ಹೊಳೆಹೊನ್ನೂರು : ಹಾವೇರಿ ಸಮೀಪದ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಎಮ್ಮೆಹಟ್ಟಿ ಗ್ರಾಮದವರು ಮತ್ತವರ ಸಂಬಂಧಿಕರು ಮೃತಪಟ್ಟ ಸುದ್ದಿ ಬರುತ್ತಿದ್ದಂತೆ ಬರಸಿಡಿಲು ಬಡಿದಂತಾಗಿರುವ ಎಮ್ಮೆಹಟ್ಟಿ ಗ್ರಾಮದಲ್ಲೀಗ ದುಃಖವೇ ತುಂಬಿ ಹರಿದಿದೆ.
ಶುಕ್ರವಾರ ಮುಂಜಾನೆ ಅಪಘಾತ ನಡೆದ ಕೆಲವೇ ಹೊತ್ತಿನಲ್ಲಿ ಗ್ರಾಮಕ್ಕೆ ಸುದ್ದಿ ಮುಟ್ಟಿದೆ. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಗರಬಡಿದ ಪರಿಸ್ಥಿತಿ ಕಾಣಿಸಿತ್ತು. ದಿಕ್ಕು ತೋಚದ ಸ್ಥಿತಿಯಲ್ಲಿದ್ದ ಗ್ರಾಮಸ್ಥರಲ್ಲಿ ತೀವ್ರ ದುಃಖ ಕಾಣಿಸಿತು. ಗ್ರಾಮದ ಹಲವಾರು ಮಂದಿ ಸಂಬಂಧಿಕರು ತಕ್ಷಣವೇ ಹಾವೇರಿ ಜಿಲ್ಲಾಸ್ಪತ್ರೆಗೆ ದೌಡಾಯಿಸಿದರು. ಯಾರು ಸತ್ತಿದ್ದಾರೆ, ಯಾರು ಮೃತಪಟ್ಟಿದ್ದಾರೆ ಎಂದು ಸಮರ್ಪಕ ಮಾಹಿತಿ ತಿಳಿಯದೆ ಕಂಗಾಲಾದರು. ಉಳಿದವರ ಕುರಿತು ಕಾಳಜಿ, ಮೃತಪಟ್ಟವರ ಕುರಿತು ದುಃಖ ಅಲ್ಲಿತ್ತು. ಸ್ವಲ್ಪ ಹೊತ್ತಿನ ಬಳಿಕ ಮೃತಪಟ್ಟವರ ಕುರಿತು ಸಮರ್ಪಕ ಮಾಹಿತಿ ಸಿಕ್ಕಿತು.
ದುಃಖದ ನಡುವೆಯೇ ಮುಂದೆ ಆಗಬೇಕಾಗಿರುವ ಕಾರ್ಯದ ಕುರಿತು ಗ್ರಾಮದಲ್ಲಿ ಸಿದ್ಧತೆಗಳು ಆರಂಭಗೊಂಡವು. ಸಂಜೆ ಮೃತದೇಹಗಳು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು, ಸಂಬಂಧಿಕರಲ್ಲಿ ದುಃಖ ಕಟ್ಟೆಯೊಡೆದಿತ್ತು. ಎಮ್ಮೆಹಟ್ಟಿ, ಶಿವಮೊಗ್ಗ, ಭದ್ರಾವತಿ, ಮಾಚೇನಹಳ್ಳಿ, ಕಡೂರಿನವರು ಮೃತಪಟ್ಟಿದ್ದು, ಅಲ್ಲಿಂದ ಸಂಬಂಧಿಕರು ಮೊದಲಿಗೆ ಎಮ್ಮೆಹಟ್ಟಿ ಗ್ರಾಮಕ್ಕೆ ಆಗಮಿಸಿದ್ದರು.
ಶೋಕದಲ್ಲಿ ಮುಳುಗಿದ ಗ್ರಾಮ:
ರಸ್ತೆ ಅಪಘಾತದಲ್ಲಿ13 ಜನ ಮೃತಪಟ್ಟ ಹಿನ್ನೆಲೆಯಲ್ಲಿ ಇಡೀ ಎಮ್ಮೆಹಟ್ಟಿ ಗ್ರಾಮವೇ ಶೋಕದಲ್ಲಿ ಮುಳುಗಿತ್ತು. ಅಪಘಾತದಲ್ಲಿ ಮೃತರಾದ 13 ಜನರ ಮೃತದೇಹಗಳನ್ನು ಸಾರ್ವಜನಿಕರ ವೀಕ್ಷಣೆಗೆಂದು ಎಮ್ಮೆಹಟ್ಟಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಮಿಯಾನ ಹಾಕಿಸಿ ಜನರ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು.
