ಗಿರೀಶ್ ಮಾದೇನಹಳ್ಳಿ
ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆಗೆ ರಾಜಧಾನಿ ಹೊರವಲಯದಲ್ಲಿ ಕೋಟ್ಯಂತರ ರು. ಮೌಲ್ಯದ 12 ಗುಂಟೆ ಜಮೀನು ಕಬಳಿಕೆ ಹಾಗೂ ಸ್ಥಳೀಯವಾಗಿ ಹವಾ ಸೃಷ್ಟಿಸುವುದೇ ಪ್ರಮುಖ ಕಾರಣ ಎಂದು ನ್ಯಾಯಾಲಯಕ್ಕೆ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.
ತನ್ನ ಆಪ್ತರ ಭೂ ಮಾಫಿಯಾ ಚಟುವಟಿಕೆ ಹಾಗೂ ರೌಡಿಸಂ ಕೃತ್ಯಗಳಿಗೆ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರ ಶ್ರೀರಕ್ಷೆ ಇತ್ತು ಎಂದು ದೂರಲಾಗಿದೆ. ಇದೇ ಕಾರಣಕ್ಕೆ ರೌಡಿ ಹತ್ಯೆ ಪ್ರಕರಣದಲ್ಲಿ ಶಾಸಕರಿಗೆ ಸಂಕಷ್ಟ ಎದುರಾಗಿದೆ.ಹಲವು ವರ್ಷಗಳಿಂದ ಶಾಸಕರ ಆಪ್ತ ಎನ್ನಲಾದ ಹೆಣ್ಣೂರಿನ ಜಗದೀಶ ಅಲಿಯಾಸ್ ಜಗ್ಗ ಹಾಗೂ ಭಾರತೀನಗರದ ರೌಡಿ ಬಿಕ್ಲು ಶಿವನ ಮಧ್ಯೆ ವೈರತ್ವ ಇತ್ತು. ಕೆ.ಆರ್.ಪುರ, ಹೆಣ್ಣೂರು, ಭಾರತೀನಗರ, ರಾಮಮೂರ್ತಿ ನಗರ, ಹಲಸೂರು ಹಾಗೂ ಬಾಣಸವಾಡಿ ಸೇರಿ ಬೆಂಗಳೂರು ಪೂರ್ವ ಭಾಗದಲ್ಲಿ ಹಿಡಿತ ಸಾಧಿಸಲು ಈ ಇಬ್ಬರ ಮಧ್ಯೆ ಪೈಪೋಟಿ ಇತ್ತು. ಇದೇ ಕಾರಣಕ್ಕೆ ಹಲವು ಬಾರಿ ಎರಡು ಗುಂಪುಗಳ ಮಧ್ಯೆ ಆಗಾಗ್ಗೆ ಬಡಿದಾಟಗಳು ನಡೆದಿದ್ದವು ಎಂದು ಹೇಳಲಾಗಿದೆ.
ಕುಂಭಮೇಳದಲ್ಲೇ ಮುಹೂರ್ತ:ಕಳೆದ 2024ರಲ್ಲಿ ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿ ಕಿತ್ತಗನೂರಿನಲ್ಲಿ ಸರ್ವೆ ನಂ.212ರ 12 ಗುಂಟೆ ಭೂಮಿಯನ್ನು ಬಿಕ್ಲು ಶಿವ ಒತ್ತುವರಿ ಮಾಡಿಕೊಂಡು ಬೇಲಿ ಹಾಕಿದ್ದ. ಈ ಭೂಮಿಯಲ್ಲಿ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿ ಇಬ್ಬರು ಮಹಿಳೆಯರನ್ನು ಆತ ನೇಮಿಸಿದ್ದ. ಆದರೆ ಈ ಭೂಮಿ ಮೇಲೆ ಜಗ್ಗನ ಕಣ್ಣು ಬಿತ್ತು. ಆ ಭೂಮಿ ಕಬಳಿಕೆಗೆ ಯತ್ನಿಸಿದ ಜಗ್ಗ, ಆ ಜಮೀನಿಗೆ ನುಗ್ಗಿ ಬೇಲಿ ಕಿತ್ತು ಹಾಕಿ ದಾಂಧಲೆ ನಡೆಸಿದ್ದ. ಇದೇ ವಿಚಾರವಾಗಿ ಬಿಕ್ಲು ಶಿವನಿಗೆ ಜಗ್ಗ ಬೆದರಿಕೆ ಹಾಕಿದ್ದ.
