ಮೈಸೂರು ವಿವಿ, ಸುತ್ತೂರು ಕ್ಷೇತ್ರಕ್ಕೆ ಭೇಟಿ ನೀಡಿದ್ದ ಡಾ. ಮನಮೋಹನ್‌ ಸಿಂಗ್‌

KannadaprabhaNewsNetwork | Published : Dec 28, 2024 12:46 AM

ಸಾರಾಂಶ

ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ, ಜಿಡಿಪಿ ಹೆಚ್ಚಳ, ಯುವಕರಿಗೆ ಉದ್ಯೋಗವಕಾಶಗಳು

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್ ಅವರು ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಬಾಗಿಯಾಗಿದ್ದರು. ಇನ್ಫೋಸಿಸ್‌ ಕ್ಯಾಂಪಸ್‌ ಹಾಗೂ ಶ್ರೀ ಸುತ್ತೂರು ಕ್ಷೇತ್ರದಲ್ಲಿ ದಾಸೋಹ ಭವನ ಉದ್ಘಾಟಿಸಿದ್ದರು.

ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ, ಖ್ಯಾತ ಆರ್ಥಿಕತಜ್ಞ ಪ್ರೊ.ಎಂ. ಮಾದಯ್ಯ ಅವರ ಆಪ್ತರಾಗಿದ್ದರು. ದೆಹಲಿಗೆ ಹೋದಾಗ ಭೇಟಿಯಾಗುತ್ತಿದ್ದರು. ಅಲ್ಲದೇ ಫೋನ್‌ನಲ್ಲಿ ಕೂಡ ಸಂಪರ್ಕ ಇತ್ತು. ಮಾದಯ್ಯ ಅವರು 1991 ರಿಂದ 1997 ರವರೆಗೆ [ಮೂರು ವರ್ಷಗಳ ಎರಡು ಅವಧಿ] ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು. ಇದೇ ಅವಧಿಯಲ್ಲಿ ಡಾ.ಸಿಂಗ್‌ ಅವರು ಮೈವಿವಿ ಘಟಿಕೋತ್ಸವದಲ್ಲಿ ಕೂಡ ಭಾಗವಹಿಸಿದ್ದರು. ಆದರೆ ಆಗ ಅವರಿನ್ನೂ ಪ್ರಧಾನಿಯಾಗಿರಲಿಲ್ಲ. ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು.

22.5.2004 ರಿಂದ 23.5.2014 ಸತತ ಹತ್ತು ವರ್ಷ ಪ್ರಧಾನಿಯಾಗಿದ್ದ ಡಾ.ಸಿಂಗ್‌ ಅವರು 2005 ರ ಫೆ.12 ರಂದು ಮೈಸೂರಿನ ಹೆಬ್ಬಾಳಿನಲ್ಲಿ ಇನ್ಫೋಸಿಸ್‌ ಕ್ಯಾಂಪಸ್‌ ಉದ್ಘಾಟಿಸಿದ್ದರು. ಅಂದಿನ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎನ್‌. ಧರಂಸಿಂಗ್‌, ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಯೋಜನೆ ಆಯೋಗದ ಉಪಾಧ್ಯಕ್ಷರಾಗಿದ್ದ ಮಾಂಟೆಸಿಂಗ್‌ ಅಹ್ಲುವಾಲಿಯಾ ಕೂಡ ಭಾಗಿಯಾಗಿದ್ದರು.

ಅಂದು ಡಾ.ಸಿಂಗ್‌ ಅವರು ರಾಜಕಾರಣಿಯಂತೆ ಮಾತನಾಡಲಿಲ್ಲ. ಬದಲಿಗೆ ಅತ್ಯಂತ ಮೆಲು ಧ್ವನಿಯಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ, ಜಿಡಿಪಿ ಹೆಚ್ಚಳ, ಯುವಕರಿಗೆ ಉದ್ಯೋಗವಕಾಶಗಳು ಮತ್ತಿತರ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದರು.

ಅದೇ ದಿನ ಶ್ರೀ ಸುತ್ತೂರು ಕ್ಷೇತ್ರಕ್ಕೆ ಭೇಟಿ ನೀಡಿ ದಾಸೋಹ ಭವನ ಉದ್ಘಾಟಿಸಿದ್ದರು. ಜೆಎಸ್ಎಸ್‌ ದಂತ ವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ಶಂಕುಸ್ಥಾಪನೆ ಕೂಡ ನೆರವೇರಿಸಿದ್ದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಮುಖ್ಯಮಂತ್ರಿ ಎನ್‌. ಧರಂಸಿಂಗ್‌, ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಎಚ್.ಎಸ್‌. ಮಹದೇವಪ್ರಸಾದ್‌ ಮೊದಲಾದವರು ಕೂಡ ಭಾಗಿಯಾಗಿದ್ದರು.

Share this article