ಸಾವಿನ ವಿಷಯ ತಿಳಿಯುತ್ತದ್ದಂತೆ ಸುತ್ತಮುತ್ತಲಿನ ಗ್ರಾಮದ ಜನರು ಸಾಗರೋಪಾದಿಯಲ್ಲಿ ಹರಿದು ಬಂದು ಶಾಲಾ ಆವರಣದಲ್ಲಿ ಜಮಾಯಿಸಿದ್ದರು. ಮೃತರ ಅಂತ್ಯಕ್ರಿಯೆ ಯನ್ನು ಗ್ರಾಮದ ರುದ್ರಭೂಮಿಯಲ್ಲಿ ಒಂದೇ ಕಡೆ ನೆರವೇರಿಸಲಾಗುವುದು. ಮಾರಾಠ ಸಮುದಾಯದ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಾಗರದಂತೆ ಹರಿದು ಬಂದ ಜನ:ಭೀಕರ ಅಪಘಾತದಲ್ಲಿ ಮೃತಪಟ್ಟವರ ಶವ ದರ್ಶನಕ್ಕೆ ಎಮ್ಮೆಹಟ್ಟಿ ಗ್ರಾಮ ಶಾಲಾ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರು, ಮಕ್ಕಳು, ವೃದ್ಧರಾದಿಯಾಗಿ ಎಲ್ಲರೂ ಶಾಲಾ ಆವರಣದತ್ತ ಜಮಾಯಿಸಿದ್ದರು. ಸುತ್ತಮುತ್ತಲಿನ ಗ್ರಾಮಗಳಾದ ಕೆರೆಬೀರನಹಳ್ಳಿ, ಅಗಸನಹಳ್ಳಿ, ಅರಹತೊಳಲು, ಹೊಳೆಹೊನ್ನೂರು, ಕನ್ನೆಕೊಪ್ಪ, ಹೊಸಕೊಪ್ಪ, ಕೈಮರ, ಮೂಡಲ ವಿಠಲಾಪುರ, ಜಂಭರಘಟ್ಟ, ಹನುಮಂತಾಪುರ, ಶ್ರೀನಿವಾಸಪುರ, ಆನವೇರಿ, ಮಲ್ಲಾಪುರ, ಮೈದೊಳಲು ಸೇರಿದಂತೆ ಹಲವಾರು ಗ್ರಾಮಗಳ ಸಾವಿರಾರು ಜನ ಮೃತರ ದರ್ಶನಕ್ಕೆ ಆಗಮಿಸಿದ್ದರು. ಮಳೆಯ ನಡುವೆಯೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸಲು ಪೋಲಿಸರು ಹರಸಾಹಸ ಪಡುವಂತಾಯಿತು.
ಮುಗಿಲು ಮುಟ್ಟಿದ ಆಂಕ್ರಂದನ: ಒಂದೇ ಕುಟುಂಬದ ಮೂರು ಜನ ಅಪಘಾತದಲ್ಲಿ ಮೃತಪಟ್ಟಿದ್ದು ಅಂಗವಿಕಲೆ ಮಗಳು ಮಾತ್ರ ಬದುಕುಳಿದಿದ್ದಾಳೆ. ಆಶಾ ಕಾರ್ಯಕರ್ತೆ ವೀಶಾಲಾಕ್ಷಮ್ಮ, ಗಂಡ ನಾಗೇಶ್ ರಾವ್, ಮಗ ಆದರ್ಶ್ ಈ ಮೂವರೂ ಮೃತರಾಗಿದ್ದು ಕಣ್ಣೀರಾಕಲು ಮನೆಯಲ್ಲಿ ಯಾರೂ ಇಲ್ಲದಾಗಿತ್ತು. ಇನ್ನು ಉಳಿದಂತೆ ಬಂಧುಗಳು ಎಲ್ಲರೂ ಒಂದಡೆ ಸೇರಿ ಅಳುತ್ತಿರುವುದು ಎಂತವರಿಗೂ ಕಣ್ಣೀರು ತರಿಸುವಂತಿತ್ತು.