ಈ ಸಂಬಂಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಇದಾದ ಬಳಿಕ ಮಹದೇವಪುರ ಸಮೀಪ ಶಾಸಕ ಬೈರತಿ ಬಸವರಾಜು ಅವರ ಪರಿಚಿತರಿಗೆ ಸೇರಿದ ಜಾಗದ ವಿಚಾರವಾಗಿ ಬಿಕ್ಲು ಶಿವನ ಜತೆ ಮತ್ತೊಂದು ಭೂ ವ್ಯಾಜ್ಯ ನಡೆದಿತ್ತು. ಆಗ ಬಿಕ್ಲು ಶಿವನ ವಿರುದ್ಧ ಮಹದೇವುಪರ ಠಾಣೆಯಲ್ಲಿ ಪ್ರಕರಣ ದಾಖಲಾಯಿತು ಎಂದು ಮೂಲಗಳು ಹೇಳಿವೆ.ಈ ಬೆಳವಣಿಗೆ ಬಳಿಕ ತನಗೆ ಕೆ.ಆರ್.ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜು ಹಾಗೂ ಹೆಣ್ಣೂರು ಜಗ್ಗನಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಪೊಲೀಸ್ ಆಯುಕ್ತರಿಗೆ ಬಿಕ್ಲು ಶಿವ ರಕ್ಷಣೆಗಾಗಿ ಮೊರೆ ಇಟ್ಟಿದ್ದ. ಅಲ್ಲದೆ ಭಾರತೀನಗರ ಠಾಣೆಯಲ್ಲೂ ಆತ ದೂರು ಸಲ್ಲಿಸಿದ್ದ. ಈ ಬಗ್ಗೆ ವಿಚಾರಣೆ ನಡೆಸುವಂತೆ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅವರಿಗೆ ಆಯುಕ್ತರು ಸೂಚಿಸಿದ್ದರು. ಅಂತೆಯೇ ಜಗ್ಗ ಹಾಗೂ ಬಿಕ್ಲು ಶಿವನನ್ನು ವೈಟ್ ಫೀಲ್ಡ್ ವಿಭಾಗದ ಪೊಲೀಸರು ವಿಚಾರಣೆ ನಡೆಸಿದ್ದರು ಎಂದು ತಿಳಿದು ಬಂದಿದೆ.
ಇದೇ ವರ್ಷದ ಫೆಬ್ರವರಿಯಲ್ಲಿ ಉತ್ತರಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆದಿದ್ದ ಮಹಾಕುಂಭ ಮೇಳಕ್ಕೆ ಶಾಸಕ ಬೈರತಿ ಬಸವರಾಜು ಹಾಗೂ ಆಪ್ತರು ತೆರಳಿದ್ದರು. ಈ ತಂಡದಲ್ಲಿ ಜಗ್ಗ ಸಹ ಇದ್ದ. ಕುಂಭಮೇಳಕ್ಕೆ ಹೋದಾಗಲೇ ಬಿಕ್ಲು ಶಿವನ ಹತ್ಯೆ ಸಂಚಿನ ಮಾತುಕತೆ ನಡೆದಿತ್ತು. ಅಷ್ಟರಲ್ಲಿ ಭದ್ರತಾ ಠೇವಣಿ ಬಾಂಡ್ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಶಿವನನ್ನು ಭಾರತೀನಗರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದ ಕೂಡಲೇ ರಾಮಮೂರ್ತಿ ನಗರ ಸಮೀಪ ಬಿಕ್ಲು ಶಿವನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಅಂದು ದುಷ್ಕರ್ಮಿಗಳಿಗೆ ಸೇರಿದ ಬೈಕ್‌ನಲ್ಲಿ ಮಚ್ಚು ಸಹ ಪತ್ತೆಯಾಗಿತ್ತು. ಆದರೆ ರಾಮಮೂರ್ತಿ ನಗರ ಠಾಣೆಗೆ ತನ್ನ ಮೇಲೆ ಕೊಲೆ ಯತ್ನ ನಡೆದಿದೆ ಎಂದು ಶಿವ ದೂರು ನೀಡಿದಾಗ ಪ್ರಕರಣ ದಾಖಲಾಗಿತ್ತು ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.---ಎರಡು ಬಾರಿ ಹತ್ಯೆ ಯತ್ನ:
