ಗದಗ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಮಧ್ಯಸ್ಥಿಕೆ ಮತ್ತು ಸಂಧಾನ ಯೋಜನಾ ಸಮಿತಿ(ಎಂಸಿಪಿಸಿ), ಭಾರತದ ಸರ್ವೋಚ್ಚ ನ್ಯಾಯಾಲಯದೊಂದಿಗೆ ವಿಶೇಷ ಮಧ್ಯಸ್ಥಿಕೆ ಅಭಿಯಾನ ರಾಷ್ಟ್ರಕ್ಕಾಗಿ 90 ದಿನಗಳ ಕಾರ್ಯಾಚರಣೆಯಲ್ಲಿ ಜಿಲ್ಲೆಯ 123 ಪ್ರಕಣಗಳು ಮಧ್ಯಸ್ಥಿಕೆಯಲ್ಲಿ ಇತ್ಯರ್ಥವಾಗಿವೆ.
271 ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ 45 ಪ್ರಕರಣಗಳು ಮಧ್ಯಸ್ಥಿಕೆಗೆ ಬಂದಿದ್ದು, 7 ಪ್ರಕರಣಗಳು ಇತ್ಯರ್ಥವಾಗಿವೆ. ಚೆಕ್ ಬೌನ್ಸ್‌ನ 2701 ಪ್ರಕರಣಗಳಲ್ಲಿ 309 ಮಧ್ಯಸ್ಥಿಕೆಗೆ ಬಂದಿದ್ದು, ಅದರಲ್ಲಿ 41 ಪ್ರಕರಣಗಳು ಮಧ್ಯಸ್ಥಿಕೆಯ ಮೂಲಕ ಬಗೆಹರಿದಿವೆ. 295 ಕ್ರಿಮಿನಲ್ ಕಾಂಪೊಂಡೆಬಲ್ ಪ್ರಕರಣಗಳಲ್ಲಿ 75 ಪ್ರಕರಣಗಳು ಮಧ್ಯಸ್ಥಿಕೆಗೆ ಬಂದಿದ್ದು, ಅದರಲ್ಲಿ 12 ಪ್ರಕರಣಗಳು ಸಂಧಾನವಾಗಿವೆ. ಅದೇ ರೀತಿ ಸಾಲ ವಸೂಲಾತಿ 478 ಪ್ರಕರಣಗಳಲ್ಲಿ 17 ಪ್ರಕರಣಗಳು ಮಧ್ಯಸ್ಥಿಕೆಗೆ ಬಂದಿದ್ದು, ಅದರಲ್ಲಿ 2 ಪ್ರಕರಣಗಳು ಇತ್ಯರ್ಥವಾಗಿವೆ. 2603 ಪಾಲುವಾಟ್ನಿ ವ್ಯಾಜ್ಯಗಳಲ್ಲಿ 293 ಪ್ರಕರಣಗಳು ಮಧ್ಯಸ್ಥಿಕೆಗೆ ಬಂದಿದ್ದು, ಅದರಲ್ಲಿ 33 ಪ್ರಕರಣಗಳು ಇತ್ಯರ್ಥವಾಗಿವೆ. ಇತರೆ 4214 ಸಿವಿಲ್ ವ್ಯಾಜ್ಯಗಳಲ್ಲಿ 336 ಪ್ರಕರಣಗಳು ಮಧ್ಯಸ್ಥಿಕೆಗೆ ಬಂದಿದ್ದು, ಅದರಲ್ಲಿ 22 ಪ್ರಕರಣಗಳು ಸಂಧಾನಗೊಂಡಿವೆ.ಈ ಅಭಿಯಾನದಲ್ಲಿ ಗದಗ ಜಿಲ್ಲೆಯಲ್ಲಿ ಒಟ್ಟು 123 ಪ್ರಕರಣಗಳು ರಾಜೀ ಮೂಲಕ ಇತ್ಯರ್ಥಗೊಂಡಿರುತ್ತವೆ. ರಾಜ್ಯದ್ಯಂತ ಒಟ್ಟು 1386837 ಪ್ರಕರಣಗಳಲ್ಲಿ 5575 ಪ್ರಕರಣಗಳು ಇತ್ಯರ್ಥವಾಗಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ದಿವಾಣಿ ನ್ಯಾಯಾಧೀಶರಾದ ಸಿ.ಎಸ್. ಶಿವನಗೌಡ್ರ ತಿಳಿಸಿದರು.