ಅಪಘಾತದಲ್ಲಿ ಬದುಕುಳಿದ ನಾಲ್ವರು:
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಶುಕ್ರವಾರ ನಸುಕಿನವೇಳೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಟಿಟಿ ವಾಹನದಲ್ಲಿದ್ದ 17 ಜನರಲ್ಲಿ 13 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಮೂವರಿಗೆ ತೀವ್ರ ಸ್ವರೂಪದ ಗಾಯ ಆಗಿದ್ದರೆ, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಗಾಯಗೊಂಡವರಿಗೆ ಬ್ಯಾಡಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಪರಶುರಾಮ(42) ಅವರನ್ನು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಎಮ್ಮೆಹಟ್ಟಿ ಗ್ರಾಮದ ನಾಗೇಶರಾವ್(52), ಪತ್ನಿ ಆಶಾ ಕಾರ್ಯಕರ್ತೆ ವಿಶಾಲಾಕ್ಷಿ(46), ಮಗ ವಾಹನ ಚಾಲಕ ಆದರ್ಶ(24), ವಿಶಾಲಾಕ್ಷಿ ತಾಯಿ ಸುಭದ್ರಭಾಯಿ(65), ಶಿವಮೊಗ್ಗ ಗೋಪಾಳ ವಾಸಿ ಟಿಲ್ಲರ್ ಮೆಕಾನಿಕ್ ಪರಶುರಾಮ್ ಪತ್ನಿ ರೂಪಾ(32), ಡಿ.ಬಿ.ಹಳ್ಳಿ ಕಾಲೋನಿ ವಾಸಿ ಮಂಜುಳಾ ಬಾಯಿ(57), ಮಗ ಅರುಣ(28), ಮಗಳು ಅಂಜಲಿ (26), ಅಂಜಲಿ ಮಕ್ಕಳು ಆರ್ಯ (6), ನಂದನ್(3), ಸಂಬಂಧಿ ಭಾಗ್ಯಮ್ಮ(46), ಮಗಳು ಪುಟ್ಬಾಲ್ ಆಟಗಾರ್ತಿ ಮಾನಸ(24), ಹನುಮಂತಾಪುರ ಗ್ರಾಮದ ಮಂಜುಳಾ (50) ಮೃತಪಟ್ಟಿದ್ದಾರೆ.
ನಾಗೇಶ್‍ರಾವ್ ಮಗಳು ವಿಶೇಷ ಚೇತನೆ ಅರ್ಪಿತಾ(18), ಶಿವಮೊಗ್ಗ ಗೋಪಾಳ ವಾಸಿ ಟಿಲ್ಲರ್ ಮೆಕಾನಿಕ್ ಪರಶುರಾಮ್(40), ಪುಣ್ಯಬಾಯಿ ಯಾನೆ ಅನ್ನಪೂರ್ಣ (65), ಗೌತಮ್(15) ಬದುಕುಳಿದಿದ್ದಾರೆ. ಘಟನೆ: ಎಮ್ಮೆಹಟ್ಟಿ ಗ್ರಾಮದ ನಾಗೇಶ್‍ರಾವ್ ಅವರ ಮಗ ಆದರ್ಶ ಇತ್ತೀಚೆಗೆ ಟೆಂಪೋ ಟ್ರಾವೆಲರ್(ಟಿಟಿ) ವಾಹನವೊಂದನ್ನು ಖರೀದಿಸಿದ್ದನು. ವಾಹನದ ಪೂಜೆಗೆಂದು ಮನೆ ದೇವತೆ ಮಹರಾಷ್ಟ್ರದ ಶ್ರೀ ಮಾಯಮ್ಮದೇವಿ ಹಾಗೂ ಸವದತ್ತಿ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಹೋಗಿ ಬರಲೆಂದ ಸೋಮವಾರ ಗ್ರಾಮದಿಂದ ನಾಗೇಶ್‍ರಾವ್ ಅವರ ಕುಟುಂಬದವರು ಹಾಗೂ ಹತ್ತಿರದ ಸಂಬಂಧಿಕರು ಕೂಡಿ ಟಿಟಿ ವಾಹನದಲ್ಲಿ ತೆರಳಿದ್ದರು. ಒಂದೆರಡು ದಿವಸ ಸುತ್ತಾಡಿ ದೇವರ ಪೂಜೆ ಮಾಡಿಸಿ ದರ್ಶನ ಪಡೆದು ಗುರುವಾರ ರಾತ್ರಿ ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದರು. ಮಾರ್ಗ ಮದ್ಯೆ ಶುಕ್ರವಾರ ನಸುಕಿನವೇಳೆ ಚಾಲಕ ಆದರ್ಶನು ನಿದ್ರೆಗೆ ಜಾರಿದ್ದರಿಂದ ಟಿಟಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಯೊಂದಕ್ಕೆ ಡಿಕ್ಕೆ ಹೊಡೆದಿದೆ ಎಂದು ಹೇಳಲಾಗಿದೆ. ಅಪಘಾತದ ತೀವ್ರತೆಯಿಂದಾಗಿ ಟಿಟಿ ವಾಹನವು ಅರ್ಧದಷ್ಟು ಲಾರಿಯೊಳಗೆ ಜಖಂ ಆಗಿದೆ. ಸ್ಥಳದಲ್ಲೆ ಮೃತಪಟ್ಟ ದೇಹಗಳು ಚಿದ್ರಗೊಂಡಿದ್ದವು. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಆಗಮಿಸಿ ಸಾರ್ವಜನಿಕರ ಸಹಕಾರದೊಂದಿಗೆ ಮೃತ ದೇಹ ಹೊರತೆಗೆದು ಬದುಕುಳಿದವರನ್ನು ತಕ್ಷಣ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಕಮರಿ ಹೋದ ಅಂಧೆಯ ಸಾಧನೆ
ಶಿವಮೊಗ್ಗ: ಕಣ್ಣು ಇಲ್ಲದೇ ಹೋದ್ರು, ಪುಟ್ಬಾಲ್‌ನಲ್ಲಿ ದೊಡ್ಡ ಸಾಧನೆ ಮಾಡಿದ್ದ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿಯ ಗ್ರಾಮದ ಯುವತಿ ಮಾನಸ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿಯ 13 ಜನ ಮೃತಪಪಟ್ಟವರಲ್ಲಿ ಮಾನಸಕೂಡ ಒಬ್ಬರಾಗಿದ್ದು, ಮಾನಸ ಹುಟ್ಟಿನಿಂದ ಅಂಧತ್ವ ಹೊಂದಿದ್ದ ಯುವತಿ. ಆದರೆ, ತನ್ನ ನ್ಯೂನತೆಯನ್ನೂ ಲೆಕ್ಕಿಸದೆ ಸಾಧಿಸಿದ ತೋರಿಸಿದ ಛಲಗಾತಿ. ಪುಟ್‌ಬಾಲ್‌ನಲ್ಲಿ ಹೆಚ್ಚು ಆಸಕ್ತಿಹೊಂದಿದ್ದ ಮಾನಸ ರಾಜ್ಯ, ರಾಷ್ಟ್ರಮಟ್ಟದ ಅಂಧರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಪಂಜಾಬ್ ಹಾಗೂ ದೆಹಲಿ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಅಷ್ಟೇ ಅಲ್ಲ ಭಾರತದ ಅಂಧರ ಫುಟ್ಬಾಲ್ ತಂಡದ ನಾಯಕಿಯಾಗಿದ್ದರು. ಇಷ್ಟಾದರೂ ಸಾಧನೆ ಬಗ್ಗೆ ಆಕೆಗೆ ತೃಪ್ತಿ ಇರಲಿಲ್ಲ. ಹೀಗಾಗಿ ಇನ್ನೂ ದೊಡ್ಡ ಸಾಧನೆಯನ್ನೇ ಮಾಡಬೇಕು ಎನ್ನುವ ಆಕೆಯ ಛಲ ಐಎಎಸ್ ಮಾಡುವತ್ತ ಸೆಳೆದಿತ್ತು. ಆದರೆ, ಆಕೆಯ ವಿಧಿಯೇ ಬೇರೆಯಾಗಿತ್ತು. ಈ ಯುವ ಪ್ರತಿಭೆ ಅಪಘಾತದಲ್ಲಿ ಮೃತಪಟ್ಟಿರುವುದು ಹೃದಯಕಲುಕುವಂತಿದೆ.