ಕಿತ್ತಗನೂರನ ಜಮೀನು ವಿವಾದದ ಬಳಿಕ ಜಗ್ಗ ಹಾಗೂ ಬಿಕ್ಲು ಶಿವ ಪರಸ್ಪರ ಕತ್ತಿ ಮಸೆಯುತ್ತಿದ್ದರು. ಅಲ್ಲದೆ, ಈ ವಿವಾದದ ಬಳಿಕ ಯೂಟ್ಯೂಬ್‌ಗಳಲ್ಲಿ ತನ್ನ ವಿರುದ್ಧ ಬಿಕ್ಲು ಶಿವ ವೈಯಕ್ತಿಕ ನಿಂದನೆ ಸುದ್ದಿ ಪ್ರಸಾರ ಮಾಡಿದ್ದ ಎಂದು ಜಗ್ಗ ಕೆರಳಿದ್ದ.ಇದೇ ವೇಳೆ ತನ್ನನ್ನು ಕೊಲೆ ಮಾಡುವುದಾಗಿ ಬಿಕ್ಲು ಹೇಳಿಕೊಂಡಿದ್ದ ಎನ್ನಲಾದ ಸಂಗತಿ ಜಗ್ಗನ ಕಿವಿಗೆ ಬಿದ್ದಿತ್ತು. ಈ ವಿಷಯ ಗೊತ್ತಾಗಿ ಕೆರಳಿದ ಜಗ್ಗ, ಬಿಕ್ಲು ಹತ್ಯೆಗೆ ನಿರ್ಧರಿಸಿದ್ದ. ಆಗ ತನ್ನ ಆಪ್ತರ ಮೂಲಕ ಕೋಲಾರ ಜಿಲ್ಲೆ ಮಾಲೂರಿನ ಹುಡುಗರನ್ನು ಸಜ್ಜುಗೊಳಿಸಿದ. ಈ ಸುಪಾರಿ ಪಡೆದ ಮಾಲೂರಿನ ಗ್ಯಾಂಗ್, ಬಿಕ್ಲುನನ್ನು ಹಿಂಬಾಲಿಸಿ ಚಲನವಲನದ ಮೇಲೆ ನಿಗಾವಹಿಸಿತು. ಎರಡು ಬಾರಿ ಆತನ ಹತ್ಯೆಗೆ ಯತ್ನಿಸಿ ವಿಫಲವಾಯಿತು. ಕೊನೆಗೆ ಜು.15ರಂದು ಹೊಂಚು ಹಾಕಿ ತನ್ನ ಮನೆ ಮುಂದೆ ನಿಂತಿದ್ದ ಬಿಕ್ಲು ಶಿವನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಸಂಚು ಕಾರ್ಯರೂಪಕ್ಕಿಳಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ದಾಳಿ ವೇಳೆ ಶಿವ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಅಲ್ಲಿಂದ ಆರೋಪಿಗಳು ತೆರಳಿದ್ದರು. ಬಳಿಕ ಕೇರಳದಲ್ಲಿದ್ದ ಜಗ್ಗನಿಗೆ ಕರೆ ಮಾಡಿ ಹತ್ಯೆ ಬಗ್ಗೆ ಸಹಚರರು ತಿಳಿಸಿದ್ದರು. ಮರುದಿನ ಹತ್ಯೆ ಸಂಬಂಧ ದಾಖಲಾದ ಎಫ್‌ಐಆರ್‌ನಲ್ಲಿ ತನ್ನ ಹೆಸರು ಉಲ್ಲೇಖ ಗೊತ್ತಾಗಿ ಜಗ್ಗ ದುಬೈಗೆ ಪರಾರಿಯಾಗಿದ್ದ ಎಂದು ಮೂಲಗಳು ಹೇಳಿವೆ.-ಬಾಕ್ಸ್-
ಜಗ್ಗನ ವಿರುದ್ಧ ರೌಡಿ ಪಟ್ಟಿ ರದ್ದುಅಪರಾಧ ಚಟುವಟಿಕೆಗಳ ಹಿನ್ನೆಲೆಯಲ್ಲಿ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಜಗ್ಗನ ವಿರುದ್ಧ ತೆರೆಯಲಾಗಿದ್ದ ರೌಡಿ ಪಟ್ಟಿಯನ್ನು ಪೊಲೀಸರು ರದ್ದುಪಡಿಸಿದ್ದರು. ರೌಡಿಪಟ್ಟಿಯಿಂದ ಜಗ್ಗನ ಹೆಸರು ಕೈ ಬಿಡಲು ಅಂದು ಸಚಿವರಾಗಿದ್ದ ಬೈರತಿ ಬಸವರಾಜು ಪ್ರಭಾವ ಬೀರಿದ್ದರು ಎಂದು ಆರೋಪಿಸಲಾಗಿದೆ.