- ಹರಿಹರದಲ್ಲಿ ಪತ್ರಿಕಾ ದಿನಾಚರಣೆ ಉದ್ಘಾಟನೆ । ಹರಿಹರದ ಪತ್ರಕರ್ತರಿಗೆ ಲ್ಯಾಪ್‌ಟಾಪ್ ವಿತರಣೆಗೆ ಕ್ರಮದ ಭರವಸೆ - - - ಕನ್ನಡಪ್ರಭ ವಾರ್ತೆ ಹರಿಹರ
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆಗೆ ವಾರ್ಷಿಕ ₹೧೨ ಕೋಟಿ ವ್ಯಯವಾಗಲಿದೆ. ಆದರೆ ಪತ್ರಕರ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ಯಾರಿಗೆ ನೀಡಬೇಕೆಂದು ನಿರ್ಣಯಿಸಲು ಕಷ್ಟವಾಗಿದೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಹೇಳಿದರು.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶ್ರೀಮತಿ ಗಿರಿಯಮ್ಮ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರ ಸಂಘ ಹಾಗೂ ಸರ್ಕಾರ ಜತೆಯಾಗಿ ನಡೆದಾಗ ಅಭಿವೃದ್ಧಿ ಸಾಧ್ಯವಾಗುವುದು. ಪತ್ರಕರ್ತರ ಸಮಸ್ಯೆ ಏನು ಅನ್ನುವುದು ನನಗೆ ಗೊತ್ತು. ಸಾಧ್ಯವಾದಷ್ಟು ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ದಾವಣಗೆರೆಯಲ್ಲಿ ಪತ್ರಿಕಾ ಭವನ ನಿರ್ಮಾಣದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ, ಹರಿಹರದ ಪತ್ರಕರ್ತರಿಗೆ ಲ್ಯಾಪ್‌ಟಾಪ್ ವಿತರಣೆ ಕುರಿತು ಸಂಬಂಧಿತರೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.ಪತ್ರಕರ್ತರು ತಾಜಾ ಸುದ್ದಿ ಕೊಡುವ ಭರದಲ್ಲಿ ನೈಜತೆಗೆ ಕೊರತೆ ಆಗದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ತಾಜಾ ಸುದ್ದಿ ಪ್ರಸಾರ ಮಾಡುವ ಮುನ್ನ ಸುದ್ದಿ ನಿಜವೋ, ಸುಳ್ಳೋ ಎಂಬುದು ಖಾತ್ರಿಪಡಿಸಿಕೊಳ್ಳಬೇಕು. ಒಂದು ಸುದ್ದಿ ಪ್ರಸಾರ ಮಾಡಿದ ನಂತರ ಸುಳ್ಳೆಂದು ಗೊತ್ತಾದರೆ, ಅದು ಬಂದೂಕಿನಿಂದ ಹೊರಟ ಗುಂಡು ವಾಪಸ್ ಪಡೆಯಲಾಗದಂಥ ಸ್ಥಿತಿಗೆ ಸಮ ಎಂದರು.
