ನತೀಕರಿಸುವ ಮುಖಾಂತರ ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯವನ್ನು ದೊರಕಿಸಿದಂತಾಗಿದೆ. ಶಾಸಕರು ಹೇಳಿದಂತೆ ಗ್ರಾಮದಲ್ಲಿ ಕೆಪಿಎಸ್ ಶಾಲೆಯನ್ನು ನಿರ್ಮಿಸಿದಲ್ಲಿ ಒಂದನೇ ತರಗತಿಯಿಂದ ಪದವಿ ಪೂರ್ವ ಹಂತದವರೆಗೆ ವಿದ್ಯಾಭ್ಯಾಸ ಮಾಡಲು ಅನುಕೂಲವಾಗಲಿದೆ. ಶಾಸಕರು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕಾಗಿ 2 ವರ್ಷಗಳಲ್ಲಿ ₹68 ಕೋಟಿ ಅನುದಾನ ನೀಡಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ 328 ಶಾಲೆಗಳ ಕೊಠಡಿಗಳನ್ನು ದುರಸ್ತಿ ಹಾಗೂ 142ಕ್ಕೂ ಅಧಿಕ ಹೊಸ ಕಟ್ಟಡಗಳು ಮತ್ತು 30 ಹೈಟೆಕ್ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಪಾಪಿನಾಯಕನಹಳ್ಳಿ ಗ್ರಾಪಂ ಅಧ್ಯಕ್ಷೆ ಅಂಕ್ಲಮ್ಮ, ತಾಪಂ ಇಒ ಆಲಂ ಬಾಷಾ, ಎಸ್‌ಡಿಎಮ್‌ಸಿ ಅಧ್ಯಕ್ಷ ವೀರೇಶ್, ಎಸ್‌ಡಿಎಮ್‌ಸಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಶಾಲೆಯ ಶಿಕ್ಷಕರು, ಸೇರಿದಂತೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

PREV

Recommended Stories

ಬಿಳಿಕೆರೆ ಬಳಿ ಒಂದು ಗಂಡು ಹುಲಿ ಮರಿ ಸೆರೆ
ಪ್ರಕೃತಿ ವಿಕೋಪಗಳ ಎದುರಿಸುವ ಧೈರ್ಯ ಎಲ್ಲರಲ್ಲಿರಲಿ: ಜಿಪಂ ಸಿಇಒ ಗಿತ್ತೆ ಮಾಧವ ರಾವ್‌