ಮಾತ್ರವಲ್ಲ ಬ್ರೈಲಿ ಲಿಪಿಯಲ್ಲಿ ಎಂಎಸ್ಸಿ ಮುಗಿಸಿ ಐಎಎಸ್ ಮಾಡಲು ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದರು. ಈ ನಡುವೆ ತನ್ನ ಮಾವನ ಮಗನ ಹೊಸ ಟಿಟಿ ವಾಹನ ಪೂಜೆಗೆ ದೇವಸ್ಥಾನಕ್ಕೆ ತೆರಳಲು ಬೆಂಗಳೂರಿನಿಂದ ಗ್ರಾಮಕ್ಕೆ ಬಂದಿದ್ದಳು. ಸಂಬಂಕರೊಂದಿಗೆ ಟಿಟಿಯಲ್ಲಿ ಮಾನಸ ಕೂಡ ತೆರಳಿದ್ದರು. ವಿಯಾಟಕ್ಕೆ ಬಲಿಯಾಗಿದ್ದು ಮಾನಸ ಕಂಡ ಕನಸು ನನಸಾಗಿಯೇ ಉಳಿದ್ದದ್ದು ಮಾತ್ರ ವಿಪರ್ಯಾಸ. ಆಸರೆ ಕಳೆದುಕೊಂದ ಅಂಗವಿಕಲೆ ಅರ್ಪಿತಾಹೊಳೆಹೊನ್ನೂರು : ಗರ್ಭಿಣಿ, ಬಾಣಂತಿಯರಿಗೆ ಆಸರೆಯಾಗಿದ್ದ ಆಶಾ ಕಾರ್ಯಕರ್ತೆ ವಿಶಾಲಾಕ್ಷಮ್ಮನ ಮಗಳು 15 ವರ್ಷದ ಅರ್ಪಿತಾ ತನ್ನ ಕುಟುಂಬದ ಎಲ್ಲರನ್ನೂ ಕಳೆದುಕೊಂಡು ಅನಾಥೆಯಾಗಿದ್ದಾಳೆ.ಹುಟ್ಟು ಅಂಗವಿಕಲೆಯಾದ ಈ ಹುಡುಗಿ ಸ್ವಲ್ಪ ತೊದಲುತ್ತಾ ಮಾತನಾಡುತ್ತಾಳೆ. ಜೊತೆಗೆ ಬುದ್ದಿಮಾಂದ್ಯಳು. ಇಷ್ಟು ದಿನ ಅಪ್ಪ, ಅಮ್ಮ ಮತ್ತು ಅಣ್ಣನ ಆಸರೆಯಲ್ಲಿದ್ದ ಅರ್ಪಿತಾ ಅಪಘಾತದಲ್ಲಿ ತನ್ನವರೆಲ್ಲರನ್ನೂ ಕಳೆದುಕೊಂಡಿದ್ದಾಳೆ.
ಆರ್ಥಿಕವಾಗಿಯೂ ಈ ಕುಟುಂಬ ಅಷ್ಟು ಸಮರ್ಥವಾಗಿಲ್ಲ. ಒಂದು 10 ಗುಂಟೆ ಜಮೀನಿದ್ದು, ಒಂದು ಹಳೆಯ ಹೆಂಚಿನ ಮನೆ ಮಾತ್ರ ಇದೆ. ಮನೆಯಲ್ಲಿ ದುಡಿಯುತ್ತಿದ್ದ ಎಲ್ಲರನ್ನೂ ಕಳೆದುಕೊಂಡಿರುವ ಈಕೆ ಅಪಘಾತದಲ್ಲಿ ಬದುಕುಳಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸಾಮೂಹಿಕವಾಗಿ ಅಂತ್ಯ ಸಂಸ್ಕಾರ
ಹೊಳೆಹೊನ್ನೂರು : ಅಪಘಾತದಲ್ಲಿ ಮೃತಪಟ್ಟ 13 ಜನರಲ್ಲಿ 9 ಶವಗಳನ್ನು ಎಮ್ಮಹಟ್ಟಿ ಗ್ರಾಮದಲ್ಲಿ ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ಮಾಡಲಾಯಿತು.13 ಎಮ್ಮೆಹಟ್ಟಿ ಗ್ರಾಮದ 9 ಜನರನ್ನು ಅದೇ ಗ್ರಾಮದ ರುದ್ರ ಭೂಮಿಯಲ್ಲಿ ಒಂದರ ಪಕ್ಕ ಇನ್ನೊಂದರಂತೆ ಚಿತೆಯನ್ನು ಸಿದ್ಧಪಡಿಸಿ ಸಾಮೂಹಿಕವಾಗಿ 9 ಶವಗಳನ್ನು ದಹನ ಮಾಡಲಾಯಿತು.
ಇನ್ನುಳಿದಂತೆ ಅರುಣ್ ಏನ್ನುವ ವ್ಯಕ್ತಿಯ ಶವವನ್ನು ಮೈದೊಳಲು ಗ್ರಾಮದಲ್ಲಿ ಮತ್ತು ತಾಯಿ ಅಂಜಲಿ, ಮಕ್ಕಳಾದ ಆರ್ಯ ಮತ್ತು ನಂದನ್ ಶವಗಳನ್ನು ಅವರ ಸ್ವಗ್ರಾಮ ಬೀರೂರಿಗೆ ತೆಗೆದುಕೊಂಡು ಹೋಗಿ ಸಂಸ್ಕಾರ ಮಾಡಲಾಯಿತು.