ಯುವ ಪತ್ರಕರ್ತರಿಗೆ ಅಧ್ಯಯನಶೀಲತೆ ಬೇಕು. ಅಧ್ಯಯನಶೀಲತೆ ಇರುವ ಪತ್ರಕರ್ತ ಸಮಾಜವನ್ನು ಎಚ್ಚರಿಸುವ ಕಾರ್ಯ ಮಾಡಬಲ್ಲ. ಪ್ರಸ್ತುತ ಪತ್ರಿಕೋದ್ಯಮ ಜಾಹಿರಾತು ಪ್ರಭಾವಿತ ಪತ್ರಿಕೋದ್ಯಮವಾಗಿ ಪರಿವರ್ತನೆಯಾಗಿದೆ. ಬಹುತೇಕ ನೈಜ ಪತ್ರಕರ್ತರು ಮನೆಗೆ ಮಾರಿ, ಊರಿಗೆ ಉಪಕಾರಿ ಆಗಿರುತ್ತಾರೆ. ಕರ್ತವ್ಯದ ಮಧ್ಯೆಯೂ ಕುಟುಂಬದ ಸದಸ್ಯರ ಪೋಷಣೆ, ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಪತ್ರಕರ್ತರ ಆರೋಗ್ಯ ಹದಗೆಟ್ಟರೆ ಅಥವಾ ಮೃತಪಟ್ಟರೆ ಕುಟುಂಬದವರಿಗೆ ತೊಂದರೆ ಆಗುತ್ತದೆ ಎಂದು ಸಲಹೆ ನೀಡಿದರು.ನಕಲಿ ಪತ್ರಕರ್ತರೇ ತೊಡಕು:
ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಯೂ ಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಆಧರಿಸಿದ ವಾಹಿನಿಗಳ ಹೆಸರಿನಲ್ಲಿ ಕೆಲವರು ಪತ್ರಕರ್ತರೆಂದು ಹೇಳುತ್ತಾ ನೈಜ ಪತ್ರಕರ್ತರ ಸ್ಥಾನಕ್ಕೂ ಕುತ್ತು ತರುತ್ತಿದ್ದಾರೆ. ನೈಜರಂತೆ ವೇಷಧರಿಸಿದ ನಕಲಿ ಪತ್ರಕರ್ತರೇ ನೈಜ ಪತ್ರಕರ್ತರಿಗೆ ಸರ್ಕಾರದ ಸೌಲಭ್ಯ ದೊರಕಿಸುವಲ್ಲಿ ತೊಡಕಾಗಿ ಪರಿಣಿಮಿಸಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.ಎಸ್‌ಎಸ್‌ಎಲ್‌ಸಿ ಪಾಸಾಗಿದ್ದಕ್ಕೆ ತಂದೆ ಕೊಡಿಸಿದ ಸೈಕಲ್‌ನಲ್ಲಿ ನಂತರ ಪತ್ರಿಕೆಗಳ ವಿತರಣೆ ಮೂಲಕ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬಂದ ಕೆ.ವಿ.ಪ್ರಭಾಕರ್ ಅವರು ತಮ್ಮ ನಿರಂತರ ಶ್ರಮ ಹಾಗೂ ಪ್ರಾಮಾಣಿಕತೆಯಿಂದಾಗಿ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ಪತ್ರಕರ್ತರ ಸಮಸ್ಯೆಗಳ ನಿವಾರಣೆಗೆ ಬೆನ್ನುಲುಬಾಗಿ ನಿಂತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಕರ್ತರ ಮಧ್ಯೆ ಸ್ಪರ್ಧೆ:ಮುಖ್ಯ ಅತಿಥಿ, ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಸಾಮಾಜಿಕ ಜಾಲತಾಣಗಳಿಂದಾಗಿ ಪತ್ರಕರ್ತರ ಮಧ್ಯೆ ಸ್ಪರ್ಧೆ ಇದೆ. ಅದನ್ನೂ ಕ್ರೀಡಾ ಮನೋಭಾವದಿಮದ ಸ್ವೀಕರಿಸಬೇಕು. ಆದರೂ ಮುದ್ರಣ ಮಾಧ್ಯಮವೇ ಹೆಚ್ಚಿನ ವಿಶ್ವಾಸಾರ್ಹತೆ ಹೊಂದಿದೆ. ಸರ್ಕಾರದಿಂದ ತಮ್ಮ ಶಿಫಾರಸಿನಿಂದ ಕೊಡಮಾಡುವ ನಿವೇಶನ ಹಂಚಿಕೆ ಸಮಯದಲ್ಲಿ ಪತ್ರಕರ್ತರಿಗೂ ಆದ್ಯತೆ ನೀಡಲಾಗುವುದೆಂದು ಹೇಳಿದರು.
