ಬೆಂಕಿ ನಂದಿಸಲು 120 ಸಿಬ್ಬಂದಿಯಿಂದ 15 ತಾಸು ಹರಸಾಹಸ!

KannadaprabhaNewsNetwork |  
Published : Aug 17, 2025, 01:41 AM IST
Fire 1 | Kannada Prabha

ಸಾರಾಂಶ

ತಿಗಳರಪೇಟೆಯ ಇಕ್ಕಟ್ಟಾದ ಪ್ರದೇಶದಲ್ಲಿ ಅಗ್ನಿ ದುರಂತ ಸಂಭವಿಸಿದ್ದ ಕಟ್ಚಡಗಳಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ದಳದ 120ಕ್ಕೂ ಹೆಚ್ಚಿನ ಸಿಬ್ಬಂದಿ ಸತತ 15 ಗಂಟೆಗಳಿಗೂ ಅಧಿಕ ಹೊತ್ತು ಹರಸಾಹಸ ಪಟ್ಟರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಿಗಳರಪೇಟೆಯ ಇಕ್ಕಟ್ಟಾದ ಪ್ರದೇಶದಲ್ಲಿ ಅಗ್ನಿ ದುರಂತ ಸಂಭವಿಸಿದ್ದ ಕಟ್ಚಡಗಳಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ದಳದ 120ಕ್ಕೂ ಹೆಚ್ಚಿನ ಸಿಬ್ಬಂದಿ ಸತತ 15 ಗಂಟೆಗಳಿಗೂ ಅಧಿಕ ಹೊತ್ತು ಹರಸಾಹಸ ಪಟ್ಟರು.ಅಗ್ನಿಶಾಮಕ ದಳದ ವಾಹನ ಹೋಗಲಾರದಷ್ಟು ಕಿರಿದಾದ ಜಾಗದಲ್ಲಿ ರಕ್ಷಣಾ ಪಡೆಗಳು ಬೆಂಕಿ ನಂದಿಸಲು ಬೆವರು ಹರಿಸಿದರೂ ಬೆಂಕಿ ತೀವ್ರತೆ ಹಾಗೂ ಆ ಕಟ್ಟಡದಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಇಲ್ಲದ ಪರಿಣಾಮ ಕಟ್ಟಡಗಳಲ್ಲಿದ್ದ ಐದು ಜೀವಗಳ ಪ್ರಾಣ ಉಳಿಸಲು ಸಿಬ್ಬಂದಿಗೆ ಸಾಧ್ಯವಾಗಿಲ್ಲ. ಆದರೆ ಅಗ್ನಿ ಜ್ವಾಲೆ ನೆರೆಹೊರೆ ಪ್ರದೇಶಗಳಲ್ಲಿ ಹರಡದಂತೆ ಕ್ಷಿಪ್ರ ಗತಿಯಲ್ಲಿ ತಡೆದು ಕೋಟ್ಯಂತರ ರು. ಮೌಲ್ಯದ ಆಸ್ತಿಪಾಸ್ತಿ ಹಾಗೂ ನೂರಾರು ಜನರ ಬದುಕು ರಕ್ಷಿಸುವಲ್ಲಿ ಅಗ್ನಿಶಾಮಕ ದಳ, ರಾಜ್ಯ ವಿಪತ್ತು ರಕ್ಷಣಾ ಪಡೆ ಹಾಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ತಿಗಳರಪೇಟೆಯ ಮುಖ್ಯರಸ್ತೆಯ ಚಿಕ್ಕ ಒಣಿಯಲ್ಲಿ ವ್ಯಾಪಾರಿ ಮದನ್ ಹಾಗೂ ಅವರ ಪಕ್ಕದ ಮನೆ ಕಟ್ಟಡಗಳಲ್ಲಿ ಬೆಂಕಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದೆ. ಆಗ ಅಕ್ಕಪಕ್ಕದ ಕಟ್ಟಡಗಳಲ್ಲಿದ್ದ ಜನರು, ಮದನ್ ಕುಮಾರ್‌ ಪುರೋಹಿತ್‌ ಕುಟುಂಬದ ಚೀರಾಟ ಕೇಳಿ ಹೊರಬಂದಿದ್ದಾರೆ. ತಕ್ಷಣವೇ ಅಗ್ನಿಶಾಮಕ ದಳ ನಿಯಂತ್ರಣ ಕೊಠಡಿ (100) ಹಾಗೂ ಪೊಲೀಸ್ ನಿಯಂತ್ರಣ ಕೊಠಡಿಗೆ (ನಮ್ಮ-112) ಶನಿವಾರ ನಸುಕಿನ 3.14 ಗಂಟೆಗೆ ಸ್ಥಳೀಯರು ಕರೆ ಮಾಡಿದ್ದಾರೆ.

ವಿಷಯ ತಿಳಿದ ಕೂಡಲೇ ಹೈಗ್ರೌಂಡ್ಸ್ ಅಗ್ನಿಶಾಮಕ ದಳ ಸಿಬ್ಬಂದಿ, ಒಂದು ವಾಹನದಲ್ಲಿ ನೀರು ತುಂಬಿಕೊಂಡು ಕ್ಷಣಾರ್ಧದಲ್ಲಿ ಘಟನಾ ಸ್ಥಳ ತಲುಪಿದ್ದಾರೆ. ಆದರೆ ಅಲ್ಲಿನ ಗಂಭೀರ ಪರಿಸ್ಥಿತಿ ಅರಿತ ಸಿಬ್ಬಂದಿ, ಕೂಡಲೇ ಹಿರಿಯ ಅಧಿಕಾರಿಗಳಿಗೆ ಪರಿಸ್ಥಿತಿ ಬಗ್ಗೆ ಮಾಹಿತಿ ರವಾನಿಸಿದ್ದಾರೆ. ಆಗ ಬೆಂಗಳೂರಿನಲ್ಲಿ ದಶ ದಿಕ್ಕುಗಳಲ್ಲಿರುವ 20 ಅಗ್ನಿಶಾಮಕ ದಳ ಠಾಣೆಯ ಸುಮಾರು 120ಕ್ಕೂ ಹೆಚ್ಚಿನ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಂಕಿ ನಂದಿಸುವ ಕಾರ್ಯಾಚರಣೆಗೆ ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಪೊಲೀಸರು ಸಾಥ್ ಕೊಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್‌, ಅಗ್ನಿಶಾಮಕ ದಳ ಇಲಾಖೆ ಎಡಿಜಿಪಿ ನಂಜುಂಡಸ್ವಾಮಿ, ಡಿಐಜಿ ರವಿ ಡಿ.ಚನ್ನಣ್ಣನವರ್‌, ಹೆಚ್ಚುವರಿ ಆಯುಕ್ತ ವಂಶಿಕೃಷ್ಣ ಹಾಗೂ ಡಿಸಿಪಿ ಹಕೆ ಅಕ್ಷಯ್‌ ಮಚೀಂದ್ರ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ದಟ್ಟ ಹೊಗೆಯಿಂದ ಉಸಿರಾಡದಂಥ ಸ್ಥಿತಿ

ಆದರೆ ಬೆಂಕಿ ಹೊತ್ತಿಕೊಂಡಿದ್ದ ಕಟ್ಟಡಗಳಿಗೆ ಅಗ್ನಿಶಾಮಕ ದಳ ವಾಹನಗಳು ತೆರಳಲು ಸಾಧ್ಯವಾಗಿಲ್ಲ. ಅಲ್ಲದೆ ಹೊಗೆಯಿಂದ ಆ ಪ್ರದೇಶದಲ್ಲಿ ಉಸಿರಾಡಲು ಕಷ್ಟಪಡಬೇಕಾದ ವಾತಾವರಣ ನೆಲೆಸಿತ್ತು. ಇಂಥ ಸಂದಿಗ್ಧ ಪರಿಸ್ಥಿತಿಯನ್ನು ರಕ್ಷಣಾ ಪಡೆಗಳು ಸವಾಲಾಗಿ ಸ್ವೀಕರಿಸಿ ನಿಭಾಯಿಸಿದರು. ತಿಗಳರಪೇಟೆಯ ಮುಖ್ಯರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿ ಒಂದೊಂದು ವಾಹನದಿಂದ ಪೈಪ್‌ಗಳನ್ನು ಸಂಪರ್ಕ ಕಲ್ಪಿಸಿ ಅಗ್ನಿ ದುರಂತಕ್ಕೀಡಾಗಿದ್ದ ಕಟ್ಟಡಗಳಿಗೆ ಸಿಬ್ಬಂದಿ ನೀರು ಪೂರೈಸಿದರು.