ವಸತಿ ಸೌಲಭ್ಯ ಕಲ್ಪಿಸಿ:ದಾವಣಗೆರೆ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್ ಮಾತನಾಡಿ, ವೈದ್ಯರು, ವಕೀಲರಂತೆ ಪತ್ರಕರ್ತರ ರಕ್ಷಣೆಗೂ ಕಾಯ್ದೆ ಜಾರಿ ಮಾಡಿದರೆ ನೈಜ ಪತ್ರಕರ್ತರಿಗೆ ಅನುಕೂಲವಾಗುತ್ತದೆ. ನನೆಗುದಿಗೆ ಬಿದ್ದಿರುವ ನಿವೃತ್ತ ಪತ್ರಕರ್ತರಿಗೆ ನಿವೃತ್ತಿ ವೇತನ ನೀಡುವ ಯೋಜನೆ ಜಾರಿ ಮಾಡಬೇಕು. ದೂಡಾದಿಂದ ಹರಿಹರ-ದಾವಣಗೆರೆ ಪತ್ರಕರ್ತರಿಗೆ ವಸತಿ ಸೌಲಭ್ಯ ದೊರಕಿಸಬೇಕೆಂದು ಹೇಳಿದರು.
ಕೆ.ವಿ.ಪ್ರಭಾಕರ, ನಾಗರಾಜ್ ಬಡದಾಳ್, ಶಿವಾನಂದ ತಗಡೂರು, ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ನಂದಿಗಾವಿ, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಕೆ.ಚಂದ್ರಣ್ಣ, ಜಿಲ್ಲಾಧ್ಯಕ್ಷ ಮಂಜುನಾಥ ಏಕಬೋಟೆ, ತಾಲೂಕು ಘಟಕದ ಅಧ್ಯಕ್ಷೆ ಶಾಂಭವಿ ನಾಗರಾಜ್ ಅವರನ್ನು ಸತ್ಕರಿಸಲಾಯಿತು.ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಫಕ್ರುದ್ದೀನ್, ಪದಾಧಿಕಾರಿಗಳಾದ ವೀರೇಶ್, ವೇದಮೂರ್ತಿ, ಹರಿಹರ ಘಟಕ ಕಾರ್ಯದರ್ಶಿ ಎಚ್.ಸಿ. ಕೀರ್ತಿಕುಮಾರ್, ಪದಾಧಿಕಾರಿಗಳಾದ ಶೇಖರ್ ಗೌಡ ಪಾಟೀಲ್, ಎಚ್.ಸುಧಾಕರ್, ಆರ್.ಮಂಜನಾಥ, ಮಂಜುನಾಥ ಪೂಜಾರ್, ಬಿ.ಎಂ. ಚಂದ್ರಶೇಖರ್, ಆರ್.ಬಿ. ಪ್ರವೀಣ್, ಚಿದಾನಂದ ಕಂಚಿಕೇರಿ, ಗಂಗನರಸಿ ಕುಮಾರ್, ಎಂ.ಎಸ್. ಆನಂದ್ ಕುಮಾರ್, ಸಂತೋಷ ನೋಟದವರ್, ವಿಶ್ವನಾಥ ಮೈಲಾಳ್, ಜಿ.ಎಂ.ಮಂಜುನಾಥ, ಮಲೆಬೆನ್ನೂರಿನ ದೇವರಾಜ್, ನಟರಾಜನ್, ರಾಮಶ್ರೇಷ್ಠಿ, ಸದಾನಂದ, ಶಿವಕುಮಾರ್, ಎಂ.ಬಿ.ಆಬಿದ್ ಅಲಿ ಇದ್ದರು.
- - - -೨೭ಎಚ್‌ಆರಆರ್‌೩:ಹರಿಹರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನ ಕಾರ್ಯಕ್ರಮವನ್ನು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿಪ್ರಭಾಕರ ಉದ್ಘಾಟಿಸಿದರು. ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ್, ಶ್ರೀನಿವಾಸ್, ಮಂಜುನಾಥ ಏಕಬೋಟೆ, ಶಾಂಭವಿ ನಾಗರಾಜ್ ಇತರರಿದ್ದರು.