16 ಸಾವಿರ ಲೀಟರ್ ಸಾಮರ್ಥ್ಯದ 20 ವಾಹನಗಳು!

ತಲಾ 16 ಸಾವಿರ ಲೀಟರ್ ಸಾಮರ್ಥ್ಯದ 20 ವಾಹನಗಳು ನಿರಂತರವಾಗಿ ನೀರು ಸರಬರಾಜು ಮಾಡಿದ್ದವು. ಈ ಕಾರ್ಯಾಚರಣೆ ನಸುಕಿನ 3.15 ಗಂಟೆಗೆ ಶುರುವಾಗಿ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ. ನಾಲ್ಕು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿ ಮದನ್ ಮೃತದೇಹ ಪತ್ತೆಯಾದರೆ, ಮೂರನೇ ಅಂತಸ್ತಿನ ಅವರ ಮನೆಯಲ್ಲಿ ಪತ್ನಿ ಹಾಗೂ ಮಕ್ಕಳ ಮೃತದೇಹಗಳನ್ನು ಹೊರ ತೆಗೆಯಲಾಯಿತು. ಇನ್ನು ಅವರ ಪಕ್ಕದ ಕಟ್ಟಡದ ಎರಡನೇ ಮಹಡಿಯಲ್ಲಿ ಸುರೇಶ್ ಮೃತದೇಹ ಸಿಕ್ಕಿತು ಎಂದು ಪೊಲೀಸರು ಹೇಳಿದ್ದಾರೆ.ಅಕ್ರಮವಾಗಿ ಗೋದಾಮು ತೆರೆದಿದ್ದೇ ದುರಂತಕ್ಕೆ ಕಾರಣ?ವಸತಿ ಕಟ್ಟಡಗಳಲ್ಲಿ ಅಕ್ರಮವಾಗಿ ಗೋದಾಮು ತೆರೆದಿದ್ದು ಘಟನೆಗೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ನಾಲ್ಕು ಅಂತಸ್ತಿನ ಕಟ್ಟಡದ ಮೂರನೇ ಹಂತದಲ್ಲಿ ವ್ಯಾಪಾರಿ ಮದನ್‌ ಕುಟುಂಬ ವಾಸವಾಗಿದ್ದರೆ, ಅದೇ ಕಟ್ಟಡದ 1 ಮತ್ತು 2ನೇ ಹಂತಗಳಲ್ಲಿ ಮದನ್ ಸೇರಿದಂತೆ ಇತರ ವ್ಯಾಪಾರಿಗಳು ಗೋದಾಮು ಮಾಡಿಕೊಂಡಿದ್ದರು. ಹಾಗೆ ಅವರ ಕಟ್ಟಡದ ಪಕ್ಕದ ಕಟ್ಟಡಗಳಲ್ಲಿ ಸಹ ಗೋದಾಮುಗಳಿದ್ದವು. ಈ ಗೋದಾಮುಗಳಿಗೆ ಪರವಾನಿಗೆ ಸಹ ಪಡೆದಿರಲಿಲ್ಲ. ಅಗ್ನಿ ಸುರಕ್ಷತಾ ವ್ಯವಸ್ಥೆಯನ್ನು ಮಾಲೀಕರು ಮಾಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

PREV

Recommended Stories

ಕರಾವಳಿ, ಮಲೆನಾಡದಲ್ಲಿ ಗಾಳಿಸಹಿತ ಜಡಿ ಮಳೆ : ಶಾಲೆಗಳಿಗೆ ಇಂದು ರಜೆ
ಆರೆಸ್ಸೆಸ್‌ ಭಾರತದ ತಾಲಿಬಾನ್‌: ಹರಿಪ್ರಸಾದ್ ವಿವಾದ